ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಪರವಾಗಿ ಹವಾ ಎದ್ದಿದ್ದು ಗೆಲವು ತಡೆಯುವುದು ಅಸಾಧ್ಯವೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಹೇಳಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ವಿಶೇಷವಾಗಿದ್ದು ಚಿತ್ರದುರ್ಗ ಕ್ಷೇತ್ರದಲ್ಲಿ ಬಿಜೆಪಿಗೆ ಜೆಡಿಎಸ್ ಆಧಾರ ಸ್ಥಂಭವಾಗಿದೆ. ಗೋವಿಂದ ಕಾರಜೋಳ ಅತಿ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದರು.
ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿಯೂ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಎನ್‌ಡಿಎ ಅಭ್ಯರ್ಥಿ ಗೆಲವಿಗೆ ಶ್ರಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರಿಗೆ ಬಿಗಿ ನಿರ್ದೇಶನ ನೀಡಿ ಕಾರಜೋಳ ಅವರನ್ನು ಗೆಲ್ಲಿಸಿಕೊಂಡು ಬರಬೇಕೆಂದಿದ್ದಾರೆ. ಜೆಡಿಎಸ್ ಎಲ್ಲಿಯೂ ಚುನಾವಣಾ ಕಣದಲ್ಲಿ ಹಿಂಜರಿಯದೆ ಬಿಜೆಪಿ ಅಭ್ಯರ್ಥಿಯ ಬೆಂಬಲಿಸುತ್ತಿದೆ. ಎಲ್ಲ ಕಡೆ ಅಭ್ಯರ್ಥಿಗೆ ಸಾಥ್ ನೀಡಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಮೋದಿ 10 ವರ್ಷಗಳ ಕಾಲ ಉತ್ತಮ ಆಡಳಿತ ನೀಡುವುದರ ಮೂಲಕ ಎಲ್ಲಾ ವರ್ಗದ ಜನರಿಗೆ ಉಪಯುಕ್ತವಾದ ಯೋಜನೆಗಳ ಜಾರಿ ಮಾಡಿ ಅಭಿವೃದ್ಧಿಗೆ ದೇಶ ತೆರೆದಿಟ್ಟಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲವು ಸಾಧಿಸಿ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ವಿಶ್ವಗುರುವಾಗಿ ದೇಶದ ಸ್ವಾಭಿಮಾನವ ವಿಶ್ವದಾದ್ಯಂತ ಪಸರಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಮತದಾರರಿಗೆ ಸುಳ್ಳನ್ನು ಹೇಳುವುದರ ಮೂಲಕ ಸತ್ಯವನ್ನು ಮರೆಮಾಚುತ್ತಿದೆ. ಈ ದುರಾಡಳಿತವನ್ನು ಕೊನೆಗಾಣಿಸಬೇಕಿದೆ. ಚಿತ್ರದುರ್ಗ ಪ್ರವಾಸೋದ್ಯಮ ಭೂಪಟದಲ್ಲಿ ಕಂಗೊಳಿಸಬೇಕಾದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು. ಮದಕರಿ ಥೀಮ್‍ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಭರವಸೆ ನೀಡಿದ್ದು ಅದನ್ನು ಸಾಕಾರಗೊಳಿಸುವ ನಿಟ್ಟನಲ್ಲಿ ಗೋವಿಂದ ಕಾರಜೋಳ ಉತ್ಸುಕರಾಗಿದ್ದಾರೆ. ಚಿತ್ರದುರ್ಗದಲ್ಲಿ ಬಿಜೆಪಿ ಗೆದ್ದರೆ ಗೋವಿಂದ ಕಾರಜೋಳ ಮೋದಿ ಸಂಪುಟದಲ್ಲಿ ಸಚಿವರಾಗಲಿದ್ದಾರೆ. ಚಿತ್ರದುರ್ಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯ ಜನ ಬಿಜೆಪಿ ಬೆಂಬಲಿಸಬೇಕೆಂದು ಕಾಂತರಾಜ್ ವಿನಂತಿಸಿದರು.
ಗೋವಿಂದ ಕಾರಜೋಳ ಅವರಿಗೆ ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಜನಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದ್ದು ಭದ್ರಾ ಮೇಲ್ದಂಡೆ ಯೋಜನೆ ಜಾರಿ ಹಿಂದೆ ಅವರ ಶ್ರಮ ಇದೆ. ಹಾಗಾಗಿ ಅವರು ಗೆದ್ದಲ್ಲಿ ಕೇಂದ್ರದಿಂದ ಬರಬೇಕಾದ 5300 ಕೋಟಿ ರು. ಗಳನ್ನು ಸುಲಭವಾಗಿ ತಂದು ಯೋಜನೆ ಪೂರ್ಣಗೊಳಿಸಲು ನೆರವಾಗುವರೆಂದು ಕಾಂತರಾಜ್ ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಸಣ್ಣ ತಿಮ್ಮಣ್ಣ, ಜಿಲ್ಲಾ ಉಪಾಧ್ಯಕ್ಷ ಗುರುಸಿದ್ದಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿ, ಮಠದಹಟ್ಟಿ ವೀರಣ್ಣ ಇದ್ದರು.