ಫಸಲ್‌ ಬಿಮಾ ಯೋಜನೆಯಡಿ ಅವ್ಯವಹಾರ ಆರೋಪ

KannadaprabhaNewsNetwork |  
Published : Oct 02, 2024, 01:15 AM IST
ಬರ ಪರಿಹಾರಕ್ಕಾಗಿ ರೈತರ ಪ್ರತಿಭಟನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ಆಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ನಗರದ ಡಾ.ಬಿ.ಆರ್‌.ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾ ಸಾಂಖಿಕ ಕಚೇರಿ (ಜಿಲ್ಲಾ ಅಂಕಿಸಂಖ್ಯೆ ಕಚೇರಿ) ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಫಸಲ್ ಬಿಮಾ ಯೋಜನೆಯಡಿ ಸಾಕಷ್ಟು ಅವ್ಯವಹಾರ ಆಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ನಗರದ ಡಾ.ಬಿ.ಆರ್‌.ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾ ಸಾಂಖಿಕ ಕಚೇರಿ (ಜಿಲ್ಲಾ ಅಂಕಿಸಂಖ್ಯೆ ಕಚೇರಿ) ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಫಸಲ್ ಬಿಮಾ ಯೋಜನೆಯಲ್ಲಿ ಸಾವಿರಾರು ರೈತರಿಗೆ ಅನ್ಯಾಯ ಆಗಿದೆ. ಆಗಿರುವ ಅನ್ಯಾಯ ಸರಿಪಡಿಸಲು ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಆದ್ದರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ರೈತರು ನಡೆಸುತ್ತಿರುವ ಹೋರಾಟಕ್ಕೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಳೆದ ಬರಗಾಲದ ವೇಳೆ ಸರ್ಕಾರದಿಂದ ಸಾವಿರ ಕೋಟಿ ಬರ ಪರಿಹಾರ ಒದಗಿಸುವ ಬದಲು ಕೇವಲ ₹ 413 ಕೋಟಿ ಪರಿಹಾರ ನೀಡಲಾಗಿದೆ. ಜಿಲ್ಲೆಯ 13 ತಾಲೂಕುಗಳಲ್ಲಿ ರೈತರು ತುಂಬಿದ್ದ ಬೆಳೆ ವಿಮೆಯ ಪರಿಹಾರವೇ ಬಂದಿಲ್ಲ. ರೈತರಿಗೆ ಪರಿಹಾರ ಕೊಡುವ ವಿಚಾರದಲ್ಲಿ ವಿಮಾ ಕಂಪನಿಯೊಂದಿಗೆ ಶಾಮೀಲಾಗಿರುವ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ಅಂಕಿಸಂಖ್ಯೆ ಇಲಾಖೆಗಳು ಭ್ರಷ್ಟಾಚಾರ ಮಾಡಿವೆ. ಇದೀಗ ಒಬ್ಬರ ಮೇಲೊಬ್ಬರು ದೂರುತ್ತ ಕಾಲಹರಣ ಮಾಡುತ್ತಿದ್ದಾರೆ. ರೈತರ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್‌ರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಪ್ರತಿ ತಿಂಗಳು ನಡೆಸುತ್ತೇವೆ ಎಂದಿದ್ದ ಜನಸಂಪರ್ಕ ಸಭೆಯನ್ನು ಮೊದಲ ತಿಂಗಳು ಮಾತ್ರ ಮಾಡಿ, ನಂತರದ ಸಭೆಗಳು ನಿಂತುಹೋಗಿವೆ. ಇಲಾಖೆಯಲ್ಲಿ ಆದ ಅವ್ಯವಹಾರ ತನಿಖೆ ಮಾಡಿಸಬೇಕು. 2023-24ನೇ ಸಾಲಿನ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಿಸುವಂತೆ ಆಗ್ರಹಿಸಿದರು.ಕೊಲ್ಹಾರ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಂದ ಇದಕ್ಕೂ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ. ರೈತರ ಹೋರಾಟ ಜಿಲ್ಲೆಯ ಮುಖ್ಯಸ್ಥರು ಎನಿಸಿಕೊಂಡಿರುವ ಡಿಸಿ ಅವರ ಕಣ್ಣಿಗೆ ಕಾಣುತ್ತಿಲ್ಲವೇ?, ಜಿಲ್ಲಾಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ, ಅಂಕಿಸಂಖ್ಯೆ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ಸೂಚನೆ ನೀಡಿ ಪರಿಹಾರ ಕೊಡಿಸುವ ಕೆಲಸ ಆಗಬೇಕಿದೆ. ತಕ್ಷಣ ಬರಗಾಲದ ಪರಿಹಾರವನ್ನು ರೈತರಿಗೆ ಕೊಡುವ ಮೂಲಕ ಸಂಕಷ್ಟದಿಂದ ಪಾರುಮಾಡಬೇಕು. ಒಂದು ವೇಳೆ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಬರಬೇಕಿರುವ ಬರ ಪರಿಹಾರ ಬರದಿದ್ದರೆ ರೈತರು ಎತ್ತು, ಬಂಡಿ, ಜನ, ಜಾನುವಾರುಗಳೊಂದಿಗೆ ಬಂದು ನಗರದ ಗಾಂಧಿವೃತ್ತದಲ್ಲಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.ದೇವರ ಹಿಪ್ಪರಗಿ ತಾಲೂಕು ಅಧ್ಯಕ್ಷ ಈರಪ್ಪ ಕುಳೆಕುಮಟಗಿ, ಜಿಲ್ಲಾ ಸಂಚಾಲಕ ರಾಮನಗೌಡ ಮಾತನಾಡಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಹಾಂತೇಶ ಮಮದಾಪುರ, ಮಹಾದೇವಪ್ಪ ತೇಲಿ, ಶ್ರೀಶೈಲ ವಾಲಿಕಾರ, ಮಕಬುಲ್, ಸಾತಲಿಂಗಯ್ಯ ಸಾಲಿಮಠ, ಮಹಾದೇವ ಬನಸೋಡೆ, ಎಂ.ಹೆಚ್.ಪೂಜಾರ, ಸುಜಾತಾ ಅವಟಿ, ಸವಿತಾ ವಾಲಿಕಾರ, ಸಂಗೀತಾ ರಾಠೋಡ, ಮಹಾದೇವ ಕದಂ, ಗೌಡಪ್ಪಗೌಡ ಹಳಿಮನಿ, ಬಸವರಾಜ ಮಸೂತಿ, ಅನವೇಶ ಜಮಖಂಡಿ, ಶಾನೂರ ನಂದರಗಿ, ಆತ್ಮಾನಂದ ಭೈರೊಡಗಿ, ಶಶಿಕಾಂತ ಬಿರಾದಾರ, ಸತ್ಯಪ್ಪ ಕಲ್ಲೊಳ್ಳಿ, ಕುಮಾರ ಕಾಪ್ಸೆ ಸೇರಿದಂತೆ ಹಲವರು ಭಾಗವಹಿಸಿದ್ದರು.ಬಾಕ್ಸ್ಪರಿಹಾರ ಕೊಡಿಸುವ ಭರವಸೆ

ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ತೋಟಗಾರಿಕಾ ಸಹಾಯಕ ನಿರ್ದೇಶಕ ರಾಹುಲ್ ಭಾವಿದೊಡ್ಡಿ, ಜಂಟಿ ಕೃಷಿ ಇಲಾಖೆ ಸಿಬ್ಬಂದಿ, ಹಾಗೂ ಜಿಲ್ಲಾ ಪ್ರಭಾರಿ ಸಂಖ್ಯಾ ಸಂಗ್ರಣಾಧಿಕಾರಿ ಅಲ್ತಾಫ್ ಮನಿಯಾರ ಸೇರಿ ಮಾಹಿತಿ ನೀಡಲು ಮೇಲಿಂದ ಆದೇಶ ಬಂದಿದೆ. ನೀವೂ ಕೇಳಿದ ಮಾಹಿತಿ ನೀಡುತ್ತೇವೆ. ನಂತರ ಜಿಲ್ಲಾಧಿಕಾರಿಗಳು ಹಾಗೂ ವಿಮೆಗೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಡನೆ ಸಭೆ ನಡೆಸಿದರು. ರೈತರಿಗೆ ಪರಿಹಾರ ಕೊಡಿಸಬೇಕು ಎಂಬ ಮನವಿ ಒಪ್ಪಿಕೊಂಡ ನಂತರ ಹೋರಾಟ ಹಿಂಪಡೆಯಲಾಯಿತು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌