ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯ, ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೇವೆ. ಮೈಸೂರು- ಕೊಡಗು ಕ್ಷೇತ್ರದಲ್ಲಿ ಯದುವೀರ, ಚಾಮರಾಜನಗರದಲ್ಲಿ ಎಸ್. ಬಾಲರಾಜ್, ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಗೆಲುವು ಸಾಧಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸುತ್ತಾರೆ ಎಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಬಿಜೆಪಿ ಚುನಾವಣೆ ಉಸ್ತುವಾರಿ ಹಾಗೂ ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು- ಕೊಡಗು ಕ್ಷೇತ್ರದಲ್ಲಿ ಯದುವೀರ, ಚಾಮರಾಜನಗರದಲ್ಲಿ ಎಸ್. ಬಾಲರಾಜ್, ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಗೆಲುವು ಸಾಧಿಸಲಿದ್ದಾರೆ ಎಂದರು.
ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯ, ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದೇವೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ವಿಶ್ವನಾಥ್ ಬೆಂಬಲ- ಒಳ್ಳೆಯ ಬೆಳವಣಿಗೆ:
ಬಿಜೆಪಿ ಅಭ್ಯರ್ಥಿ ಯದುವೀರ ಅವರಿಗೆ ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ಬೆಂಬಲ ಕುರಿತು ಪ್ರತಿಕ್ರಿಯಿಸಿದ ಅವರು, ಎಚ್. ವಿಶ್ವನಾಥ್ ಅವರು ಹಿರಿಯ ರಾಜಕೀಯ ಮುತ್ಸದ್ಧಿ. ಅವರದೇ ಆದ ಸಂಪರ್ಕ ಜಾಲವನ್ನು ಹೊಂದಿದ್ದಾರೆ. ಯದವೀರ ಅವರಿಗೆ ವಿಶ್ವನಾಥ್ ಬೆಂಬಲ ವ್ಯಕ್ತಪಡಿಸಿರುವುದು ಒಳ್ಳೆಯ ಬೆಳವಣಿಗೆ. ಯದುವೀರ ಜಾತ್ಯಾತೀತ ಅಭ್ಯರ್ಥಿಯಾಗಿದ್ದು, ಬಾರಿ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ ಎಂದರು.ನ್ಯಾಯಾಲಯದ ಆದೇಶ ಬರುವವರೆಗೂ ಕಾಯಬೇಕು
ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇದೀಗ ಈವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಸುಪ್ರೀಂ ಕೋರ್ಟ್ ಏನು ತೀರ್ಪುನೀಡುತ್ತದೆಯೋ ಕಾದು ನೋಡೋಣ. ನ್ಯಾಯಾಲಯದ ಮೊರೆ ಹೋಗಿರುವ ಸಿದ್ದರಾಮಯ್ಯ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ನ್ಯಾಯಾಲಯದ ಆದೇಶ ಬರುವವರೆಗೂ ಕಾಯಬೇಕು ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.
ರಾಜ್ಯ ಸರ್ಕಾರದ ಮಾದರಿಯಲ್ಲೇ ಕೇರಳ ಸರ್ಕಾರ ಕೂಡ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸಾಲ ಪಡೆಯಲು ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಕೇರಳ ಸರ್ಕಾರ ಆರೋಪ ಮಾಡಿತ್ತು. ಆದರೆ, ನ್ಯಾಯಾಲಯ ಕೇರಳ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಕೇರಳ ಸರ್ಕಾರದ ವೈಫಲ್ಯದಿಂದ ಸಾಲ ಪಡೆಯಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಮನವರಿಕೆ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದ ವಿಚಾರದಲ್ಲೂ ಅದೇ ರೀತಿ ಆಗಲಿದೆ ಎಂದು ಅವರು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.