ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶಾಲಾ ಆವರಣದಲ್ಲಿ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲಾ ಮಕ್ಕಳ ಪೋಷಕರು ಸರ್ಕಾರಿ ಕೆಪಿಎಸ್ ಶಾಲೆ ವಿರುದ್ಧ ಅಪಪ್ರಚಾರ ಮತ್ತು ಆರ್.ಟಿ.ಐ ಕಾರ್ಯಕರ್ತರ ಹೆಸರಿನಲ್ಲಿ ನೀಡುತ್ತಿರುವ ಕಿರುಕುಳವನ್ನು ಖಂಡಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಸೂಕ್ತ ಅನುದಾನ ನೀಡುತ್ತಿಲ್ಲ. ಇದನ್ನು ಮನಗಂಡು ಪೋಷಕರಾದ ನಾವುಗಳೇ ಒಂದಷ್ಟು ಹಣವನ್ನು ನಿಗಧಿ ಪಡಿಸಿ ಶಾಲೆ ಅಭಿವೃದ್ಧಿಗೆ ನೀಡುತ್ತಿದ್ದೇವೆ. ಪೋಷಕರ ಸಭೆಯಲ್ಲಿ ನಿರ್ಧರಿಸಲಾದ ಮೊತ್ತವನ್ನು ಮಾತ್ರ ಪಡೆದು ರಸೀದಿ ನೀಡಿದ್ದಾರೆ ಎಂದರು.ಶಾಲೆ ಅಭಿವೃದ್ಧಿಗೆ ಧನ ಸಹಾಯವನ್ನು ಸ್ವಯಂ ನಿರ್ಧಾರದ ಮೇರೆಗೆ ನೀಡುತ್ತಿದ್ದೇವೆ. ಶಾಲೆ ಅಭಿವೃದ್ಧಿಗೆ ಸಹಾಯ ಮಾಡಲು ಇಚ್ಚೆಯಿಲ್ಲದವರು ದಯಮಾಡಿ ಸುಮ್ಮನಿರಿ. ಆದರೆ, ಕೆಲವು ಪಿತೂರಿದಾರರ ಜೊತೆ ಶಾಮೀಲಾಗಿ ಸಲ್ಲದ ದೂರು ಬರೆದು ಶಿಕ್ಷಣ ಸಂಸ್ಥೆ ಹೆಸರಿಗೆ ಕಳಂಕ ತರಬೇಡಿ ಎಂದು ಆಗ್ರಹಿಸಿದರು.
1 ರಿಂದ 5ನೇ ತರಗತಿಯವರೆಗೆ 316 ಮಕ್ಕಳು ದಾಖಲಾಗಿದ್ದು, 191 ಪೋಷಕರು ಮಾತ್ರ ಹಣ ನೀಡಿದ್ದಾರೆ. ಮಕ್ಕಳ ಮನೆಯಿಂದ ಪಿಯುಸಿ ವರೆಗೆ 2400 ವಿದ್ಯಾರ್ಥಿಗಳಿದ್ದಾರೆ. ಆದರೆ, ಶಾಲೆ ಶೌಚಾಲಯ ಶುದ್ಧಿ ಮಾಡಲು ಅಗತ್ಯ ಡಿ.ಗ್ರೋಪ್ ಸಿಬ್ಬಂದಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 8 ಜನ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು ಅಗತ್ಯ ಗೌರವಧನ ನೀಡಲಾಗುತ್ತಿದೆ ಎಂದರು.
ಶಾಲೆಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಸೇರಿದಂತೆ ಎಲ್ಲವನ್ನೂ ನೀಡುತ್ತಿದೆ. ಕೆಲವರು ತಮಗೆ ಬೇಕಾದ ವ್ಯಕ್ತಿಗಳನ್ನು ಶಾಲಾಭಿವೃದ್ಧಿ ಸಮಿತಿಗೆ ಸೇರಿಸಲು ಪ್ರಯತ್ನಿಸಿ ವಿಫಲರಾದರು. ಹೀಗಾಗಿ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.