ಪಿಡಿಒಗಳಿಂದ ಕರ್ತವ್ಯ ಲೋಪ, ಹಣ ದುರುಪಯೋಗದ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ಗ್ರಾಪಂ ಪಿಡಿಒಗಳಾಗಿದ್ದ ಶಿವಲಿಂಗೇಗೌಡ, ತಿಲಕ್‌ಕುಮಾರ್ ಹಾಗೂ ನಾಗೇಂದ್ರ ಅವರು ಕರ್ತವ್ಯ ಲೋಪವೆಸಗಿ ಹಣ ದುರುಪಯೋಗ, ಕಾನೂನು ಉಲ್ಲಂಘನೆ ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಚೆಸ್ಕಾಂ ಇಲಾಖೆಗೆ ಹಣ ಪಾವತಿ ಮಾಡಲು ಪಂಚಾಯ್ತಿ ಖಾತೆಯಲ್ಲಿ ಹಣ ಇದ್ದರೂ ಸಹ ವರ್ಷಗಟ್ಟಲೆ ಹಣ ಪಾವತಿ ಮಾಡದೆ ಬಡ್ಡಿ ದಂಡ ಕಟ್ಟುವಂತೆ ಮಾಡಿದ್ದಾರೆ. ನರೇಗಾ ಕಾಮಗಾರಿಯಲ್ಲಿ ಲೋಪವೆಸಗಿರುವುದು, ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಹಣ ಪಾವತಿಸದೆ ಲೋಪ, ಎಸ್‌ಟಿಒ ಹಣಗಳನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಲೋಪವೆಸಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಿಲ್ಲ

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ತಾಲೂಕು ತಡಗವಾಡಿ ಗ್ರಾಪಂನಲ್ಲಿ ಕೆಲಸ ಮಾಡಿದ ಪಿಡಿಒಗಳು ಕರ್ತವ್ಯ ಲೋಪ ಎಸಗಿ ಹಣ ದುರುಪಯೋಗ ಮಾಡಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಜಿಪಂ ಕಚೇರಿ ಎದುರು ಧರಣಿ ನಡೆಸಿದ ಗ್ರಾಮಸ್ಥರು, ಗ್ರಾಪಂ ಪಿಡಿಒಗಳಾಗಿದ್ದ ಶಿವಲಿಂಗೇಗೌಡ, ತಿಲಕ್‌ಕುಮಾರ್ ಹಾಗೂ ನಾಗೇಂದ್ರ ಅವರು ಕರ್ತವ್ಯ ಲೋಪವೆಸಗಿ ಹಣ ದುರುಪಯೋಗ, ಕಾನೂನು ಉಲ್ಲಂಘನೆ ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಪಿಡಿಒ ನಾಗೇಂದ್ರ ಅವರು ಚಿಕ್ಕಹಾರೋಹಳ್ಳಿ ಗ್ರಾಮದ ಕೆರೆ ಹರಾಜು ಪ್ರಕ್ರಿಯೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಬೀದಿ ದೀಪಗಳನ್ನು ಅಳವಡಿಸಿ ವರ್ಷಗಳೇ ಕಳೆದಿದ್ದರೂ ಬಿಲ್ ಪಾವತಿಯಾಗಿಲ್ಲ. ಕಾಮಗಾರಿಗಳು ಪೂರ್ಣ ಅಳತೆ ಪುಸ್ತಕದಲ್ಲಿ ನಮೂದಾಗಿ ವರ್ಷಗಳೇ ಆಗಿವೆ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಚೆಸ್ಕಾಂ ಇಲಾಖೆಗೆ ಹಣ ಪಾವತಿ ಮಾಡಲು ಪಂಚಾಯ್ತಿ ಖಾತೆಯಲ್ಲಿ ಹಣ ಇದ್ದರೂ ಸಹ ವರ್ಷಗಟ್ಟಲೆ ಹಣ ಪಾವತಿ ಮಾಡದೆ ಬಡ್ಡಿ ದಂಡ ಕಟ್ಟುವಂತೆ ಮಾಡಿದ್ದಾರೆ. ನರೇಗಾ ಕಾಮಗಾರಿಯಲ್ಲಿ ಲೋಪವೆಸಗಿರುವುದು, ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಹಣ ಪಾವತಿಸದೆ ಲೋಪ, ಎಸ್‌ಟಿಒ ಹಣಗಳನ್ನು ರದ್ದುಗೊಳಿಸುವುದು ಸೇರಿದಂತೆ ಹಲವು ಲೋಪವೆಸಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಡಗವಾಡಿ ಪಂಚಾಯ್ತಿ ಸ್ವತ್ತುಗಳನ್ನು ಸೂಕ್ತ ಸಮಯದಲ್ಲಿ ಮಾಡಿಕೊಟ್ಟಿಲ್ಲ. ಹುಲಿಕೆರೆ ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸರ್ಕಾರಿ ಆಸ್ತಿಗಳಿಗೆ ಕಾನೂನು ಬಾಹಿರವಾಗಿ ಸ್ವತ್ತು ಮಾಡಿಕೊಟ್ಟಿರುವ ಬಗ್ಗೆ ತನಿಖೆಯಲ್ಲಿದೆ. ಸದರಿ ತನಿಖೆ ಸಹ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.

ಕೆಡಿಪಿ ಸಭೆಯಲ್ಲಿ ಪಿಡಿಒಗಳ ಹಣ ದುರುಪಯೋಗದ ಬಗ್ಗೆ ಬೇರೆ ಇಲಾಖೆಗಳ ಅಧಿಕಾರಿಗಳು ಹಣ ದುರುಪಯೋಗದ ಬಗ್ಗೆ ಮಂಡಿಸಿರುವ ಕಾರಣ ಕೆಡಿಪಿ ಸಭೆಯ ನಿರ್ಣಯವನ್ನು ಬರೆಸಿ ಅಧ್ಯಕ್ಷರ ಸಹಿಯನ್ನು ಇದುವರೆಗೂ ಪಡೆಯದೆ ಇರುವುದು ಹಲವಾರು ಆರೋಪಗಳಿದ್ದರೂ ತಪ್ಪಿತಸ್ಥರ ಕ್ರಮ ಜರುಗಿಸಿಲ್ಲ ಎಂದರು.

ಇದರೊಂದಿಗೆ ತಡಗವಾಡಿ ಗ್ರಾಪಂ ಪಿಡಿಒಗಳಾಗಿದ್ದ ಶಿವಲಿಂಗೇಗೌಡ ಹಾಗೂ ತಿಲಕ್‌ಕುಮಾರ್ ಅವರ ಕರ್ತವ್ಯಲೋಪ, ಹಣ ದುರುಪಯೋಗ ಹಾಗೂ ಕಾನೂನು ಉಲ್ಲಂಘನೆಗಳ ಬಗ್ಗೆಯೂ ದಾಖಲೆ ಸಮೇತ ದೂರು ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಡೆ ಅನುಮಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಶಾಂತಮ್ಮ, ವಂಕಟಮ್ಮ, ಜಿ.ಕೆ. ಸಿದ್ದೇಗೌಡ, ಟಿ.ಸಿ.ಶಂಕರೇಗೌಡ, ಪರಮಶಿವ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Share this article