ಶಹಪುರ ಕೆರೆ ಒತ್ತುವರಿ ಮಾಡುವ ಹುನ್ನಾರ-ಆರೋಪ

KannadaprabhaNewsNetwork |  
Published : Jul 21, 2024, 01:22 AM IST
ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಸವುಳು ಕೆರೆ ಒತ್ತುವರಿ ಸ್ಥಳಕ್ಕೆ ಅಧಿಕಾರಿಗಳ ಭೇಟಿ ನೀಡಿದರು. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲು ಆಂಧ್ರಪ್ರದೇಶದ ಕೆಲವು ಪಟ್ಟಭದ್ರರು ಹೊಂಚು ಹಾಕುತ್ತಿದ್ದಾರೆ. ಕೂಡಲೇ ಅಂಥವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಶಹಪುರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆ ಒಡಲು ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಕೆರೆಯನ್ನು ಒತ್ತುವರಿ ಮಾಡಿಕೊಳ್ಳಲು ಆಂಧ್ರಪ್ರದೇಶದ ಕೆಲವು ಪಟ್ಟಭದ್ರರು ಹೊಂಚು ಹಾಕುತ್ತಿದ್ದಾರೆ. ಕುರಿಗಾಹಿಗಳನ್ನು ಹೆದರಿಸಿ, ಬೆದರಿಸಿ ಒಕ್ಕಲೆಬ್ಬಿಸಿ ಸರ್ಕಾರಿ ಜಾಗ ಅತಿಕ್ರಮಿಸಲು ಮುಂದಾಗಿದ್ದಾರೆ ಎಂದು ಶಹಪುರ ಗ್ರಾಮಸ್ಥರು ಆರೋಪಿಸಿದ್ದಾರೆ.

ಕೋಳಿ ಫಾರಂನ ಶ್ರೀಧರ ಎನ್ನುವ ಆಂಧ್ರದ ಉದ್ಯಮಿ ಕೆರೆಯ ಬದಿಯಲ್ಲಿ ಒಂದೆರಡು ಎಕರೆ ಜಮೀನು ಖರೀದಿಸಿದ್ದಾರೆ. ಇದೇ ನೆಪದಲ್ಲಿ ಸುಮಾರು 40 ಎಕರೆ ವಿಸ್ತೀರ್ಣದ ಕೆರೆಯ ಜಾಗವನ್ನು ಅತಿಕ್ರಮಿಸಲು ಕಳೆದ ನಾಲ್ಕೈದು ವರ್ಷಗಳಿಂದ ಯತ್ನಿಸುತ್ತಿದ್ದಾರೆ. ಕುರಿಗಾಹಿಗಳು ಪ್ರತಿರೋಧ ವ್ಯಕ್ತಪಡಿಸಿದಾಗ ಅಲ್ಲಿಂದ ಕಾಲು ಕೀಳುತ್ತಿದ್ದಾರೆ. ನೂರಾರು ವರ್ಷಗಳಿಂದ ಗೋಮಾಳದಲ್ಲಿ ಕುರಿ ಮತ್ತು ದನಗಳನ್ನು ಇರಿಸಿಕೊಂಡು ಉಪಜೀವನ ಮಾಡುತ್ತಿರುವ ಶಹಪುರ ಕುರಿಗಾಹಿಗಳಿಗೆ ಕೆಲವು ಪಟ್ಟಭದ್ರರಿಂದ ಕಿರುಕುಳ ಉಂಟಾಗುತ್ತಿದೆ. ಜಿಲ್ಲಾಡಳಿತ ನೆರವಿಗೆ ಬರಬೇಕು ಎಂದು ಬೇವಿನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಹನುಮಂತ ಕೊರವರ, ಗ್ರಾಪಂ ಜನಪ್ರತಿನಿಧಿಗಳಾದ ನಿಂಗಪ್ಪ ನಾಗಲಾಪುರ, ಹಾಲಪ್ಪ ತೋಟದ, ಗಂಗಮ್ಮ ಪೂಜಾರ, ಹನುಮಂತ ಗೊಲ್ಲರ, ಮುಖಂಡರಾದ ಮಲ್ಲಿಕಾರ್ಜುನ ಕುರಿ, ಹನುಮಂತ ಎಲ್. ಕುರಿ, ಮಂಜುನಾಥ ಕಂಬಳಿ, ವೀರಣ್ಣ ಕೋಮಲಾಪುರ, ರಾಘವೇಂದ್ರ ಜೋಷಿ, ಅಮರೇಶ್ ಕಟ್ಟಿ ಅವರು ಕೊಪ್ಪಳ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಶ್ರೀಧರ ಎನ್ನುವ ಉದ್ಯಮಿ ಗ್ರಾಮಸ್ಥರ ಗಮನಕ್ಕೆ ತರದೇ ಕೆರೆಯನ್ನು ಅತಿಕ್ರಮಿಸಿ ಖಾಸಗಿಯವರಿಂದ ಸರ್ವೇ ಕಾರ್ಯ ಆರಂಭಿಸಲು ಮುಂದಾಗಿದ್ದರು. ಸ್ಥಳೀಯ ಕುರಿಗಾಹಿಗಳಾದ ಕಂಪ್ಲೆಪ್ಪ ಬಾಳಪ್ಪ ಕಂಬಳಿ, ನಾಗಪ್ಪ ಹಂಚಾಳಪ್ಪ ಬೆಣಕಲ್, ದೊಡ್ಡ ಹನುಮಪ್ಪ ಹಂಚಾಳಪ್ಪ ಬೆಣಕಲ್, ಜಗದೀಶ ಭೀಮಪ್ಪ ಕೋಮಲಾಪುರ, ಫಕ್ಕೀರಪ್ಪ ಎಲ್ಲಪ್ಪ ಹಳ್ಳಿಗುಡಿ, ಹನುಮಂತ ಭೀಮಪ್ಪ ಕೋಮಲಾಪುರ, ಯಮನಪ್ಪ ಬಾಲಪ್ಪ ಕಂಬಳಿ, ಮಂಜುನಾಥ ಹುಲುಗಪ್ಪ ಕೋಮಲಾಪುರ, ಬೀರಪ್ಪ ಸೀಮಣ್ಣ ಬೂದಿಹಾಳ್, ನಿಂಗಪ್ಪ ಬಸಪ್ಪ ಕಿನ್ನಾಳ್, ಗುಡದಪ್ಪ ಯಮನೂರಪ್ಪ ಕಿನ್ನಾಳ್, ರಾಮಣ್ಣ ಕೋಮಲಾಪುರ, ನಾಗಪ್ಪ ಮಲ್ಲಪ್ಪ ಕುರಿ, ಮಲ್ಲಿಕಾರ್ಜುನ ಲೋಕಪ್ಪ ಕುರಿ, ಹನುಮಂತ ಚೆನ್ನದಾಸರ, ಹನುಮಂತ ಜಂಬಣ್ಣ ಕುರಿ, ದೇವಿಂದ್ರಪ್ಪ ಮತ್ತು ಚೆನ್ನದಾಸರ ಪೊಲೀಸ್ ತುರ್ತು ಸೇವೆ-112ಗೆ ಕರೆ ಮಾಡಿದರು. ಕೂಡಲೇ ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಬರುವ ಸುಳಿವರಿತು ಉದ್ಯಮಿ ಮೊದಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಉದ್ಯಮಿ ಶ್ರೀಧರ ಪದೇ ಪದೇ ಈ ಕುರಿತು ಕುರಿಗಾಹಿಗಳಿಗೆ ತೊಂದರೆ ನೀಡುತ್ತಿದ್ಧಾರೆ. ಯಾರೂ ಇಲ್ಲದ ಸುಳಿವರಿತು ಖಾಸಗಿ ಸರ್ವೇಯರನ್ನು ಕರೆಯಿಸಿಕೊಂಡು ಬಂದು ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ. ಆ ಮೂಲಕ ಕೆರೆ ಒತ್ತುವರಿ ಮಾಡುವ ಹುನ್ನಾರ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಉದ್ಯಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಬಾರಿ ಕೊಪ್ಪಳ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿ ಅವರು ಕೆರೆ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡದಂತೆ ಶ್ರೀಧರ ಅವರಿಗೆ ಎಚ್ಚರಿಕೆ ನೀಡಿದ್ದರು. ಈಗ ಮತ್ತೆ ಒತ್ತುವರಿ ಪ್ರಯತ್ನ ಮಾಡಿದ್ದಾರೆ ಎಂದು ಸಮಾಜ ಸೇವಕರಾದ ಮಲ್ಲಿಕಾರ್ಜುನ ಕುರಿ ಹಾಗೂ ಗ್ರಾಮಸ್ಥರು ಹೇಳಿದ್ದಾರೆ.

PREV

Recommended Stories

ಕಡ್ಡಾಯವಾಗಿ ಆಂತರಿಕಾ ದೂರು ನಿವಾರಣಾ ಸಮಿತಿ ರಚಿಸಿ
ನಾಳೆಯಿಂದ ರಾಜ್ಯಮಟ್ಟದ ಮೂರು ನಾಟಕಗಳ ಪ್ರದರ್ಶನ