- ಇಡೀ ಮೈದಾನವೇ ತ್ಯಾಜ್ಯಮಯ । ಸ್ವಚ್ಛತಾ ಅಭಿಯಾನಕ್ಕೆ ಅಪವಾದ
ಕನ್ನಡಪ್ರಭ ವಾರ್ತೆ, ಶೃಂಗೇರಿ
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ, ಐತಿಹಾಸಿಕ, ಪ್ರವಾಸಿ ಕ್ಷೇತ್ರಗಳಲ್ಲಿ ಒಂದಾದ ಶೃಂಗೇರಿಗೆ ದೇಶದ ವಿವಿಧೆಡೆಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಕ್ಷೇತ್ರ ಇದೀಗ ತ್ಯಾಜ್ಯದ ಸಮಸ್ಯೆ ಒಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ತುಂಗಾ ನದಿ ಸೇರುತ್ತಿರುವ ಈ ತ್ಯಾಜ್ಯದಿಂದ ನೀರು ಕಲುಷಿತಗೊಳ್ಳುತ್ತಿದ್ದರೂ ಇದರ ತಡೆಗೆ ಯಾರೂ ಕ್ರಮ ವಹಿಸದಿರುವುದು ನಿಜಕ್ಕೂ ದುರಂತ.ಸುಮಾರು 3925 ಜನಸಂಖ್ಯೆಯ ಶೃಂಗೇರಿ ಪಟ್ಟಣ 11 ವಾರ್ಡಗಳನ್ನು ಹೊಂದಿದೆ. ವರ್ಷಕ್ಕೆ 80 ಲಕ್ಷ ದಿಂದ 1 ಕೋಟಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಪ್ರಮುಖ ಸಂಪರ್ಕ, ಜನ ನಿಬಿಡ, ವಾಹನ ನಿಲುಗಡೆ ಸ್ಥಳವಾದ ಗಾಂಧಿ ಮೈದಾನ ಪ್ರದೇಶ ಕಸಕಡ್ಡಿ, ಪ್ಲಾಸ್ಟಿಕ್, ತ್ಯಾಜ್ಯಗಳಿಂದ ಸಂಪೂರ್ಣ ಕಲುಷಿತಗೊಂಡು ಸ್ವಚ್ಛತೆ ಕಾಣದೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಅಪವಾದವಾಗಿದೆ.
ತುಂಗಾನದಿ ದಡದ ಸಮೀಪವೇ ಈ ಮೈದಾನದ ಕಸ ಮಳೆ ಬಂದರೆ ತುಂಗೆ ಒಡಲಿಗೆ ಸೇರುತ್ತಿದೆ. ಗಂಗಾ ಸ್ನಾನಂ, ತುಂಗಾ ಪಾನ ಎಂಬ ನಾಣ್ಣುಡಿಯಂತೆ ಶೃಂಗೇರಿಗೆ ಕುಡಿಯಲು ತುಂಗಾ ನದಿ ನೀರೆ ಆಧಾರ. ಪಶ್ಚಿಮ ಘಟ್ಟ ಸಹ್ಯಾದ್ರಿ ಪರ್ವತ ಗಳ ತಪ್ಪಲಲ್ಲಿ ಹುಟ್ಟಿ ಕೆರೆಕಟ್ಟೆ, ಶೃಂಗೇರಿ ಮೂಲಕ ಶಿವಮೊಗ್ಗ ಹರಿಹರ ತುಂಗಾಭದ್ರಾ ಜಲಾಶಯಕ್ಕೆ ಸೇರುವ ತುಂಗಾನದಿ ಮಲೆನಾಡಿನ ಜೀವನದಿ. ಆದರೆ ಶೃಂಗೇರಿ ಗಾಂಧಿ ಮೈದಾನದ ತ್ಯಾಜ್ಯ, ಪಟ್ಟಣದ ಡ್ರೈನೇಜ್ ಸಹಿತ ಕೊಳಚೆ ನೀರು ಎಲ್ಲವೂ ತುಂಗಾ ನದಿಗೆ ಸೇರುತ್ತಿರುವುದರಿಂದ ಪರಿಸರ, ಆರೋಗ್ಯದ ಮೇಲೆಯೂ ಪರಿಣಾಮ ಉಂಟಾಗಿದೆ.
ಇದೇ ಮೈದಾನದಲ್ಲಿರುವ ಒಂದು ಪಾರ್ಕ್ ಕುಡುಕರು, ಸೋಮಾರಿಗಳ ಅಡ್ಡೆಯಾಗಿದೆ. ಇದು ಕೂಡ ಸಂಪೂರ್ಣ ಕಸದಿಂದ ತುಂಬಿದ್ದು. ಪಾರ್ಕ್ ಒಳಗೂ ಪ್ಲಾಸ್ಟಿಕ್, ಬಾಟಲ್‌ಗಳ ರಾಶಿಯೇ ಬಿದ್ದಿದೆ. ಇಡೀ ಪರಿಸರವೇ ಗಬ್ಬುನಾರುತ್ತಿದೆ. ಪಾರ್ಕ್ ದುರಸ್ಥಿ ಕಾಣದೇ ಹಲವು ವರ್ಷಗಳೇ ಕಳೆದಿವೆ. ಸ್ವಚ್ಛ ಪರಿಸರಕ್ಕೆ ಅಪವಾದವಾದಂತಿದೆ.
ಕೆಲ ತಿಂಗಳ ಹಿಂದೆ 2-3 ಬಾರಿ ತ್ಯಾಜ್ಯ ಸಂಗ್ರಹಿಸಿ ವಿಲೆವಾರಿ ಮಾಡಲಾಗಿತ್ತು. ಆದರೆ ಈ ಕರಾಬು ಪ್ರದೇಶವೆಂದು ಘೋಷಿಸಿ ದ್ದರಿಂದ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಪಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಾಲೂಕು ಆಡಳಿತ ಈ ಬಗ್ಗೆ ಮೌನವಹಿಸಿದೆ.
ಯಾವ ಆಡಳಿತ ವಿದ್ದರೂ ಸ್ವಚ್ಛತೆ ಮರೀಚಿಕೆ
ಇತ್ತ ಪಟ್ಟಣ ಪಂಚಾಯಿತಿ ತಮ್ಮ ಸುಪರ್ದಿಗೆ ಸೇರಲ್ಲವೆಂದು ತ್ಯಾಜ್ಯ ಸಂಗ್ರಹ, ವಿಲೇವಾರಿ ನಿಲ್ಲಿಸಿದೆ. ಅತ್ತ ತಾಲೂಕು ಆಡಳಿತ ತನ್ನ ವ್ಯಾಪ್ತಿಯಲ್ಲಿದ್ದರೂ ತ್ಯಾಜ್ಯ ನಿರ್ವಹಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಗಾಂಧೀ ಮೈದಾನದಲ್ಲಿ ಮಾತ್ರ ದಿನೇ ದಿನೇ ತ್ಯಾಜ್ಯ ರಾಶಿ ಸಂಗ್ರಹ ವಾಗುತ್ತಿದೆ. ಯಾವುದೇ ಅಧಿಕಾರಿಯಾಗಲೀ, ಜನಪ್ರತಿನಿಧಿ ಯಾಗಲೀ ಗಾಂಧೀ ಮೈದಾನದ ಸ್ವಚ್ಛತೆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ.--ಕೋಟ್--
- ಅಜಿತ್. ಸ್ಥಳಿಯ ನಿವಾಸಿ.--
ಪಟ್ಟಣ ಪಂಚಾಯಿತಿಯೋ, ತಾಲೂಕು ಆಡಳಿತವೋ, ಕರಾಬು ಪ್ರದೇಶವೋ ಎಂಬುದೆಲ್ಲ ಮುಖ್ಯವಲ್ಲ. ಪರಿಸರ ಸ್ವಚ್ಛತೆ ಮುಖ್ಯ. ಈ ಸಮಸ್ಯೆ ನಿವಾರಿಸಿ ಸ್ವಚ್ಛತೆ ಆದ್ಯತೆ ನೀಡಲು ಮುಂದಾಗಬೇಕು-ರಾಮಣ್ಣ.ಸ್ಥಳೀಯ ನಿವಾಸಿ.
14 ಶ್ರೀ ಚಿತ್ರ 1-ಶೃಂಗೇರಿ ಗಾಂಧಿ ಮೈದಾನದ ತುಂಗಾ ನದಿ ದಡದಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ರಾಶಿ.14 ಶ್ರೀ ಚಿತ್ರ 2-ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ, ಕಸದ ರಾಶಿ.