ಬಳ್ಳಾರಿಯಲ್ಲಿ ಕೆಎಎಸ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಪ್ರತಿಭಟನೆ

KannadaprabhaNewsNetwork |  
Published : Aug 28, 2024, 12:48 AM IST
ಬಳ್ಳಾರಿಯಲ್ಲಿ ಪ್ರತಿಭಟನೆ | Kannada Prabha

ಸಾರಾಂಶ

ನಗರದ ಸಂತ ಜಾನ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಡೆದ ಕೆಎಎಸ್ ಪತ್ರಿಕೆ-1ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಕೆಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ಸಂತ ಜಾನ್ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಡೆದ ಕೆಎಎಸ್ ಪತ್ರಿಕೆ-1ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಕೆಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಲೇಜಿನ ರೂಮ್‌ ಸಂಖ್ಯೆ 18 ಮತ್ತು 19ರಲ್ಲಿ ನೀಡಲಾದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಪರೀಕ್ಷಾ ಕೇಂದ್ರಕ್ಕೆ ಬರುವ ಮುಂಚೆಯೇ ಪ್ರಶ್ನೆಪತ್ರಿಕೆಯ ಬಂಡಲ್‌ನ ಸೀಲ್ ತೆರೆಯಲಾಗಿತ್ತು. ಈ ಕುರಿತು ಪರೀಕ್ಷಾ ಕೇಂದ್ರದಲ್ಲಿಯೇ ಪ್ರಶ್ನಿಸಿದರೂ ಸಮರ್ಪಕ ಉತ್ತರ ನೀಡದೇ ಆಮೇಲೆ ನೋಡೋಣ ಎಂದು ಕೊಠಡಿಯ ಮೇಲ್ವಿಚಾರಕರು ಸಮಜಾಯಿಷಿ ನೀಡಿದರು ಎಂದು ಪರೀಕ್ಷಾರ್ಥಿಗಳು ಆರೋಪಿಸಿದರು. ಅಲ್ಲದೆ, ಸರ್ಕಾರ ಮರು ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಆದರೆ, ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಕೆಎಎಸ್‌ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಹಿನ್ನೆಲೆಯಲ್ಲಿ ತಹಸೀಲ್ದಾರ್, ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಶ್ನೆಪತ್ರಿಕೆ ತೆರೆಯುವಾಗ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಆರೋಪ ಮಾಡಿರುವ ಪರೀಕ್ಷಾರ್ಥಿಗಳಿಗೆ ವಿಡಿಯೋ ಚಿತ್ರೀಕರಣ ತೋರಿಸಿ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ರಾಜ ಸರ್ಕಾರದ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಭರ್ತಿಗೆ ಮಂಗಳವಾರ ನಡೆದ ಕೆಪಿಎಸ್ಸಿ ಪೂವಭಾವಿ ಪರೀಕ್ಷೆ, ಕೆಲ ಸಣ್ಣಪುಟ್ಟ ಗೊಂದಲಗಳ ನಡುವೆ ಎಲ್ಲೆಡೆ ಸುಸೂತ್ರವಾಗಿ ನಡೆದಿದೆ. ಆದರೆ, ಕೆಲ ಪ್ರಶ್ನೆಗಳಲ್ಲಿ ಅಸ್ಪಷ್ಟತೆ, ಕನ್ನಡ ಭಾಷಾಂತರ ಬಹಳ ಕಳಪೆಯಿಂದ ಕೂಡಿತ್ತು ಎಂಬ ಆರೋಪಗಳು ಕೇಳಿ ಬಂದಿವೆ.ಕರ್ನಾಟಕ ಲೋಕಸೇವಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದ ಎಲ್ಲ 564 ಕೇಂದ್ರಗಳಲ್ಲೂ ಸುಸೂತ್ರವಾಗಿ ಪರೀಕ್ಷೆ ನಡೆದಿದೆ. ಪರೀಕ್ಷೆಗೆ ನೋಂದಾಯಿಸಿದ್ದ 2.10 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ 1.31 ಲಕ್ಷ (ಶೇ.62) ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ತಿಳಿಸಿದೆ.

ಬೆಳಗಾವಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಒಎಂಆರ್‌ ಶೀಟ್‌ ನೀಡುವಲ್ಲಿ ವಿಳಂಬವಾಗಿದ್ದರಿಂದ ವಿದ್ಯಾರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾದ ಘಟನೆ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳು ನಷ್ಟವಾದ ಸಮಯಕ್ಕೆ ಸರಿಯೊಂದುವಂತೆ ಪರೀಕ್ಷೆ ಬರೆಯಲು ಹೆಚ್ಚುವರಿ ಕಾಲಾವಕಾಶ ನೀಡಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ಎಲ್ಲ ಅಭ್ಯರ್ಥಿಗಳನ್ನೂ ಮೆಟಲ್‌ ಡಿಟೆಕ್ಟರ್‌ ಮೂಲಕ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಯಿತು. ಬೆಂಗಳೂರು ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಕೆಲ ಅಭ್ಯರ್ಥಿಗಳು ನಿಷೇಧಿತ ಉದ್ದ ತೋಳಿನ ಅಂಗಿ, ಶೂ, ಹೆಣ್ಣು ಮಕ್ಕಳು ಕೆಲ ಆಭರಣ ಧರಿಸಿ ಬಂದಿದ್ದು ಕಂಡು ಬಂತು. ಅವರನ್ನು ಪರೀಕ್ಷಾ ಕೇಂದ್ರದ ಬಾಗಿಲಲ್ಲೇ ತಡೆದ ಸಿಬ್ಬಂದಿ ಅಂಗಿ ತೋಳು ಕತ್ತರಿಸಿ, ಶೂ, ಆಭರಣ ಮತ್ತಿತರ ನಿಷೇಧಿತ ವಸ್ತುಗಳನ್ನು ಕಳಚಿಟ್ಟು ಕೇಂದ್ರದೊಳಗೆ ಹೋಗುವಂತೆ ಸೂಚಿಸಿದರು. ಭದ್ರತಾ ದೃಷ್ಟಿಯಿಂದಲೋ ಎನ್ನುವಂತೆ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಈ ಬಾರಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ಆಯೋಜಿಸಲಾಗಿತ್ತು.

ಪರೀಕ್ಷೆಯಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಪ್ರಶ್ನೆ ಪತ್ರಿಕೆ 1 ಅತ್ಯಂತ ಕಠಿಣವಾಗಿತ್ತು. ಕೆಲ ಪ್ರಶ್ನೆಗಳು ಬಹಳ ಉದ್ದವಾಗಿದ್ದು, ಅಸ್ಪಷ್ಟತೆಯಿಂದ ಕೂಡಿದ್ದವು. ಇನ್ನು ಪ್ರಶ್ನೆಗಳ ಕನ್ನಡ ತರ್ಜುಮೆಯಂತೂ ಹೇಳತೀರದಷ್ಟು ಕಳಪೆಯಾಗಿತ್ತು ಎಂದು ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ತನ್ನ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಅಭ್ಯರ್ಥಿಯೊಬ್ಬರು, ಹಳಗನ್ನಡ ನಡುಗನ್ನಡ ಮತ್ತು ಹೊಸಗನ್ನಡ ಎಂತೆಂಥ ಕನ್ನಡಾನೋ ನೋಡಿಬಿಟ್ಟಿದ್ದೀನಿ ಗುರು. ಆದರೆ, ಕೆಪಿಎಸ್‌ಸಿ ಅವರು ಪ್ರಶ್ನೆ ಪತ್ರಿಕೆಯಲ್ಲಿ ಬಳಸೋ ಕನ್ನಡವನ್ನು ನೋಡೋಕಾಗ್ತಿಲ್ಲ ಎಂದು ಟೀಕಿಸಿದ್ದಾರೆ.

ಮತ್ತೊಬ್ಬ ಅಭ್ಯರ್ಥಿ, ಈ ಬಾರಿ ಅತ್ಯಂತ ಕೆಟ್ಟದಾಗಿ ಪ್ರಶ್ನೆ ಪತ್ರಿಕೆ ಸಿದ್ದಪಡಿಸಲಾಗಿತ್ತು. ಹಿಂದೆಂದೂ ಈ ಮಟ್ಟದ ಪ್ರಶ್ನೆ ಪತ್ರಿಕೆ ನೋಡಿರಲಿಲ್ಲ. ಅತ್ಯಂತ ಉದ್ದವಾದ ಪ್ರಶ್ನೆಗಳು, ಅವುಗಳಲ್ಲಿ ಹಲವು ಅಸ್ಪಷ್ಟತೆ, ಲೋಪಗಳು. ಮೊಹಮ್ಮದ್ ಸನಾವುಲ್ಲಾ ಎಂಬ ಹೆಸರು ಪತ್ರಿಕೆ 1 ಮತ್ತು 2 ಎರಡರಲ್ಲೂ ಇದೆ. ಇಂಗ್ಲಿಷ್‌ನ ಕೆಲ ಪದಗಳನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಬಳಸಿರುವ ಪದಗಳು ಕನ್ನಡದ ನಿಘಂಟಿನಲ್ಲೇ ಇಲ್ಲ. ಇವೆಲ್ಲವೂ ಪ್ರಶ್ನೆ ಪತ್ರಿಕೆ ತಯಾರಿಸುವ ಗುಣಮಟ್ಟ ಹಾಗೂ ಮಾನದಂಡಗಳು ಎಷ್ಟು ಕುಸಿದಿವೆ ಎನ್ನುವುದನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?