ಅನ್ನಭಾಗ್ಯದ ಅಕ್ಕಿ ಕಟ್‌, ಸಿಗಲಿದೆ ಇಂದಿರಾ ಕಿಟ್‌

KannadaprabhaNewsNetwork |  
Published : Oct 10, 2025, 01:00 AM ISTUpdated : Oct 10, 2025, 07:15 AM IST
ಅಕ್ಕಿ | Kannada Prabha

ಸಾರಾಂಶ

ರಾಜ್ಯದಲ್ಲಿ ಬಿಪಿಎಲ್‌ ಹಾಗೂ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ನೀಡುತ್ತಿದ್ದ ತಲಾ 10 ಕೆ.ಜಿ. ಅಕ್ಕಿ ಬದಲು ತಲಾ 5 ಕೆ.ಜಿ. ಅಕ್ಕಿ ಹಾಗೂ ತೊಗರಿ ಬೇಳೆ, ಹೆಸರು ಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಒಳಗೊಂಡ ‘ಇಂದಿರಾ ಆಹಾರ ಕಿಟ್‌’ ವಿತರಿಸಲು  ನಿರ್ಧಾರ 

 ಬೆಂಗಳೂರು :  ರಾಜ್ಯದಲ್ಲಿ ಬಿಪಿಎಲ್‌ ಹಾಗೂ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ನೀಡುತ್ತಿದ್ದ ತಲಾ 10 ಕೆ.ಜಿ. ಅಕ್ಕಿ ಬದಲು ತಲಾ 5 ಕೆ.ಜಿ. ಅಕ್ಕಿ ಹಾಗೂ ತೊಗರಿ ಬೇಳೆ, ಹೆಸರು ಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಒಳಗೊಂಡ ‘ಇಂದಿರಾ ಆಹಾರ ಕಿಟ್‌’ ವಿತರಿಸಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

‘ಇಂದಿರಾ ಆಹಾರ ಕಿಟ್‌’ ತಲಾ 1 ಕೆ.ಜಿ. ತೊಗರಿ ಬೇಳೆ, ಹೆಸರು ಕಾಳು, 1 ಲೀಟರ್‌ ಅಡುಗೆ ಎಣ್ಣೆ, ತಲಾ 1 ಕೆ.ಜಿ. ಸಕ್ಕರೆ ಹಾಗೂ ಉಪ್ಪು ಹೊಂದಿರಲಿದೆ. ಈ ಆಹಾರ ಕಿಟ್‌ ಹಂಚಿಕೆಯನ್ನು ಪಡಿತರ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಒಬ್ಬರು ಅಥವಾ ಇಬ್ಬರು ಸದಸ್ಯರು ಮಾತ್ರ ಇರುವ ಕುಟುಂಬಕ್ಕೆ ತಲಾ ಅರ್ಧ ಕೆ.ಜಿ.ಯಂತೆ 2.5 ಕೆ.ಜಿಯ ಕಿಟ್‌ ನೀಡಲಾಗುವುದು. ಮೂರು ಅಥವಾ ನಾಲ್ಕು ಮಂದಿ ಸದಸ್ಯರ ಕುಟುಂಬಕ್ಕೆ ತಲಾ ಒಂದು ಕೆ.ಜಿ.ಯಂತೆ ಐದು ಕೆ.ಜಿ. ತೂಕದ ಕಿಟ್‌ ನೀಡಲಾಗುವುದು. 5 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ತಲಾ 1.5 ಕೆ.ಜಿ.ಯಂತೆ 7.5 ಕೆ.ಜಿ. ಯ ಆಹಾರ ಕಿಟ್‌ ನೀಡಲು ತೀರ್ಮಾನಿಸಲಾಗಿದೆ.

ಗುರುವಾರ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹೆಚ್ಚುವರಿ 5 ಕೆ.ಜಿ. ಅಕ್ಕಿ ದುರ್ಬಳಕೆ, ಕಾಳಸಂತೆಯಲ್ಲಿ ಮಾರಾಟ ಆಗುತ್ತಿತ್ತು. ಹೀಗಾಗಿ ಜನರಿಗೆ ಅನುಕೂಲವಾಗಲು ಪೌಷ್ಟಿಕ ಆಹಾರ ಕಿಟ್‌ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಏನಿದು ಇಂದಿರಾ ಆಹಾರ ಕಿಟ್?:

ರಾಜ್ಯದಲ್ಲಿ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ 5 ಕೆ.ಜಿ. ಅಕ್ಕಿ ಜತೆಗೆ ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ಸೇರಿಸಿ ಒಟ್ಟು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಇದರಿಂದ ಪ್ರತಿ ಫಲಾನುಭವಿಗೆ ತಿಂಗಳಿಗೆ ಒಟ್ಟು 10 ಕೆ.ಜಿ. ಅಕ್ಕಿಯಂತೆ ಒಂದು ಕುಟುಂಬಕ್ಕೆ ಅಂದಾಜು 40 ರಿಂದ 50 ಕೆ.ಜಿ. ಅಕ್ಕಿ ಸಿಗುತ್ತಿತ್ತು. ಆದರೆ ಇದು ಕುಟುಂಬದ ಅವಶ್ಯಕತೆಗಿಂತ ಹೆಚ್ಚಾಗಿದ್ದು, ಬಹುತೇಕ ಸಂದರ್ಭಗಳಲ್ಲಿ ಹೆಚ್ಚುವರಿ ಅಕ್ಕಿ ದುರುಪಯೋಗ ಇಲ್ಲವೇ ಕಾಳಸಂತೆಯಲ್ಲಿ ಮಾರಾಟ ಆಗುತ್ತಿತ್ತು.

ಅಕ್ಕಿಯು ಕಾರ್ಬೋ ಹೈಡ್ರೇಟ್‌ ಪೌಷ್ಟಿಕಾಂಶವನ್ನು ಮಾತ್ರ ದೇಹಕ್ಕೆ ಒದಗಿಸಲಿದೆ. ಅಗತ್ಯವಿರುವ ಕೊಬ್ಬಿನಾಂಶ, ಪ್ರೊಟೀನ್‌ ದೊರೆಯುತ್ತಿಲ್ಲ. ಹೀಗಾಗಿ ಎಲ್ಲ ಪೌಷ್ಟಿಕಾಂಶ ಒಳಗೊಳ್ಳುವ ಸಮತೋಲಿತ ಆಹಾರ ಒದಗಿಸಲು ಇಂದಿರಾ ಆಹಾರ ಕಿಟ್‌ ಒದಗಿಸಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಸಂಪುಟ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

630 ಕೋಟಿ ರು. ಉಳಿತಾಯ-ಸಮರ್ಥನೆ:

ಬೇಳೆ, ಕಾಳು, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ಖರೀದಿಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 500 ರು.ಗಳಿಂದ 1,000 ರು. ಖರ್ಚಾಗುತ್ತದೆ. ಆಹಾರ ಕಿಟ್‌ ವಿತರಣೆಯಿಂದ 1.26 ಕೋಟಿ ಕಾರ್ಡುದಾರರಿಗೆ ಒಟ್ಟಾರೆ ಮಾಸಿಕ 630 ಕೋಟಿ ರು. ಉಳಿತಾಯ ಆಗಲಿದೆ. ಈ ಹಣವನ್ನು ಬೇರೆ ಸೌಲಭ್ಯಗಳಿಗೆ ವ್ಯಯಿಸಿದರೆ ಗ್ರಾಮೀಣ ಭಾಗದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡಿದಂತಾಗಲಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಪ್ರತಿ ಕಿಟ್‌ಗೆ 422.88 ರು. ವೆಚ್ಚ:

ಪ್ರತಿ ಕಿಟ್‌ನಲ್ಲಿರುವ ತಲಾ ಒಂದು ಕೆ.ಜಿ. ತೊಗರಿ ಬೇಳೆಗೆ 108 ರು., ಹೆಸರುಕಾಳು 86 ರು., ಅಡುಗೆ ಎಣ್ಣೆ 138 ರು. (1 ಲೀಟರ್), ಸಕ್ಕರೆ 43.50 ರು., ಉಪ್ಪಿಗೆ 15.50 ರು. ವೆಚ್ಚ ತಗುಲಲಿದೆ. ಕಿಟ್‌ ಪ್ಯಾಕೇಜಿಂಗ್‌ಗೆ 16.50 ರು. ಖರ್ಚಾಗಲಿದ್ದು, ಒಟ್ಟಾರೆ 407.50 ರು. ವೆಚ್ಚವಾಗಲಿದೆ. ಈ ರೀತಿ 1,26,15,815 ಕುಟುಂಬಗಳಿಗೆ ಒಟ್ಟು 509.96 ಕೋಟಿ ರು. ವೆಚ್ಚವಾಗಲಿದೆ. ಪ್ರತಿ ತಿಂಗಳು 509.96 ಕೋಟಿ ರು. ವೆಚ್ಚವಾಗಲಿದೆ. ಇನ್ನು ಪ್ರತಿ ಕಿಟ್‌ಗೆ ಚಿಲ್ಲರೆ ಸಾಗಣೆ ವೆಚ್ಚ 3.38 ರು., ಸಹಾಯಧನ 2.77 ರು., ಚಿಲ್ಲರೆ ಲಾಭಾಂಶ 9.23 ರು. ಸೇರಿ 19 ಕೋಟಿ ರು.ಹೆಚ್ಚುವರಿ ಖರ್ಚು ಬೀಳಲಿದೆ. ಹೀಗಾಗಿ ಒಟ್ಟಾರೆ ಕಿಟ್‌ಗೆ 422.88 ರು. ವೆಚ್ಚ ತಗುಲಲಿದೆ.

ಸರ್ಕಾರಕ್ಕೆ 306.48 ಕೋಟಿ ರು. ಉಳಿತಾಯ

ರಾಜ್ಯ ಸರ್ಕಾರ ಹೆಚ್ಚುವರಿ 5 ಕೆ.ಜಿ. ಅಕ್ಕಿಗೆ ಪ್ರತಿ ತಿಂಗಳು 535 ಕೋಟಿ ರು. ವೆಚ್ಚ ಮಾಡುತ್ತಿತ್ತು. ಇಂದಿರಾ ಆಹಾರ ಕಿಟ್‌ನ ಪ್ರತಿ ಕಿಟ್‌ಗೆ 422 ರು.ನಂತೆ 1.26 ಕೋಟಿ ಕುಟುಂಬಗಳ ಆಹಾರ ಕಿಟ್‌ಗೆ 509.96 ಕೋಟಿ ರು. ಮಾತ್ರ ವೆಚ್ಚ ಆಗಲಿದೆ. ಇದರಿಂದ ಪ್ರತಿ ತಿಂಗಳು 25.04 ಕೋಟಿ ರು. ಖರ್ಚಾಗಲಿದ್ದು, ವಾರ್ಷಿಕ 306.48 ಕೋಟಿ ರು. ಸರ್ಕಾರಕ್ಕೆ ಉಳಿತಾಯವಾಗಲಿದೆ. 

ಕುಟುಂಬಕ್ಕೆ ಎಷ್ಟು ಖರ್ಚು

ಕುಟುಂಬ ಸದಸ್ಯರ ಸಂಖ್ಯೆ-ಪಡಿತರ ಕುಟುಂಬಗಳ ಸಂಖ್ಯೆ- ಪ್ರತಿ ಆಹಾರ ಕಿಟ್‌ನ ದರ- ಒಟ್ಟು

ಒಬ್ಬರು ಅಥವಾ ಇಬ್ಬರು-32,56,948- 203.75 ರು.- 66.36 ಕೋಟಿ ರು.

3 ಅಥವಾ 4 ಮಂದಿ- 63,04,009- 407.50 ರು.- 256.88 ಕೋಟಿ ರು.

5 ಹಾಗೂ ಅದಕ್ಕಿಂತ ಹೆಚ್ಚು- 30,54,858- 611.25 ರು.- 186.72 ಕೋಟಿ ರು.

ಸರ್ಕಾರದ ಸಮರ್ಥನೆಯೇನು?

ಪಂಚಗ್ಯಾರಂಟಿ ಯೋಜನೆಗಳ ಸಮಗ್ರ ಸಮೀಕ್ಷೆ ವೇಳೆ ಶೆ.90 ರಷ್ಟು ಫಲಾನುಭವಿಗಳು ಅಕ್ಕಿಗೆ ಬದಲಾಗಿ ಬೇಳೆ, ಎಣ್ಣೆ, ಸಕ್ಕರೆ ಇತರೆ ಸಾಮಗ್ರಿ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಈ ನಿರ್ಧಾರ. ಜತೆಗೆ ಹೆಚ್ಚುವರಿ ಅಕ್ಕಿ ದುರ್ಬಳಕೆ ತಡೆಯಬಹುದು. ಬಡ ಕುಟುಂಬಗಳ ಇತರೆ ಆಹಾರ ಪದಾರ್ಥ ಖರೀದಿಸಲು ಆಗುವ ಖರ್ಚು ತಡೆದು ಆರ್ಥಿಕವಾಗಿ ಸಹಾಯ ಮಾಡಹುದು. ಸಮಗ್ರ ಆರೋಗ್ಯ ಹೆಚ್ಚಿಸಿ ಅಪೌಷ್ಟಿಕತೆ ನಿವಾರಿಸಬಹುದು.

ಎಲ್ಲರಿಗೂ ಒಂದೇ ಕಿಟ್‌ ಇಲ್ಲ

- ಆಹಾರ ಕಿಟ್‌ ಹಂಚಿಕೆಯನ್ನು ಪಡಿತರ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ

- ಒಬ್ಬರು ಅಥವಾ ಇಬ್ಬರು ಸದಸ್ಯರು ಮಾತ್ರ ಇರುವ ಕುಟುಂಬಕ್ಕೆ ತಲಾ ಅರ್ಧ ಕೆ.ಜಿ.ಯಂತೆ 2.5 ಕೆ.ಜಿಯ ಕಿಟ್‌ ನೀಡಲಾಗುತ್ತದೆ

- ಮೂರು ಅಥವಾ ನಾಲ್ಕು ಮಂದಿ ಸದಸ್ಯರ ಕುಟುಂಬಕ್ಕೆ ತಲಾ ಒಂದು ಕೆ.ಜಿ.ಯಂತೆ ಐದು ಕೆ.ಜಿ. ತೂಕದ ಕಿಟ್‌ ಕೊಡಲಾಗುತ್ತದೆ

- 5 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ತಲಾ 1.5 ಕೆ.ಜಿ.ಯಂತೆ 7.5 ಕೆ.ಜಿ. ಯ ಆಹಾರ ಕಿಟ್‌ ಪೂರೈಸಲಾಗುತ್ತದೆ

PREV
Read more Articles on

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ