ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಂಬಾಕು ಉದ್ಯಮದ ಹಸ್ತ ಕ್ಷೇಪದಿಂದ ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ತಿಳಿಸಿದರು.
ಶುಕ್ರವಾರ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರಾಥಮಿಕ ಶಾಲಾ ಆವರಣದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವ ತಂಬಾಕು ರಹಿತ ದಿನವಾದ ಮೇ 31 ರಂದು ತಂಬಾಕು ಹಸ್ತಕ್ಷೇಪದಿಂದ ಮಕ್ಕಳ ರಕ್ಷಣೆ ಈ ವರ್ಷದ ಥೀಮ್ ಆಗಿದೆ. ತಂಬಾಕು ಸೇವನೆ ಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಬಳಕೆ ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ಜಾಗತಿಕ ಅಭಿಯಾನ ಇದಾಗಿದೆ ಎಂದರು.ಜೇಸಿ ಉಪಾಧ್ಯಕ್ಷ ಅಪೂರ್ವ ರಾಘು ಮಾತನಾಡಿ, ಮಕ್ಕಳಿಗೆ ತಂಬಾಕು ಮಾರಾಟ ಮಾಡಬಾರದು ಎಂಬ ಕಾನೂನೇ ಇದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ಅಪಾಯಕಾರಿ ಕಾಯಿಲೆ ಬರುತ್ತಿದೆ. ಆದ್ದರಿಂದ ತಂಬಾಕು ಉತ್ಪನ್ನಗಳ ಘಟಕವನ್ನು ಬಂದ್ ಮಾಡಬೇಕು. ತಂಬಾಕು ಬೆಳೆಯುವ ರೈತರು ತಂಬಾಕು ಬೆಳೆಯವುದನ್ನು ಬಿಟ್ಟು ಬೇರೆ ಬೆಳೆಯ ಬಗ್ಗೆ ಚಿಂತನೆ ಮಾಡಬೇಕು. ಮನೆಯಲ್ಲಿ ಪೋಷಕರು ತಂಬಾಕು ಸೇವನೆ ಮಾಡುತ್ತಿದ್ದರೆ ಮಕ್ಕಳೇ ತಂದೆ, ತಾಯಿಗೆ ಬುದ್ದಿ ಹೇಳಬೇಕು ಎಂದರು.
ಸಭೆಯಲ್ಲಿ ಜೇಸಿ ಕಾರ್ಯದರ್ಶಿ ವಿನುತ, ಉಪಾಧ್ಯಕ್ಷ ಪುರುಶೋತ್ತಮ್, ಜೇಸಿ ನಿರ್ದೇಶಕ ಪಿ.ಐ.ಎಲ್ದೋ, ಸದಸ್ಯರಾದ ಆದರ್ಶ, ಅನಿಕೇತ, ಶಾಲಾ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಲಕ್ಷ್ಮಣಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ, ತಹಸೀಲ್ದಾರ್ ರಮೇಶ್ ಮತ್ತಿತರರು ಇದ್ದರು. ನಂತರ ಶಾಲಾ ಮಕ್ಕಳಿಗೆ ಜೇಸಿ ಸಂಸ್ಥೆಯಿಂದ ಸಿಹಿ ಹಂಚಲಾಯಿತು.