ಮುಂಡಗೋಡ: ಪಟ್ಟಣದ ಹೊರವಲಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕಾಲೇಜಿನ ಹೊರಗುತ್ತಿಗೆ ಡಿ ದರ್ಜೆಯ ಮಹಿಳಾ ಸಿಬ್ಬಂದಿಗಳಿಬ್ಬರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಪ್ರಾಂಶುಪಾಲ ಮಲ್ಲೇಶಪ್ಪ ಹುಡೇದ ಅವರು, ತಾವು ಹೇಳಿದ ಹಾಗೆ ಕೇಳಬೇಕು ಹಾಗೂ ತಮಗೆ ಹಣ ನೀಡಬೇಕು. ಇಲ್ಲದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಹೆದರಿಸುತ್ತಾರೆಂದು ಡಿ ದರ್ಜೆಯ ಇಬ್ಬರು ಮಹಿಳಾ ಸಿಬ್ಬಂದಿ ಆರೋಪ ಮಾಡಿದ್ದು, ರಜೆ ಹಾಕದೆ ಸೇವೆ ಸಲ್ಲಿಸಿದರೂ ಹಾಜರಿ ಪುಸ್ತಕದಲ್ಲಿ ಗೈರುಹಾಜರು ಎಂದು ಹಾಕುತ್ತಾರೆ. ವಿದ್ಯಾರ್ಥಿಗಳ ಗುರುತಿನ ಚೀಟಿಗಾಗಿ ₹೪೦ ಪಡೆಯುವ ಬದಲು ₹೭೫ ಪಡೆಯುತ್ತಾರೆ.ಪ್ರಾಕ್ಟಿಕಲ್ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಂದ ಸಾವಿರಾರು ರುಪಾಯಿ ಹಣ ವಸೂಲಿ ಮಾಡಿ ಕಾಲೇಜಿನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾ ತೆಗೆಸಿದ್ದಾರೆ. ಆ ಮೂಲಕ ನಕಲು ಮಾಡಲು ಅವಕಾಶ ನೀಡಿದ್ದಾರೆ. ಅಲ್ಲದೇ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರದ ಅನುದಾನವನ್ನು ಲೂಟಿ ಮಾಡುತ್ತಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಿಷಯ ಮುಂಡಗೋಡ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಂಚಲನ ಮೂಡಿಸಿದೆ.ಗ್ರಾಪಂ ಕಚೇರಿ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ
ಶಿರಸಿ: ಕೊರ್ಲಕಟ್ಟಾದ ಹಲಗದ್ದೆ ಗ್ರಾಪಂ ಕಾರ್ಯಾಲಯದ ಎದುರಿನ ಗೇಟ್ ಹತ್ತಿರ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ದಿನಕರ ಸುರೇಶ ಗೌಡ ದೂರು ನೀಡಿದ್ದಾರೆ.ಯಾರೋ ಕಳ್ಳರು ಮೇ ೨೭ರಂದು ಮಧ್ಯಾಹ್ನ ಕೊರ್ಲಕಟ್ಟಾದಲ್ಲಿರುವ ಹಲಗದ್ದೆ ಗ್ರಾಪಂ ಕಾರ್ಯಾಲಯದ ಎದುರಿನ ಗೇಟ್ ಹತ್ತಿರ ನಿಲ್ಲಿಸಿದ್ದ ಅಂದಾಜು ₹೨೦ ಸಾವಿರ ಮೌಲ್ಯದ ಹಿರೋ ಫ್ಯಾಷನ್ ಪ್ರೋ ಬೈಕ್ (ಕೆಎ ೩೧ ಯು- ೩೨೪೩) ಕಳ್ಳತನ ಮಾಡಿದ್ದಾರೆಂದು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.