ಕನ್ನಡಪ್ರಭ ವಾರ್ತೆ ಕಾರವಾರ
ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಪ್ರದೇಶ ವೀಕ್ಷಣೆಗೆ ಹಾಗೂ ಉಳುವರೆ ಭಾಗದ ಸಂತ್ರಸ್ತರ ಭೇಟಿಗೆ ಆಗಮಿಸಿದ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಸ್ವಾಗತಿಸಿ ಸನ್ಮಾನಿಸಿ, ದುರಂತದ ಬಗ್ಗೆ ವಿವರಿಸಿದರು.ಶನಿವಾರ ಅಂಕೋಲಾದ ಬಾಳೆಗುಳಿ ಸಮೀಪದಲ್ಲಿ ಮೈತ್ರಿ ಪಕ್ಷದ ಪ್ರಮುಖರು ಸೇರಿ ಅವರನ್ನು ಸ್ವಾಗತಿಸಿದರು. ಕುಮಾರಸ್ವಾಮಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡುತ್ತಿರುವುದರಿಂದ ಶವವನ್ನು ಪತ್ತೆಹಚ್ಚುವ ಕಾರ್ಯಾಚರಣೆಗೆ ವೇಗ ದೊರೆಯಲಿದೆ. ಸಂತ್ರಸ್ತರ ಸಹಾಯಕ್ಕೂ ಬರಲಿದ್ದಾರೆ. ಇದಲ್ಲದೆ, ಗುಡ್ಡ ಕುಸಿತದಿಂದ ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು, ಕಲ್ಲು ತೆರವು ಕಾರ್ಯಾಚರಣೆಗೆ ವೇಗ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾಳಜಿ ಕೇಂದ್ರಕ್ಕೆ ಭೇಟಿ:ಬಳಿಕ ಕಾರವಾರದ ಚೆಂಡಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರವಾಹದಿಂದಾಗಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ಸಂತ್ರಸ್ತರಿಗೆ ನೀಡಲಾಗುತ್ತಿರುವ ಆಹಾರದ ಬಗ್ಗೆ ಪರಿಶೀಲನೆ ನಡೆಸಿ ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ಮಾಜಿ ಶಾಸಕಿ ರೂಪಾಲಿ ನಾಯ್ಕ ಈ ಹಿಂದೆ ಉಳುವರೆಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದ್ದರು.
ಗುಡ್ಡ ಕುಸಿತದ ಸ್ಥಳಕ್ಕೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಭೇಟಿ ಮಾಡಿ ತೆರವು ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅರಗಾ, ಚೆಂಡಿಯಾ, ಈಡೂರು, ತೊಡೂರು ಮತ್ತಿತರ ಕಡೆ ಜಲಾವೃತವಾದಾಗ ನೌಕಾನೆಲೆ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿ, ನೀರು ಸರಾಗವಾಗಿ ಹರಿದುಹೋಗಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಕಾರವಾರ ತಾಲೂಕಿನ ಕಡವಾಡ ಮಂದ್ರಾಳಿಯಲ್ಲಿ ಗುಡ್ಡ ಕುಸಿತವಾದಾಗ ಅಲ್ಲಿಯೂ ಸಂಸದರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದರು.ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ. ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.