ತೀರ್ಥಹಳ್ಳಿ ಹಣಗೆರೆಕಟ್ಟೆಧಾರ್ಮಿಕ ಕೇಂದ್ರದಿಂದ ಸರ್ಕಾರಕ್ಕೆ ವಂಚನೆ ಆರೋಪ

KannadaprabhaNewsNetwork |  
Published : Jun 12, 2025, 02:07 AM IST
ಫೋಟೋ 11 ಟಿಟಿಎಚ್ 01: ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದ ವ್ಯವಸ್ಥೆಯ ಕುರಿತಂತೆ ತಹಸಿಲ್ದಾರ್ ಎಸ್.ರಂಜಿತ್ ಅಧ್ಯಕ್ಷತೆಯಲ್ಲಿ ನಡೆದ ಸಭೆ. ತಾಪಂ ಇಓ ಎಂ.ಶೈಲಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ ಇದ್ದರು. | Kannada Prabha

ಸಾರಾಂಶ

ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದಲ್ಲಿ ವ್ಯವಸ್ಥಿತವಾಗಿ ಹಣದ ವಂಚನೆಯಾಗುತ್ತಿದೆ. ಈ ವಂಚನೆಯನ್ನು ನಿಯಂತ್ರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬಿಗಿಕ್ರಮ ಕೈಗೊಳ್ಳಲು ಬುಧವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಸಾರ್ವಜನಿಕರ ಆರೋಪ । ತಹಸೀಲ್ದಾರ್‌ ನೇತೃತ್ವದ ಅಧಿಕಾರಿಗಳ ಸಭೆ । ಸರ್ಕಾರ ಗಮನಕ್ಕೆ ತಂದು ಕ್ರಮಕ್ಕೆ ತೀರ್ಮಾನ

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಆದಾಯ ಬರುತ್ತಿರುವ ಹಣಗೆರೆಕಟ್ಟೆ ಧಾರ್ಮಿಕ ಕೇಂದ್ರದಲ್ಲಿ ವ್ಯವಸ್ಥಿತವಾಗಿ ಹಣದ ವಂಚನೆಯಾಗುತ್ತಿದೆ. ಈ ವಂಚನೆಯನ್ನು ನಿಯಂತ್ರಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬಿಗಿಕ್ರಮ ಕೈಗೊಳ್ಳಲು ಬುಧವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಹಣಗೆರೆಕಟ್ಟೆಯಲ್ಲಿ ನಡೆದಿರುವ ಆದಾಯ ಸೋರಿಕೆ ನಿಯಂತ್ರಣ ಸೇರಿದಂತೆ ಕೇಂದ್ರದ ಸುವ್ಯವಸ್ಥೆಯ ಕುರಿತಂತೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಈ ಕೇಂದ್ರದಲ್ಲಿ ಜನರನ್ನು ವಂಚಿಸಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಲೇ ಇವೆ. ಮುಜರಾಯಿ ಇಲಾಖೆಯ ನಿರ್ದೆಶನದಂತೆ ಮುಜಾವರ್ ಒಬ್ಬರೇ ಇರಬೇಕು. ಆದರೆ ವಿಶೇಷ ದಿನಗಳಲ್ಲಿ ಮುಜಾವರ್ ಕಡೆಯಿಂದ ನಾಲ್ಕಾರು ಜನಗಳು ಇದ್ದು ಭಕ್ತಾದಿಗಳು ಹುಂಡಿಗೆ ಹಣ ಹಾಕದಂತೆ ಮುಗ್ದ ಭಕ್ತರನ್ನು ವಂಚಿಸಿ ದಾರಿ ತಪ್ಪಿಸುತ್ತಿದ್ದಾರೆ ಎಂಬ ಬಗ್ಗೆಯೂ ಜನರು ದೂರಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಇದೇ ವರ್ತನೆ ಮುಂದುವರೆದಿರುವ ಬಗ್ಗೆ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ತೀವ್ರ ಅಸಮಾದಾನ ವ್ಯಕ್ತಪಡಿಸಿದರು.

ರಾಜ್ಯದಾದ್ಯಂತ ಕೇಂದ್ರಕ್ಕೆ ಬರುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ವಾಹನ ನಿಲುಗಡೆ, ಸರತಿ ಸಾಲಿನ ವ್ಯವಸ್ಥೆ ಹಾಗೂ ಮಳೆ ಬಿಸಿಲಿಗೆ ನೆರಳು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವ್ಯಾಪಾರಸ್ಥರು ಪೂಜೆ ಮತ್ತು ಸೇವೆ ಪರಿಕರಗಳನ್ನು ರಸ್ತೆಯಲ್ಲೇ ನಿಂತು ಮಾರಾಟ ಮಾಡುವುದರಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಈ ಎಲ್ಲಾ ಗೊಂದಲಗಳ ಬಗ್ಗೆಯೂ ಮುಜರಾಯಿ ಇಲಾಖೆ ಗಮನ ಹರಿಸಬೇಕಿದೆ ಎಂದೂ ಸದಸ್ಯರು ಆಗ್ರಹಿಸಿದರು.

ಸಭೆಯಲ್ಲಿ ತಾಪಂ ಇಒ ಎಂ.ಶೈಲಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಸದಸ್ಯರುಗಳಾದ ಸುನಿಲ್ ಕುಮಾರ್ ಶಿರನೆಲ್ಲಿ, ಕುಣಜೆ ಸತ್ಯನಾರಾಯಣ, ಜುಲೇನಾಭಿ,ಸುಮ ಕೆರೆಹಳ್ಳಿ,ಮಹಮದ್ ಬಷೀರ್, ಸಿರಿಗೆರೆ ವಲಯಾರಣ್ಯಾಧಿಕಾರಿ ಅರವಿಂದ್, ರಾಜಸ್ವ ನಿರೀಕ್ಷಕ ಇನಾಯತ್, ಪಿಡಿಓ ನವೀನ್ ಮುಂತಾದವರು ಇದ್ದರು.

ಮುಜಾವರ್ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಇವರು ತಮ್ಮ ಮನೋಭಾವ ಬದಲಿಸಿಕೊಳ್ಳದ ಪಕ್ಷದಲ್ಲಿ ಬಿಗಿಕ್ರಮ ಅನಿವಾರ್ಯವಾಗಲಿದೆ. ಹಣಗೆರೆಕಟ್ಟೆಯಲ್ಲಿ ಅನಧಿಕೃತ ಗ್ಯಾಸ್ ಸಿಲಿಂಡರ್ ಬಳಕೆಯಾಗುತ್ತಿರುವುದು ಅಪಾಯಕಾರಿಯಾಗಿದೆ. ಈ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ಗ್ಯಾಸ್ ಸಿಲಿಂಡರ್ ವಿತರಿಕರಿಗೂ ನೋಟಿಸ್ ನೀಡಲಾಗಿದೆ. ಪ್ಲಾಸ್ಟಿಕ್ ನಿಯಂತ್ರಣದ ಸಲುವಾಗಿ ದೇವಸ್ಥಾನದ ಕಡೆಯಿಂದ ಬಟ್ಟೆ ಚೀಲ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ಇದೆ.

ಎಸ್.ರಂಜಿತ್, ತಹಸೀಲ್ದಾರ್.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ