ಹೊಸಪೇಟೆ: ತಂದೆ, ತಾಯಿ, ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಅವರು ತಂದೆ, ತಾಯಿಯನ್ನು ಕಳೆದುಕೊಳ್ಳಲು ಇಚ್ಚಿಸುವುದಿಲ್ಲ. ಆಗ ಯಾವುದೇ ವೃದ್ಧಾಶ್ರಮದ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಇತ್ತೀಚೆಗೆ ಹಿರಿಯರಿಗೆ ಮನೆಗಳಲ್ಲಿ ಅಗೌರವ ತೋರುವುದು ಕಂಡುಬರುತ್ತಿದೆ. ಹಿರಿಯರು ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿರುತ್ತಾರೆ. ಅವರಿಗೆ ಗೌರವ ಸಲ್ಲಿಸಬೇಕು ಎನ್ನುವ ಸಂದೇಶ ರವಾನಿಸುವುದು, ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಯಾವ ಕುಟುಂಬಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ನೀಡುವುದಿಲ್ಲಯೋ ಅಂತಹ ಕುಟುಂಬಗಳು ಸಂತೋಷ, ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂದರು.
ಪೋಷಕರು ಮಕ್ಕಳಿಗಾಗಿ ಆಸ್ತಿ ಮಾಡುವುದನ್ನು ನಿಲ್ಲಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರೆ ಅವರು ಮುಂದೆ ಪೋಷಕರನ್ನು ಮಕ್ಕಳ ರೀತಿ ನೋಡಿಕೊಳ್ಳುತ್ತಾರೆ. ಹಿರಿಯ ನಾಗರಿಕರು ಜೀವನದಲ್ಲಿ ಎಲ್ಲವನ್ನು ತಿಳಿದ ಮುಗ್ಧರಂತೆ ಇರುತ್ತಾರೆ. ಅವರನ್ನು ಅಷ್ಟೇ ಮುಗ್ಧತೆಯಿಂದ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಎಂದರು.ವಿಜಯನಗರ ಜಿಲ್ಲೆಯ ರಂಗಭೂಮಿ, ಸಮಾಜಸೇವೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಗರಿಬೊಮ್ಮನಹಳ್ಳಿ ತಾಲೂಕಿನ ಕೆ.ಲಕ್ಷ್ಮೀಪತಿ, ಕೊಟ್ಟೂರು ತಾಲೂಕಿನ ಎಂ.ಶೇಖರಪ್ಪ, ಹೊಸಪೇಟೆ ತಾಲೂಕಿನ ಹನುಮಂತಪ್ಪ ನಾಯಕರ, ಹರಪನಹಳ್ಳಿ ತಾಲೂಕಿನ ಷಡಕ್ಷರಪ್ಪ, ಕೂಡ್ಲಿಗಿ ತಾಲೂಕಿನ ವೆಂಕಟೇಶ ಕೆ., ಹೂವಿಹಡಗಲಿ ತಾಲೂಕಿನ ಶಂಕ್ರಯ್ಯ ತೋಟದೇವರಮಠ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮಣ್ಣ ಇವರಿಗೆ ಸನ್ಮಾನಿಸಲಾಯಿತು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ವೇತಾ ಎಸ್., ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸುದೀಪಕುಮಾರ ಉಂಕ್ರಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಅವಿನಾಶ ಲಿಂಗ ಎಸ್. ಗೋಟಖಿಂಡಿ, ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ ಮತ್ತು ಬ್ರಹ್ಮಕುಮಾರಿ ಮಾನಸಾ ಸೇರಿದಂತೆ ಹಿರಿಯ ನಾಗರಿಕರು ಇದ್ದರು.