ಸ್ಮಶಾನ ಭೂಮಿಯನ್ನು ಕಬಳಿಕೆಯಿಂದ ಮುಕ್ತಗೊಳಿಸಿ

KannadaprabhaNewsNetwork |  
Published : Jul 16, 2026, 02:00 AM IST
15ಎಚ್ಎಸ್ಎನ್12 :  | Kannada Prabha

ಸಾರಾಂಶ

ಗ್ರಾಮಸ್ಥರ ಅಂತ್ಯಸಂಸ್ಕಾರಕ್ಕಾಗಿ ಹಲವು ವರ್ಷಗಳ ಹಿಂದೆ ಮೀಸಲಿಡಲಾಗಿದ್ದ ಸ್ಮಶಾನದ ಜಾಗವನ್ನು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣವೇ ಆ ಜಾಗವನ್ನು ಕಬಳಿಕೆಯಿಂದ ಮುಕ್ತಗೊಳಿಸಿ ಗ್ರಾಮಸ್ಥರ ಬಳಕೆಗೆ ಮರಳಿ ನೀಡಬೇಕು ಎಂದು ಆಗ್ರಹಿಸಿ ಹಾಸನ ತಾಲೂಕಿನ ಎರೆಬೊರೆ ಕಾವಲು ಗ್ರಾಮದ ನಿವಾಸಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸ್ಮಶಾನ ಇಲ್ಲದ ಕಾರಣ ಸುಮಾರು ೨೫ ಕಿಲೋಮೀಟರ್‌ ದೂರದ ಬೆಟ್ಟಗೌಡನಹಳ್ಳಿ ಗ್ರಾಮದ ಸ್ಮಶಾನಕ್ಕೆ ಮೃತದೇಹವನ್ನು ಕೊಂಡೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದರು.

ಎರೆಬೊರೆ ಕಾವಲು ಗ್ರಾಮಸ್ಥರಿಂದ ಜಿಲ್ಲಾಡಳಿತಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಹಾಸನ

ಗ್ರಾಮಸ್ಥರ ಅಂತ್ಯಸಂಸ್ಕಾರಕ್ಕಾಗಿ ಹಲವು ವರ್ಷಗಳ ಹಿಂದೆ ಮೀಸಲಿಡಲಾಗಿದ್ದ ಸ್ಮಶಾನದ ಜಾಗವನ್ನು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣವೇ ಆ ಜಾಗವನ್ನು ಕಬಳಿಕೆಯಿಂದ ಮುಕ್ತಗೊಳಿಸಿ ಗ್ರಾಮಸ್ಥರ ಬಳಕೆಗೆ ಮರಳಿ ನೀಡಬೇಕು ಎಂದು ಆಗ್ರಹಿಸಿ ಹಾಸನ ತಾಲೂಕಿನ ಎರೆಬೊರೆ ಕಾವಲು ಗ್ರಾಮದ ನಿವಾಸಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಳಿಕ ಗ್ರಾಮಸ್ಥರ ಪರವಾಗಿ ಗ್ರಾಮದ ಆನಂದ್ ಡಿ. ಗೌಡ ಮತ್ತು ಶ್ರೀನಿವಾಸ್ ಮಾಧ್ಯಮದೊಂದಿಗೆ ಮಾತನಾಡಿ, ಎರೆಬೊರೆ ಕಾವಲು ಗ್ರಾಮದಲ್ಲಿ ಸುಮಾರು ೮೦ ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮಸ್ಥರ ಅನುಕೂಲಕ್ಕಾಗಿ ಸರ್ವೆ ನಂಬರ್ ೮೩ರಲ್ಲಿ ಸುಮಾರು ನಾಲ್ಕು ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಸರ್ಕಾರ ಮೀಸಲಿಟ್ಟಿತ್ತು. ಹಲವು ವರ್ಷಗಳಿಂದ ಈ ಜಾಗವನ್ನು ಗ್ರಾಮಸ್ಥರು ಸ್ಮಶಾನವಾಗಿ ಬಳಸುವ ಉದ್ದೇಶದಿಂದ ಸಂರಕ್ಷಿಸಿಕೊಂಡು ಬಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ಆ ಭೂಮಿಯನ್ನು ಅತಿಕ್ರಮಿಸಿ ಗಣಿಗಾರಿಕೆ ಚಟುವಟಿಕೆ ಆರಂಭಿಸಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. ಸ್ಮಶಾನಕ್ಕೆ ಮೀಸಲಾದ ಜಾಗದಲ್ಲೇ ಕಲ್ಲು ಒಡೆಯುವ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಪರಿಣಾಮವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ವ್ಯಾಪಕವಾಗಿ ಹರಡುತ್ತಿದ್ದು, ಸ್ಫೋಟದ ವೇಳೆ ಉಂಟಾಗುವ ಕರ್ಕಶ ಶಬ್ದದಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ವೃದ್ಧರು, ಮಕ್ಕಳು ಹಾಗೂ ಮಹಿಳೆಯರಲ್ಲಿ ಉಸಿರಾಟ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಅವರು ದೂರಿದರು. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರ ನಡೆಸಲು ಸಮೀಪದಲ್ಲಿ ಸ್ಮಶಾನ ಇಲ್ಲದ ಕಾರಣ ಸುಮಾರು ೨೫ ಕಿಲೋಮೀಟರ್‌ ದೂರದ ಬೆಟ್ಟಗೌಡನಹಳ್ಳಿ ಗ್ರಾಮದ ಸ್ಮಶಾನಕ್ಕೆ ಮೃತದೇಹವನ್ನು ಕೊಂಡೊಯ್ಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಡ ಕುಟುಂಬಗಳಿಗೆ ಆರ್ಥಿಕ ಹೊರೆ ಹೆಚ್ಚುವುದರ ಜೊತೆಗೆ ದುಃಖದ ಸಮಯದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದರು.ಈ ವಿಚಾರವಾಗಿ ತಾಲೂಕು ಆಡಳಿತ, ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಪಟ್ಟ ಹಲವು ಅಧಿಕಾರಿಗಳಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಕೆಲ ಅಧಿಕಾರಿಗಳು ಗಣಿಗಾರಿಕೆ ಮಾಲೀಕರೊಂದಿಗೆ ಶಾಮೀಲಾಗಿ ಸ್ಮಶಾನ ಭೂಮಿಯಲ್ಲೇ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು. ಗಣಿಗಾರಿಕೆಗಾಗಿ ಸಂಚರಿಸುವ ಭಾರೀ ವಾಹನಗಳಿಂದ ಗ್ರಾಮ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿದೆ. ಶಾಲಾ ಮಕ್ಕಳು, ರೈತರು ಹಾಗೂ ಗ್ರಾಮಸ್ಥರು ಪ್ರತಿದಿನ ಧೂಳು ಮತ್ತು ಅಪಾಯದ ನಡುವೆಯೇ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಸರ್ಕಾರಿ ಜಾಗವನ್ನು ಅದರ ಮೂಲ ಉದ್ದೇಶಕ್ಕೆ ಬಳಸುವಂತೆ ರಕ್ಷಿಸಬೇಕು. ಅಕ್ರಮ ಗಣಿಗಾರಿಕೆಯನ್ನು ಕೂಡಲೇ ಸ್ಥಗಿತಗೊಳಿಸಿ, ಒತ್ತುವರಿಯನ್ನು ತೆರವುಗೊಳಿಸಿ ಸ್ಮಶಾನ ಭೂಮಿಯನ್ನು ಗ್ರಾಮ ಪಂಚಾಯಿತಿ ವಶಕ್ಕೆ ನೀಡಿ ಗ್ರಾಮಸ್ಥರ ಅನುಕೂಲಕ್ಕೆ ಬಳಸುವಂತೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮುರುಗೇಶ್, ಚಂದ್ರಗೌಡ, ತಿಮ್ಮಯ್ಯ, ಶಿವಕುಮಾರ್, ಜ್ಯೋತಿ, ಯಶೋಧಮ್ಮ, ರಾಜೇಶ್ವರಿ, ಮಂಜುಳಮ್ಮ, ಭಾಗ್ಯಮ್ಮ, ನಾಗಮ್ಮ, ಗೌರಮ್ಮ, ದೀಪಕ್, ಸಾಕಿಬಾಯಿ, ಮಳಲಿಗೌಡ, ಅನಿತಾ, ಐಶ್ವರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸ್ಮಶಾನ ಭೂಮಿಯನ್ನು ಉಳಿಸಿಕೊಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಣಗಿದ ಕಬ್ಬಿನ ಜೊಲ್ಲೆ ಹಿಡಿದು ರೈತರ ಅರೆಬೆತ್ತಲೆ ಪ್ರತಿಭಟನೆ
ಯಾವುದೇ ಸಂಘ ಸಂಸ್ಥೆಗಳು ಅಭಿವೃದ್ಧಿಯಾಗಲು ಒಗ್ಗಟ್ಟು ಅಗತ್ಯ: ಚಂದ್ರಶೇಖರ್