ನದಿಯಿಂದ ನೂರಾರು ಲೋಡ್ ಮರಳು ಸಂಗ್ರಹ ಆರೋಪ

KannadaprabhaNewsNetwork |  
Published : Jul 16, 2026, 02:00 AM IST
15ಎಚ್ಎಸ್ಎನ್16 :  ನದಿ ದಂಡೆಯಲ್ಲಿ ರಾಶಿ ಹಾಕಿರುವ ಮರಳು. | Kannada Prabha

ಸಾರಾಂಶ

ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್‌ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಮರಳು ಮಾಫಿಯಾಗೆ ಕೆಲ ಅಧಿಕಾರಿಗಳು ಮತ್ತು ಪೊಲೀಸರ ಬೆಂಬಲವಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಕಳೆದ ವಾರ ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಕೆಲ ದಿನಗಳ ಕಾಲ ಮರಳು ತೆಗೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ನೀರಿನ ಮಟ್ಟ ಇಳಿದ ತಕ್ಷಣವೇ ಮತ್ತೆ ಅಕ್ರಮ ಮರಳು ದಂಧೆ ಆರಂಭಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಮತ್ತೆ ಬಿರುಸುಗೊಂಡಿದ್ದು, ಯಸಳೂರು ಹೋಬಳಿಯ ಮಲಗಳ್ಳಿ ಗ್ರಾಮದ ಸಮೀಪ ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.ಸ್ಥಳೀಯರ ಆರೋಪದ ಪ್ರಕಾರ, ಹೇಮಾವತಿ ನದಿಯಿಂದ ನೂರಾರು ಲೋಡ್ ಮರಳನ್ನು ತೆಗೆದು ಲಕ್ಕುಂದ ಹಾಗೂ ದೊಡ್ಡಕುಂದೂರು ಗ್ರಾಮದ ಸಮೀಪದ ನಿರ್ಜನ ಪ್ರದೇಶಗಳಲ್ಲಿ ದಾಸ್ತಾನು ಮಾಡಲಾಗುತ್ತಿದೆ. ಅಧಿಕಾರಿಗಳ ಭಯವಿಲ್ಲದೆ ಪ್ರತಿದಿನವೂ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಂಗ್ರಹ ನಡೆಯುತ್ತಿದ್ದು, ಸಂಬಂಧಪಟ್ಟ ಇಲಾಖೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್‌ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಮರಳು ಮಾಫಿಯಾಗೆ ಕೆಲ ಅಧಿಕಾರಿಗಳು ಮತ್ತು ಪೊಲೀಸರ ಬೆಂಬಲವಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಕಳೆದ ವಾರ ಹೇಮಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಕೆಲ ದಿನಗಳ ಕಾಲ ಮರಳು ತೆಗೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ನೀರಿನ ಮಟ್ಟ ಇಳಿದ ತಕ್ಷಣವೇ ಮತ್ತೆ ಅಕ್ರಮ ಮರಳು ದಂಧೆ ಆರಂಭಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.3 ಪಿಕಪ್ ವಾಹನಗಳ ವಶ:

ಇದೇ ವೇಳೆ ಸಕಲೇಶಪುರ ಪಟ್ಟಣದ ಸಮೀಪ ಅಕ್ರಮ ಮರಳು ಸಾಗಾಟದ ವಿರುದ್ಧ ನಗರ ಪೊಲೀಸ್ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮಹೇಶ್ ನೇತೃತ್ವದ ತಂಡ ಮಧ್ಯರಾತ್ರಿ ದಾಳಿ ನಡೆಸಿ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂರು ಪಿಕಪ್ ವಾಹನಗಳನ್ನು ಮರಳು ಸಮೇತ ವಶಪಡಿಸಿಕೊಂಡಿದೆ. ಖಚಿತ ಮಾಹಿತಿ ಮೇರೆಗೆ ಹೆದ್ದಾರಿ ಸೇತುವೆ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಕ್ರಮ ಮರಳು ಸಾಗಾಟದಲ್ಲಿ ತೊಡಗಿದ್ದ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಂದೆಡೆ ಪೊಲೀಸರು ಅಕ್ರಮ ಸಾಗಾಟದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ನದಿಪಾತ್ರದಲ್ಲೇ ಅಕ್ರಮ ಮರಳು ಗಣಿಗಾರಿಕೆ ಮತ್ತು ದಾಸ್ತಾನು ಮುಂದುವರಿದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಮರಳು ದಂಧೆ ತಡೆಯಲು ಜಿಲ್ಲಾಡಳಿತ ಮತ್ತು ಗಣಿ-ಭೂವಿಜ್ಞಾನ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಣಗಿದ ಕಬ್ಬಿನ ಜೊಲ್ಲೆ ಹಿಡಿದು ರೈತರ ಅರೆಬೆತ್ತಲೆ ಪ್ರತಿಭಟನೆ
ಯಾವುದೇ ಸಂಘ ಸಂಸ್ಥೆಗಳು ಅಭಿವೃದ್ಧಿಯಾಗಲು ಒಗ್ಗಟ್ಟು ಅಗತ್ಯ: ಚಂದ್ರಶೇಖರ್