95 ಎಕರೆ ಗೋಮಾಳ ಭೂಮಿ ಬಲಾಢ್ಯರಿಗೆ ಅಕ್ರಮವಾಗಿ ಮಂಜೂರು: ಆರೋಪ

KannadaprabhaNewsNetwork |  
Published : Jul 14, 2026, 01:45 AM IST
13ಕೆಎಂಎನ್ ಡಿ12  | Kannada Prabha

ಸಾರಾಂಶ

ಮಾರ್ಗೋನಹಳ್ಳಿ ಗ್ರಾಮದ ಸರ್ವೇ ನಂ.13 ಮತ್ತು ಹೊಸ ಸರ್ವೇ ನಂ.165 ರಲ್ಲಿರುವ ಒಟ್ಟು 95 ಎಕರೆ 13 ಗುಂಟೆ ಗೋಮಾಳ ಭೂಮಿಯನ್ನು ಮಂಡ್ಯ ಮೂಲದ ಡಿ.ರಾಮಲಿಂಗಯ್ಯ ಕುಟುಂಬಸ್ಥರು ಏಕ ಕಾಲದಲ್ಲಿ ಮಂಜೂರು ಮಾಡಿಕೊಂಡಿದ್ದಾರೆ. ಹಣ ಮತ್ತು ರಾಜಕಾರಣಿ ಬಲದಿಂದ ದೌರ್ಜನ್ಯದ ಮೂಲಕ ಭೂಮಿ ಕಬಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

95 ಎಕರೆ ಗೋಮಾಳ ಭೂಮಿಯನ್ನು ಬಲಾಢ್ಯರಿಗೆ ಅಕ್ರಮವಾಗಿ ಮಂಜೂರು ಮಾಡಿಕೊಡಲಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ತಾಲೂಕಿನ ಮಾರ್ಗೋನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಕರ್ನಾಟಕ ಅಂಬೇಡ್ಕರ್ ಸೇವಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ಗ್ರಾಮಸ್ಥರು, ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಬಲಾಢ್ಯರಿಗೆ ಮಾಡಿಕೊಟ್ಟಿರುವ ಅಕ್ರಮ ಭೂ ಮಂಜೂರಾತಿ ರದ್ದುಪಡಿಸಬೇಕು. ಇದಕ್ಕೆ ಸಹಕರಿಸಿದ ಕಂದಾಯ ಇಲಾಖೆ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ಸಂದೇಶ ಮಾತನಾಡಿ, ಗ್ರಾಮದ ಸರ್ವೇ ನಂ.13 ಮತ್ತು ಹೊಸ ಸರ್ವೇ ನಂ.165 ರಲ್ಲಿರುವ ಒಟ್ಟು 95 ಎಕರೆ 13 ಗುಂಟೆ ಗೋಮಾಳ ಭೂಮಿಯನ್ನು ಮಂಡ್ಯ ಮೂಲದ ಡಿ.ರಾಮಲಿಂಗಯ್ಯ ಕುಟುಂಬಸ್ಥರು ಏಕ ಕಾಲದಲ್ಲಿ ಮಂಜೂರು ಮಾಡಿಕೊಂಡಿದ್ದಾರೆ. ಹಣ ಮತ್ತು ರಾಜಕಾರಣಿ ಬಲದಿಂದ ದೌರ್ಜನ್ಯದ ಮೂಲಕ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದರು.

ಈ ಭೂಮಿ ದಲಿತರು ಮತ್ತು ಹಿಂದುಳಿದ ವರ್ಗದ ರೈತರಿಗೆ ಸೇರಬೇಕಾಗಿತ್ತು. ಈ ಗ್ರಾಮವೇ ಇನಾಮ್ ಗ್ರಾಮವಾಗಿದೆ. 95 ಎಕರೆ ಭೂಮಿ ಮಂಜೂರಿನ ಹಿಂದೆ ದೊಡ್ಡ ಸಂಚು ನಡೆದಿದೆ. ಕೂಡಲೇ ತನಿಖೆ ಆಗಬೇಕು. ಭೂಕಬಳಿಕೆ ಮಾಡಿರುವ ಡಿ.ರಾಮಲಿಂಗಯ್ಯ ಪುತ್ರ ವಿವೇಕಾನಂದ ಸರ್ಕಾರಿ ಪೊಲೀಸ್ ಅಧಿಕಾರಿಯಾಗಿದ್ದು, ಅದನ್ನು ಪ್ರಶ್ನಿಸಿ ಹೋರಾಟ ಮಾಡುವ ಗ್ರಾಮದ ಮುಗ್ಧ ಜನರ ಮೇಲೆ ಸುಳ್ಳು ಕೇಸ್ ದಾಖಲಿಸಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಭೂಗಳ್ಳರ ಕುಟುಂಬಕ್ಕೆ ಕಿಕ್ಕೇರಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಭೂ ಕಬಳಿಕೆ ವಿರುದ್ಧ ಹೋರಾಟ ಮಾಡುತ್ತಿರುವ ರೈತರು ಕ್ರಿಮಿನಲ್‌ಗಳಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಿಕ್ಕೇರಿ ಪೊಲೀಸರು ಬಲಾಡ್ಯರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಗೋಮಳದ ಅಕ್ರಮ ಮಂಜೂರಾತಿ ರದ್ದುಗೊಳಿಸಬೇಕು. ರೈತರ ಮೇಲೆ ಹಾಕಿರುವ ಸುಳ್ಳು ಕೇಸ್‌ಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಶ್ರೇಯಸ್ ಮಾತನಾಡಿ, ಈ ಆರೋಪದ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಂದಾಯ ಇಲಾಖೆ ದಾಖಲೆಗಳನ್ನು ಪರಿಶೀಲಿಸಿ ಅಕ್ರಮವಾಗಿ ಮಂಜೂರಾಗಿದ್ದರೆ ಕೂಡಲೇ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದಲಿತರು ಮತ್ತು ಹಿಂದುಳಿದ ರೈತರ ಮೇಲೆ ದಾಖಲಾಗಿರುವ ಸುಳ್ಳು ಕೇಸ್ ಆರೋಪಗಳ ಬಗ್ಗೆಯೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮಾರ್ಗೋನಹಳ್ಳಿ ಅಯ್ಯಪ್ಪ, ಮಂಜುನಾಥ್, ಗಿರೀಶ್, ನಾಗರಾಜು, ಅಜ್ಜೇಗೌಡ, ರಾಜೇಗೌಡ, ಶಿವಣ್ಣ, ನರಸಿಂಹ, ಯೋಗೇಶ್, ತ್ರಿಪುರರಾಜ್, ಬಾಬು, ರಾಮು, ರುದ್ರೇಶ್, ನಾಗರಾಜು, ರಾಮ, ನರಸೇಗೌಡ, ಲಕ್ಷ್ಮಣ, ಚಂದ್ರು, ರಾಜಶೇಖರ, ವಿಜಯ, ಜಯಣ್ಣ, ಶ್ರೀನಿವಾಸ್, ಶಾಂತಮ್ಮ, ತಾಯಮ್ಮ, ಕೆಂಚಮ್ಮ, ರಂಗಮ್ಮ, ಅಂಜಲಿ ಸೇರಿದಂತೆ ಹಲವು ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೀಘ್ರದಲ್ಲೇ ‌ಹಲವು ಅಭಿವೃದ್ಧಿ ಕಾಮಗಾರಿಗಳು ಪೂರ್ಣ: ಕೆ.ಎಂ.ಉದಯ್
ಕಾವೇರಿ ನದಿಯಲ್ಲಿ ಗಾಯಕಿ ಎಸ್.ಜಾನಕಿ ಅಸ್ಥಿ ವಿಸರ್ಜನೆ