ಬೆಂಗಳೂರು : ರಾಜ್ಯಾದ್ಯಂತ ಸರ್ಕಾರಿ ಉದ್ಯೋಗದಲ್ಲಿ ಕೆಲಸ ಮಾಡುವ ಮಹಿಳೆಯರು ಸೇರಿ ಇಡೀ ದೇಶದಲ್ಲಿ ಮೊದಲ ಬಾರಿಗೆ ಐಟಿ-ಬಿಟಿ, ಖಾಸಗಿ ಕಂಪನಿ, ಕೈಗಾರಿಕೆ, ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ತಿಂಗಳಿಗೆ ಒಂದು ದಿನದಂತೆ ವಾರ್ಷಿಕ 12 ದಿನಗಳ ವೇತನ ಸಹಿತ ಋತುಚಕ್ರ ರಜೆ ನೀಡುವ ‘ಋತುಚಕ್ರ ರಜೆ ನೀತಿ - 2025’ ಜಾರಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈಗಾಗಲೇ ಒಡಿಶಾ, ಬಿಹಾರ ಹಾಗೂ ಕೇರಳ ರಾಜ್ಯಗಳಲ್ಲಿ ಋತುಚಕ್ರ ರಜೆ ನೀತಿ ಜಾರಿಯಲ್ಲಿದ್ದು, ಕೇವಲ ಸರ್ಕಾರಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಮಾತ್ರ ಅನ್ವಯಿಸಲಾಗಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಿಗಳಿಗೂ ಋತುಚಕ್ರ ರಜೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಸ್ತಾವನೆ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದು, ಋತು ಚಕ್ರ ರಜೆ ನೀಡುವ ಸಂಬಂಧ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್. ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ಶಿಫಾರಸು ಮಾಡಿತ್ತು.
ಮುಟ್ಟಿನ ಅವಧಿಯಲ್ಲಿ ಮಹಿಳೆಯರಲ್ಲಿ ಆಗುವ ಶಾರೀರಿಕ ಬದಲಾವಣೆ, ಅನುಭವಿಸುವ ಸಂಕಷ್ಟ, ಸವಾಲು, ವಿಶ್ರಾಂತಿಯ ಅಗತ್ಯತೆ, ಕೆಲಸದ ಸ್ಥಳದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ನಿರ್ಧಾರ ಮಾಡಿದೆ.
ಸರ್ಕಾರದ ಮಾತೃ ಹೃದಯದ ನಿರ್ಧಾರ-ಸಿಎಂ:
ಸಂಪುಟ ಸಭೆ ನಿರ್ಣಯದ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗುವ ಸವಾಲುಗಳು, ಅವರು ಅನುಭವಿಸುವ ಮಾನಸಿಕ ಹಾಗೂ ದೈಹಿಕ ನೋವು, ಸಂಕಟ ಅರಿತು ಈ ವೇಳೆ ಅವರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವ ತೀರ್ಮಾನ ಕೈಗೊಂಡಿದ್ದೇವೆ. ಸರ್ಕಾರ ತನ್ನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮಾತೃ ಹೃದಯ ಹೊಂದಿರುವುದಕ್ಕೆ ಇದು ಸಾಕ್ಷಿ ಎಂದು ಹೇಳಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹೇಗಿದೆ?
ಬಿಹಾರ: ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಮಾಸಿಕ 2 ದಿನ ವೇತನಸಹಿತ ರಜೆ. 1992ರಲ್ಲಿ ಲಾಲು ಪ್ರಸಾದ್ ಯಾದವ್ ಸಿಎಂ ಆಗಿದ್ದಾಗ ಜಾರಿಗೆ ಬಂದ ಯೋಜನೆ ಈಗಲೂ ಜಾರಿಯಲ್ಲಿದೆ. ಖಾಸಗಿ ಉದ್ಯೋಗಿಗಳಿಗೆ ಇಲ್ಲ.ಕೇರಳ: ಐಟಿಐ ವಿದ್ಯಾರ್ಥಿನಿಯರಿಗೆ ತಿಂಗಳಲ್ಲಿ 2 ದಿನ ರಜೆ ನೀಡಲಾಗುತ್ತಿದೆ. 2023ರಿಂದ ಇದು ಜಾರಿಗೆ ಬಂದಿದೆ.ಒಡಿಶಾ: 2024ರ ನವೆಂಬರ್‌ನಿಂದ ಋತುಚಕ್ರ ರಜೆ ಜಾರಿಗೆ ಬಂದಿದೆ. ಇದು ಸರ್ಕಾರಿ ನೌಕರರಿಗೆ ಮಾತ್ರ ಸೀಮಿತ.ಸಿಕ್ಕಿಂ: ಹೈಕೋರ್ಟ್ ಸಿಬ್ಬಂದಿಗೆ ಮಾತ್ರ 2024ರಿಂದ ಋತುಚಕ್ರ ರಜೆ ಜಾರಿಯಲ್ಲಿದೆ
ನಮ್ಮದು ಮಾತೃಹೃದಯ
ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗುವ ಸವಾಲುಗಳು, ಅವರು ಅನುಭವಿಸುವ ಮಾನಸಿಕ ಹಾಗೂ ದೈಹಿಕ ನೋವು, ಸಂಕಟ ಅರಿತು ಈ ವೇಳೆ ಅವರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವ ತೀರ್ಮಾನ ಕೈಗೊಂಡಿದ್ದೇವೆ. ಸರ್ಕಾರ ತನ್ನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮಾತೃ ಹೃದಯ ಹೊಂದಿರುವುದಕ್ಕೆ ಇದು ಸಾಕ್ಷಿ.
- ಸಿದ್ದರಾಮಯ್ಯ, ಮುಖ್ಯಮಂತ್ರಿ