ಜಿಲ್ಲೆಯ ಜನತೆಗೆ ಭೂಕಂಪನದ ಆತಂಕ ನಿವಾರಿಸಿ

KannadaprabhaNewsNetwork |  
Published : Nov 11, 2025, 03:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿ ಮರುಕಳಿಸುತ್ತಿರುವ ಭೂಕಂಪನದ ಸಂಶೋಧನೆ ನಡೆಸಿ ಜನರ ಆತಂಕ ನಿವಾರಣೆ ಮಾಡುವುದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವುದು ಹಾಗೂ ಕೋನೋ ಕಾರ್ಪಸ್ ಗಿಡಗಳನ್ನು ನಿಷೇಧಿಸುವುದು ಸೇರಿದಂತೆ ವಿಜಯಪುರ ಜನತೆ ಎದುರಿಸುತ್ತಿರುವ ವಿವಿಧ ಮಹತ್ವದ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಮರುಕಳಿಸುತ್ತಿರುವ ಭೂಕಂಪನದ ಸಂಶೋಧನೆ ನಡೆಸಿ ಜನರ ಆತಂಕ ನಿವಾರಣೆ ಮಾಡುವುದು, ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವುದು ಹಾಗೂ ಕೋನೋ ಕಾರ್ಪಸ್ ಗಿಡಗಳನ್ನು ನಿಷೇಧಿಸುವುದು ಸೇರಿದಂತೆ ವಿಜಯಪುರ ಜನತೆ ಎದುರಿಸುತ್ತಿರುವ ವಿವಿಧ ಮಹತ್ವದ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ವೇಳೆ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಜಿಲ್ಲೆಯಲ್ಲಿ ಭೂಕಂಪನಗಳು ಮರುಕಳಿಸುತ್ತಲೇ ಇವೆ, 2021ರಿಂದ 2025 ನ. 4ರವರೆಗೆ 54 ಸಲ ಲಘು ಭೂಕಂಪನ ಸಂಭವಿಸಿದೆ. 2025ರಲ್ಲಿ 6 ಬಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕನಿಷ್ಠ 1.2 ರಿಂದ ಗರಿಷ್ಠ 4.4ರ ತೀವ್ರತೆ ದಾಖಲಾಗಿದೆ. ಇದರಿಂದ ಜನತೆ ಆತಂಕಗೊಂಡಿದ್ದು, ಕೂಡಲೇ ಸಾರ್ವಜನಿಕರ ಆತಂಕ ದೂರ ಮಾಡಲು ತಜ್ಞರ ತಂಡ ಕರೆಸಬೇಕು ಎಂದು ಒತ್ತಾಯಿಸಿದರು.ನಗರದಲ್ಲಿ ಬೀದಿನಾಯಿಗಳ ಉಪಟಳ ಅಧಿಕವಾಗಿದ್ದು, ಚಿಕ್ಕ ಮಕ್ಕಳು, ಮಹಿಳೆಯರು, ವೃದ್ದರು ಅನೇಕರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಯಾವುದೇ ಬಡಾವಣೆಗೆ ಹೋದರೂ ಅಲ್ಲಿ ಹತ್ತಿಪ್ಪತ್ತು ನಾಯಿಗಳ ಗುಂಪು ಇದ್ದೇ ಇರುತ್ತದೆ. ವಿಜಯಪುರ ಜಿಲ್ಲೆಯಲ್ಲಿಯೇ ರಾಜ್ಯದಲ್ಲಿಯೇ ಅಧಿಕ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ನಾವು ಶ್ವಾನಗಳ ವಿರೋಧಿಗಳಲ್ಲ, ಶ್ವಾನಗಳಿಗೆ ಈ ರೀತಿ ಬೀದಿಯಲ್ಲಿ ಬಿಡುವುದಕ್ಕಿಂತ ಸೂಕ್ತ ರೀತಿಯಲ್ಲಿ ಶೆಲ್ಟರ್ ಮಾಡಿ ಅವುಗಳಿಗೆ ಸೂಕ್ತ ಆಹಾರ, ಔಷಧ, ಲಸಿಕೆ ನೀಡುವ ಕಾರ್ಯ ಮಾಡಬೇಕು.‌ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಅವರು ಈಗಾಗಲೇ ಡಾಗ್ ಶೆಲ್ಟರ್ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ನೀಡಿದ್ದು, ಕೂಡಲೇ ಈ ಕಾರ್ಯ ಪೂರ್ಣಗೊಳಿಸುವಂತೆ ಕಾರಜೋಳ ಒತ್ತಾಯಿಸಿದರು.ನಗರದ ಎಪಿಎಂಸಿ ಆವರಣಲ್ಲಿ ಅಗ್ನಿ ನಂದಿಸುವ ಇನ್ನೊಂದು ವಾಹನ ನಿಲುಗಡೆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಜಿಲ್ಲಾಧಿಕಾರಿಗಳ ಮುಂದಿರಿಸಿದರು. ಅಥಣಿ ರಸ್ತೆಯ ಬಳಿಯ ಅಗ್ನಿಶಾಮಕ ದಳ ಠಾಣೆಯಿಂದ ಅಗ್ನಿಶಾಮಕ ದಳ ವಾಹನಗಳು ಗೋಳಗುಮ್ಮಟ, ಆಶ್ರಮ ಸೇರಿದಂತೆ ನಗರ ಭಾಗದಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ರಕ್ಷಣೆಗೆ ಧಾವಿಸಲು ಸಮಯಬೇಕು, ಹೀಗಾಗಿ ನಗರದ ಹೃದಯಭಾಗದಲ್ಲಿ ಎಪಿಎಂಸಿ ಆವರಣಲ್ಲಿ ಇನ್ನೊಂದು ಅಗ್ನಿಶಾಮಕ ದಳದ ವಾಹನವನ್ನು ಸ್ಟ್ಯಾಂಡ್ ಬೈ ರೂಪದಲ್ಲಿ ನಿಲ್ಲಿಸಬೇಕು ಎಂದರು.ವಿಷಕಾರಿಯಾದ ಕೋನೋ ಕಾರ್ಪಸ್ ಗಿಡಗಳನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು. ಈ ಮಾದರಿಯ ಎಂಬ ವಿಷಕಾರಿ ಸಸಿಗಳನ್ನು ಹಲವು ಕಡೆ ನೆಡಲಾಗಿದೆ. ಈ ತೆರನಾದ ಸಸಿಗಳಿಂದ ಅಪಾಯವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೂ ಸಹ ಪತ್ರ ಬರೆದಿದ್ದಾರೆ. ಈ ಸಸಿ ಬಿಡುವ ಹೂವಿನಿಂದ ಹಿಟಮೈನ್ ಎಂಬ ಅಂಶ ಬಿಡುಗಡೆಯಾಗಿ ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಸಸಿಯ ಬೇರುಗಳು ಭೂಮಿ ಆಳದಲ್ಲಿ ವ್ಯಾಪಿಸುವುದರಿಂದ ನೀರಿನ ಸೆಲೆಗಳು ಸಹ ಬಂದ್ ಆಗಿ ಅಂತರ್ಜಲ ಮಟ್ಟ ಸಹ ಕುಸಿಯುತ್ತಾ ಸಾಗುತ್ತದೆ. ಕೂಡಲೇ ಈ ಸಸಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಕೃಷ್ಣಾ ಗುನ್ಹಾಳಕರ, ಆನಂದ ಕುಲಕರ್ಣಿ, ಬಸವರಾಜ ಬೈಚಬಾಳ, ಸಂದೀಪ ಪಾಟೀಲ, ವಿರೇಶ ಗೊಬ್ಬೂರ, ಕುಮಾರ ಕಟ್ಟಿಮನಿ, ಚಿನ್ನು ಚಿನಗುಂಡಿ, ಸುನಂದಾ ಪಾಟೀಲ ನಿಯೋಗದಲ್ಲಿದ್ದರು.

PREV

Recommended Stories

ಕೃಷಿ ಜಮೀನುಗಳ ಪೋಡಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ
ನಯನಾಡು ಗೆಳೆಯರ ಬಳಗ ಸೇವಾ ಟ್ರಸ್ಟ್‌ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ