ಈ ವೇಳೆ ಮಾತನಾಡಿದ ರೈತ ಮನೆಕಪ್ಪ, ನಮ್ಮ ಜಮೀನಿನಲ್ಲಿ ರಸ್ತೆ ಇಲ್ಲದಿದ್ದರೂ 3 ವರ್ಷದಿಂದ ಬೃಹತ್ ವಾಹನಗಳ ಸಂಚಾರದಿಂದಾಗಿ ಧೂಳಿನಿಂದ ಬೆಳೆಗಳು ಹಾಳಾಗಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದರು.
ಡಂಬಳ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಡಂಬಳ ಗ್ರಾಮದ ಹತ್ತಿರ ಬೃಹತ್ ಕಾಮಗಾರಿ ಕಾಲುವೆ ಬಳಿ ಸೋಲಾರ್ ಮತ್ತು ಗಾಳಿ ವಿದ್ಯುತ್ ಕಂಪನಿಗಳು ಜಮೀನಿನಲ್ಲೇ ರಸ್ತೆ ನಿರ್ಮಿಸಿದ್ದು, ಇದರಿಂದ ಬೆಳೆಗಳು ಹಾಳಾಗಿವೆ ಎಂದು ಆರೋಪಿಸಿ ಬುಧವಾರ ರಸ್ತೆಯಲ್ಲಿ ವಾಹನಗಳನ್ನು ತಡೆದು ರೈತ ಮನೆಕಪ್ಪ ತಳವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಮನೆಕಪ್ಪ, ನಮ್ಮ ಜಮೀನಿನಲ್ಲಿ ರಸ್ತೆ ಇಲ್ಲದಿದ್ದರೂ 3 ವರ್ಷದಿಂದ ಬೃಹತ್ ವಾಹನಗಳ ಸಂಚಾರದಿಂದಾಗಿ ಧೂಳಿನಿಂದ ಬೆಳೆಗಳು ಹಾಳಾಗಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಧ್ಯವರ್ತಿಗಳ ಮೂಲಕ ಹೆದರಿಸಿ ರಸ್ತೆ ನಿರ್ಮಿಸಿಕೊಂಡು ವಾಹನಗಳನ್ನು ಓಡಿಸಲಾಗುತ್ತಿದೆ. ಅಲ್ಲದೇ ರಸ್ತೆ ನಿರ್ಮಿಸಿದ್ದಕ್ಕೆ ಪರಿಹಾರ ನೀಡಿಲ್ಲ. ಹೀಗಾಗಿ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಿದ್ದೇನೆ ಎಂದರು.ಹೊಸ ಡಂಬಳ ಭಾಗದಲ್ಲಿ ಸುಮಾರು 2000 ಎಕರೆ ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗಾಗಿ ಪ್ಯಾನಲ್‌ಗಳ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಗಾಳಿ ಯಂತ್ರಗಳು (ಫ್ಯಾನ್‌ಗಳು) ಸ್ಥಾಪನೆಯಾಗುತ್ತಿವೆ. ನಿತ್ಯವೂ 50 ಟನ್‌ಗಿಂತ ಹೆಚ್ಚು ಭಾರ ಹೊತ್ತ ಬೃಹತ್ ಲಾರಿಗಳು ಜಮೀನು ರಸ್ತೆಗಳ ಮೂಲಕ ಸಂಚರಿಸುತ್ತಿವೆ. ಅವುಗಳಿಂದ ಎದ್ದೇಳುವ ಧೂಳು ಬೆಳೆಗಳ ಮೇಲೆ ಕುಳಿತು ಹಾನಿ ಉಂಟುಮಾಡುತ್ತಿದೆ. ಈ ಕುರಿತು ಪ್ರಶ್ನಿಸಿದರೆ ಮಧ್ಯವರ್ತಿಗಳ ಮೂಲಕ ಹೆದರಿಸುತ್ತಾರೆ ಎಂದು ಆರೋಪಿಸಿದರು.
ಪರಿಹಾರ ನೀಡಿಲ್ಲ: ನಮ್ಮ ಜಮೀನಿನಲ್ಲಿ ರಸ್ತೆ ಇಲ್ಲದಿದ್ದರೂ ರಸ್ತೆ ನಿರ್ಮಿಸಿದ್ದಾರೆ. ನಾವು ಸಾಲ ಮಾಡಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆ ಬೆಳೆಯುತ್ತೇವೆ. ಆದರೆ ಧೂಳಿನಿಂದ ಬೆಳೆ ಹಾಳಾಗುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಪರಿಹಾರ ಕೇಳಿದರೂ ನೀಡಿಲ್ಲ. ಸಂಬಂಧಪಟ್ಟವರನ್ನು ಕೇಳಿದರೆ ರೈತರದು ಏನೂ ನಡೆಯಲ್ಲ ಎಂದು ಹೇಳುತ್ತಾರೆ. ಜಿಲ್ಲಾಧಿಕಾರಿಗಳು ತಕ್ಷಣ ಪರಿಹಾರ ಕೊಡಿಸಬೇಕು ಎಂದು ಡಂಬಳ ಗ್ರಾಮದ ರೈತ ಮನೆಕಪ್ಪ ತಳವಾರ ತಿಳಿಸಿದರು.
ಸೂಕ್ತ ಕ್ರಮ: ರೈತರ ಪರವಾನಗಿ ಪಡೆಯದೆ ರಸ್ತೆ ನಿರ್ಮಿಸಿಕೊಂಡಿದ್ದರೆ ಅಥವಾ ಅಕ್ರಮವಾಗಿ ಜಮೀನುಗಳಲ್ಲಿ ವಿದ್ಯುತ್ ಕಂಬ ಅಳವಡಿಕೆ ಮಾಡಿದ ಬಗ್ಗೆ ಸಂಬಂಧಪಟ್ಟ ರೈತರು ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.