ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾಂಗ್ರೆಸ್ ಬದುಕಿದೆ ಎಂದು ತೋರಿಸಲು ಮತಗಳ್ಳತನ ಆರೋಪ ಮಾಡಲಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಮಾಡುತ್ತಿರುವುದು ನೆಗೆಟಿವ್ ಪಾಲಿಟಿಕ್ಸ್, ಕಾಂಗ್ರೆಸ್ ಇನ್ನೂ ಬದುಕಿದೆ ಅಂತಾ ತೋರಿಸಲು ಈ ರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಮತಗಳ್ಳತನ ಆಗಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಬರುತ್ತಿತ್ತಾ, ಮತಗಳ್ಳತನ ನಡೆದಿದ್ರೆ ಸರ್ಕಾರ ರಚನೆ ಮಾಡಲೂ ಸಾಧ್ಯವಾಗುತ್ತಿತ್ತಾ?. ರಾಹುಲ್ ಗಾಂಧಿ ಈ ದೇಶದ ವಿರೋಧ ಪಕ್ಷದ ನಾಯಕರಾಗಿರಲೂ ಸಾಧ್ಯವಿತ್ತಾ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಸೀಟು ಜಾಸ್ತಿ ಆದರೆ ಮತಗಳ್ಳತನ ಇಲ್ಲ, ಕಾಂಗ್ರೆಸ್‌ಗೆ ಎಲ್ಲಿ ಮುಖ ನೋಡದ ಪರಿಸ್ಥಿತಿ ಇರುತ್ತದೆಯೋ, ಛೀಮಾರಿ ಹಾಕಿಸಿಕೊಂಡಿರುತ್ತಾರೋ ಅಲ್ಲಿ ಮತಗಳ್ಳತನ ಅನ್ನುತ್ತೀರಾ. ಈ ಡಬಲ್ ಸ್ಟ್ಯಾಂಡ್‌ನ್ನು ಕಾಂಗ್ರೆಸ್ ಬಿಡಬೇಕು ಎಂದು ಟೀಕಿಸಿದರು.
ರಾಜ್ಯದಲ್ಲಿ ಕೃಪಾ ಪೋಷಿತ ನಾಟಕ ಮಂಡಳಿ ಇದೆ, ಅವರ ಮಾತು ಕೇಳಿ ಇಲ್ಲಿಗೆ ಬರುತ್ತಿದ್ದಾರೆ. ಕೆಲವರು ಗಾಂಧಿ ಫ್ಯಾಮಿಲಿ ಮುಂದಿಟ್ಟುಕೊಂಡು ಅವರ ಬೆಳೆ ಬೇಯಿಸಿಕೊಳ್ಳಲೂ ಹೊರಟಿದ್ದಾರೆ. ರಾಹುಲ್ ಗಾಂಧಿ ಇನ್ನೂ ಕೂಡ ಅಪ್ರಬುದ್ದ ನಾಯಕ. ಕೋರ್ಟ್ ಕೂಡ ಯಾವ ರೀತಿ ಛೀಮಾರಿ ಹಾಕಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.ಧರ್ಮಸ್ಥಳದ ಬಗ್ಗೆ ಧಕ್ಕೆ ಸರಿಯಲ್ಲ:
ಧರ್ಮಸ್ಥಳದಲ್ಲಿ ಎಸ್ಐಟಿ ಅವರ ಕೆಲಸ ಮಾಡುತ್ತಿದ್ದಾರೆ, ಅವರೇ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.ಬುಧವಾರ ಧರ್ಮಸ್ಥಳದಲ್ಲಿ ನಡೆದ ಗಲಾಟೆ ಬಗ್ಗೆ ಮಾತನಾಡಿ, ಅಲ್ಲಿನ ನೈಜ ಪರಿಸ್ಥಿತಿ ಸ್ಥಳೀಯರಿಗೆ ಗೊತ್ತು, ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರ ಹೊಂದಿರುವ ಕ್ಷೇತ್ರ ಧರ್ಮಸ್ಥಳವಾಗಿದೆ, ಧಾರ್ಮಿಕ ಭಾವನೆ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ ಧಕ್ಕೆ ಬಾರದ ಹಾಗೆ ಇರಬೇಕು,
ಪದೇ ಪದೇ ಕೆಲವರಿಂದ ಹೆಸರು ಹಾಳಾಗ್ತಿದೆ ಎಂದು ಸ್ಥಳೀಯರು ಸಿಟ್ಟಿಗೆದ್ದಿದ್ದಾರೆ, ಧಾರ್ಮಿಕ ಭಾವನೆ ಹಾಗೂ ಧರ್ಮಸ್ಥಳ ಹೆಸರು ಕೆಡಿಸುವ ಕೆಲಸ ಯಾರೂ ಮಾಡಬಾರದು, ಹೋರಾಟ ಮಾಡುತ್ತಿರುವವರಿಗೂ ನ್ಯಾಯ ಸಿಗಬೇಕು ಎಂದರು.