ಮಂಗಳವಾರದ ಸಂತೆ ನಿಲ್ಲಿಸುವ ಪಾಲಿಕೆ ನಿರ್ಧಾರಕ್ಕೆ ವ್ಯಾಪಾರಸ್ಥರ ವಿರೋಧ

KannadaprabhaNewsNetwork |  
Published : Jul 16, 2026, 02:00 AM IST
15ಎಚ್ಎಸ್ಎನ್14 :  | Kannada Prabha

ಸಾರಾಂಶ

ನಗರದ ಸಂತೇಪೇಟೆ ಬಳಿ ಹಲವು ದಶಕಗಳಿಂದ ನಡೆಯುತ್ತಿದ್ದ ಮಂಗಳವಾರದ ಸಂತೆ ನಡೆಸದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ನೀಡಿದ್ದ ಸೂಚನೆಗೆ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ಆವರಣದಲ್ಲಿ ರಸ್ತೆಬದಿ ವ್ಯಾಪಾರಿಗಳು ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಸ್ವರೂಪ್‌ ಭೇಟಿ ನೀಡಿ ಅಹವಾಲು ಆಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ ನಗರದ ಸಂತೇಪೇಟೆ ಬಳಿ ಹಲವು ದಶಕಗಳಿಂದ ನಡೆಯುತ್ತಿದ್ದ ಮಂಗಳವಾರದ ಸಂತೆ ನಡೆಸದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳಿಗೆ ನೀಡಿದ್ದ ಸೂಚನೆಗೆ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ಆವರಣದಲ್ಲಿ ರಸ್ತೆಬದಿ ವ್ಯಾಪಾರಿಗಳು ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಶಾಸಕ ಸ್ವರೂಪ್‌ ಭೇಟಿ ನೀಡಿ ಅಹವಾಲು ಆಲಿಸಿದರು. ಮಹಾನಗರ ಪಾಲಿಕೆ ಆವರಣದಲ್ಲಿ ಜಮಾಯಿಸಿದ್ದ ವ್ಯಾಪಾರಿಗಳು, ಮಂಗಳವಾರದ ಸಂತೆ ತಮ್ಮ ಜೀವನೋಪಾಯದ ಪ್ರಮುಖ ಆಧಾರವಾಗಿದ್ದು, ಏಕಾಏಕಿ ಸಂತೆ ನಿಲ್ಲಿಸುವ ನಿರ್ಧಾರದಿಂದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಶಾಸಕರ ಗಮನಕ್ಕೆ ತಂದರು. ಹಲವು ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ನಡೆಯುತ್ತಿರುವ ಸಂತೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.ವ್ಯಾಪಾರಿಗಳ ಅಹವಾಲುಗಳನ್ನು ಆಲಿಸಿದ ಶಾಸಕ ಸ್ವರೂಪ್ ಪ್ರಕಾಶ್, ಈ ವಿಚಾರವನ್ನು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲಿಯವರೆಗೆ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಅಂತಿಮ ತೀರ್ಮಾನವಾಗುವವರೆಗೆ ಮಂಗಳವಾರದ ಸಂತೆಯನ್ನು ಯಥಾಸ್ಥಿತಿಯಲ್ಲಿ ನಡೆಸಲು ಅವಕಾಶ ಕಲ್ಪಿಸುವಂತೆ ಸ್ಥಳದಲ್ಲೇ ನಿರ್ದೇಶನ ನೀಡಿದರು. ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಜೊತೆಗೆ ಸಣ್ಣ ವ್ಯಾಪಾರಿಗಳ ಜೀವನೋಪಾಯವೂ ಮುಖ್ಯವಾಗಿದ್ದು, ಎಲ್ಲರ ಹಿತ ಕಾಪಾಡುವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು. ವ್ಯಾಪಾರಿಗಳಿಗೂ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಶಾಶ್ವತ ಪರಿಹಾರ ರೂಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕರು ತಿಳಿಸಿದರು.ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಕಚೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಶಾಸಕ ಸ್ವರೂಪ್ ಪ್ರಕಾಶ್, ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ದೀರ್ಘಕಾಲ ಸರದಿಯಲ್ಲಿ ಕಾಯುತ್ತಿರುವುದನ್ನು ಗಮನಿಸಿದರು. ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರೊಂದಿಗೆ ಮಾತನಾಡಿ, ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಅವರು, ಪ್ರಮಾಣಪತ್ರಗಳ ವಿತರಣೆಯಲ್ಲಿ ಅನಗತ್ಯ ವಿಳಂಬವಾಗದಂತೆ ಹಾಗೂ ಅರ್ಜಿದಾರರಿಗೆ ತ್ವರಿತ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಅನಗತ್ಯವಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಜನನ ಹಾಗೂ ಮರಣ ಪ್ರಮಾಣಪತ್ರಗಳಂತಹ ಅಗತ್ಯ ದಾಖಲೆಗಳನ್ನು ನಿಗದಿತ ಸಮಯದೊಳಗೆ ವಿತರಿಸುವ ಮೂಲಕ ಜನಸ್ನೇಹಿ ಆಡಳಿತ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಶಾಸಕರ ಭೇಟಿ ವೇಳೆ ಬೀದಿ ಬದಿ ವ್ಯಾಪಾರಿಗಳು ತಮ್ಮ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಣಗಿದ ಕಬ್ಬಿನ ಜೊಲ್ಲೆ ಹಿಡಿದು ರೈತರ ಅರೆಬೆತ್ತಲೆ ಪ್ರತಿಭಟನೆ
ಯಾವುದೇ ಸಂಘ ಸಂಸ್ಥೆಗಳು ಅಭಿವೃದ್ಧಿಯಾಗಲು ಒಗ್ಗಟ್ಟು ಅಗತ್ಯ: ಚಂದ್ರಶೇಖರ್