ನಮ್ಮ ಪತ್ರಕರ್ತರು ತಂತ್ರಜ್ಞಾನಗಳ ಜ್ಞಾನ ಪಡೆಯುವುದು ಅಗತ್ಯ. ಎಐ (ಕೃತಕ ಬುದ್ಧಿಮತ್ತೆ ) ತಂತ್ರಜ್ಞಾನ ಇಂದು ಅನೇಕ ವಲಯಗಳಲ್ಲಿ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತಿದ್ದು, ಪತ್ರಿಕೋದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಬೆಳಗಾವಿ ಹಿರಿಯ ಪತ್ರಕರ್ತ ರಿಷಿಕೇಶ್ ಬಹದ್ದೂರ್ ದೇಸಾಯಿ ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಅಥಣಿ
ನಮ್ಮ ಪತ್ರಕರ್ತರು ತಂತ್ರಜ್ಞಾನಗಳ ಜ್ಞಾನ ಪಡೆಯುವುದು ಅಗತ್ಯ. ಎಐ (ಕೃತಕ ಬುದ್ಧಿಮತ್ತೆ ) ತಂತ್ರಜ್ಞಾನ ಇಂದು ಅನೇಕ ವಲಯಗಳಲ್ಲಿ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಇದರಿಂದ ನಿರುದ್ಯೋಗ ಹೆಚ್ಚಾಗುತ್ತಿದ್ದು, ಪತ್ರಿಕೋದ್ಯಮ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಬೆಳಗಾವಿ ಹಿರಿಯ ಪತ್ರಕರ್ತ ರಿಷಿಕೇಶ್ ಬಹದ್ದೂರ್ ದೇಸಾಯಿ ಕಳವಳ ವ್ಯಕ್ತಪಡಿಸಿದರು.ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್‌ಎಸ್ಎಂಎಸ್ ಮಹಾವಿದ್ಯಾಲಯದ ಖೋತ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪತ್ರಕರ್ತರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಸಮಾಜದಲ್ಲಿನ ನ್ಯೂನತೆಗಳನ್ನು ತಿದ್ದಲು ಸುದ್ದಿ ಮಾಧ್ಯಮಗಳು ಪ್ರಬಲ ಅಸ್ತ್ರವಾಗಿದ್ದು, ತಮ್ಮ ಬದ್ಧತೆ ಎಂದಿಗೂ ಮರೆಯಬಾರದು. ಯಾರನ್ನು ಒಲಿಸುವ ಕೆಲಸ ಮಾಡದೇ ಪ್ರಾಮಾಣಿಕವಾದ ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಕಾನೂನು ಅರಿವು ಸೇರಿದಂತೆ ಎಲ್ಲ ರಂಗಗಳ ಮಾಹಿತಿಯನ್ನು ಹೊಂದಿರಬೇಕು. ಸಾಮಾಜಿಕ ಮೌಲ್ಯಗಳನ್ನು ಕಾಪಾಡುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.ಯುವ ಮುಖಂಡ ಚಿದಾನಂದ ಸವದಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೊಸಿಯಲ್ ಮೀಡಿಯಾ ಹೆಚ್ಚು ಸದ್ದು ಮಾಡುತ್ತಿದ್ದು, ಇದರಿಂದ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಮುದ್ರಣ ಮಾಧ್ಯಮ ವಸ್ತುನಿಷ್ಠ ವರದಿಗಳನ್ನು ನೀಡುವ ಮೂಲಕ ಜನರ ವಿಶ್ವಾಸ ಗಳಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಡಿಸಿದರು.ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಮಾತನಾಡಿ, ಪತ್ರಿಕೋದ್ಯಮ ಸಮಾಜದ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಪತ್ರಕರ್ತರು ಸಮಾಜ ಮತ್ತು ಸರ್ಕಾರ ಮಧ್ಯ ಸೇತುವೆಯಂತೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಪತ್ರಕರ್ತರಿಗೆ ಜೀವನದ ಭದ್ರತೆಯ ಯೋಜನೆಗಳನ್ನು ಒದಗಿಸಬೇಕು ಎಂದು ತಿಳಿಸಿದರು.ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಮತ್ತು ಪತ್ರಿಕೆಗಳ ಪಾತ್ರ ಮಹತ್ತರವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಪತ್ರಕರ್ತರಿಗಾಗಿ ಉಚಿತ ಜೀವ ವಿಮೆ, ಸಾರಿಗೆ ಸೌಲಭ್ಯ, ಪಿಂಚಣಿ ಯಂತಹ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸಿದರು.
ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಡಾ.ಬಸವಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ವೇಳೆ ಹಿರಿಯ ಪತ್ರಕರ್ತ ಮಲಗೌಡ ಪಾಟೀಲ ಅವರಿಗೆ ಶಿವಪುತ್ರ ಯಾದವಾಡ ಪ್ರಶಸ್ತಿ ಹಾಗೂ ಚಂದ್ರಶೇಖರ ತೆವರಟ್ಟಿ ಅವರಿಗೆ ಸಿ.ಎ.ಇಟ್ನಾಳಮಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಹಸೀಲ್ದಾರ್ ಸಿದರಾಯ ಬೋಸಗಿ, ಪ್ರಗತಿಪರ ರೈತ ಮೈನುದ್ದಿನ್ ಡೋಂಗರಗಾಂವ, ಕನ್ನಡಪರ ಹೋರಾಟಗಾರ ಶಬ್ಬೀರ್ ಸಾತಬಚ್ಚಿ, ಪಿಎಸೈ ವಿಜಯಕುಮಾರ ಚುಬಚಿ, ಸಿಎಂ ಪದಕ ಪಡೆದ ಪೊಲೀಸ್ ಪೇದೆ ಜಮೀರ್ ಡಾಂಗೆ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪತ್ರಕರ್ತರ ಮಕ್ಕಳಿಗೆ ಹಾಗೂ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯ ನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರಿಗೆ ಭಾರತೀಯ ವೈದ್ಯಕೀಯ ಸಂಘದಿಂದ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ ಮೈಗೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಡಿತ್ ಪುಟ್ಟರಾಜ ಗವಾಯಿ ಸಂಗೀತ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಮುಖಂಡ ಗಿರೀಶ ಬುಟಾಳಿ, ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಹಂಜಿ, ತಹಸೀಲ್ದಾರ್ ಸಿದ್ದರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ, ಸಿಪಿಐ ಸಂತೋಷ್ ಹಳ್ಳೂರ, ಪಿಎಸೈ ಗಿರಿ ಮಲ್ಲಪ್ಪ ಉಪ್ಪಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ, ಕಾನಿಪ ಜಿಲ್ಲಾ ನಿರ್ದೇಶಕ ಬಸವರಾಜ ಚಮಕೇರಿ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ.ಸ್ಮಿತಾ ಚೌಗುಲಾ, ಡಾ.ಮಹೇಶ್ ಕಾಪ್ಸೆ, ಮಹಾವಿದ್ಯಾಲಯದ ಪ್ರಾಚಾರ್ಯ ರೇಷ್ಮಾ ಇನಾಮದಾರ ಸೇರಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಿದ್ದರಾಜ ಗಾಲಿ, ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ಪರುಶುರಾಮ ನಂದೀಶ್ವರ, ಶ್ರೀಶೈಲ ಮಾಳಿ, ಖಜಾಂಚಿ ಶೇಖರ ತೆವರಟ್ಟಿ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಬಡಕಂಬಿ ಕಾರ್ಯಕ್ರಮ ನಿರೂಪಿಸಿದರು. ಅಣ್ಣಾಸಾಬ ತೆಲಸಂಗ ವಂದಿಸಿದರು. ಪ್ರಜಾಪ್ರಭುತ್ವ ಯಶಸ್ವಿಗೆ ಪತ್ರಿಕೋದ್ಯಮ ಭದ್ರ ಬುನಾದಿಯಾಗಿದ್ದು, ಪತ್ರಕರ್ತರು ತಮ್ಮ ಬದ್ಧತೆ ಮರೆಯಬಾರದು, ಪ್ರಾಮಾಣಿಕವಾದ ಸಾಮಾಜಿಕ ಕಳಕಳಿ ಹೊಂದಿರಬೇಕು.
-ರಿಷಿಕೇಶ್ ಬಹದ್ದೂರ್ ದೇಸಾಯಿ, ಬೆಳಗಾವಿ ಹಿರಿಯ ಪತ್ರಕರ್ತ.