ಕೃಷ್ಣ ಎನ್. ಲಮಾಣಿ
ಕೆರೆ, ಹಳ್ಳ, ಕೊಳ್ಳಗಳು ಬತ್ತಿ ಹೋಗಿರುವುದರಿಂದ ಅಂತರ್ಜಲ ಮಟ್ಟ ಕೂಡಾ ಕುಸಿದಿದೆ. ಹಾಗಾಗಿ ಈಗ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಕೆ ಮಾಡುವ ಸ್ಥಿತಿ ಬಂದೊದಗಿದೆ.
ತುಂಗಭದ್ರಾ ಜಲಾಶಯದಲ್ಲೂ ನೀರು ಪಾತಾಳಕ್ಕೆ ಕುಸಿದಿದೆ. ಇನ್ನೊಂದೆಡೆ ಜಲ ಮೂಲಗಳನ್ನು ಸಂರಕ್ಷಿಸುವ ಕಾರ್ಯ ಜಿಲ್ಲೆಯಲ್ಲಿ ಮೊದಲಿನಿಂದಲೂ ಆಗಿಲ್ಲ. ಕೆರೆಗಳಲ್ಲಿ ನೀರು ಉಳಿಸಿ, ನೀರು ಸಂಗ್ರಹಣೆ ಮಾಡಿಕೊಂಡು ಬೇಸಿಗೆಯಲ್ಲಿ ನೀರು ಪೂರೈಸುವ ಕಾರ್ಯ ಮೊದಲಿನಿಂದಲೂ ಮಾಡಲಾಗಿಲ್ಲ. ಈಗ ಭೀಕರ ಬರಗಾಲದಲ್ಲಿ ಬೇಸಿಗೆ ಬಿರು ಬಿಸಿಲಿನ ಹೊಡೆತದಲ್ಲಿ ಕುಡಿಯುವ ನೀರು ಸಿಗದೇ ಜನರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.ನಿರ್ಲಕ್ಷ್ಯ:
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಸಮಸ್ಯೆ ಉಲ್ಬಣಿಸಿದೆ. ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಪಟ್ಟಣ, ತಾಲೂಕುಗಳಲ್ಲಿ ಮಧ್ಯರಾತ್ರಿಯೇ ಎದ್ದು ನೀರು ಹಿಡಿಯುವ ಸ್ಥಿತಿ ಇದೆ.
ಜಿಲ್ಲೆಯಲ್ಲಿ ಈಗಾಗಲೇ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಅವಶ್ಯವಿದ್ದ ಕಡೆಗೆ ಖಾಸಗಿ ಬೋರ್‌ವೆಲ್‌ಗಳನ್ನು ಪಡೆದು ನೀರು ಸರಬರಾಜು ಮಾಡಲು 138 ಗ್ರಾಮಗಳಲ್ಲಿ 170 ಖಾಸಗಿ ಬೋರ್‌ವೆಲ್ ಪಡೆದು ನೀರು ಪೂರೈಸಲಾಗುತ್ತಿದೆ. ಭದ್ರಾ ಜಲಾಶಯದಿಂದ ಈಗಾಗಲೇ ತುಂಗಭದ್ರಾ ನದಿಗೆ ನೀರು ಹರಿಸಲಾಗಿದ್ದು, ಹರಪನಹಳ್ಳಿಯ ಗರ್ಭಗುಡಿಯ ಜಾಕ್‌ವೆಲ್‌ಗೆ ನೀರು ಬಂದಿದೆ. ಸಿಂಗಟಾಲೂರಿಗೆ ನೀರು ಬಂದು, ಬಳಿಕ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿಗೂ ನೀರು ಹರಿಸಬೇಕಿದೆ. ನೀರನ್ನು ಮಿತವಾಗಿ ಬಳಸಿದರೆ ನೀರಿನ ಬವಣೆ ನೀಗಲಿದೆ.
ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದಲ್ಲಿ ಕುಡಿವ ನೀರಿಗಾಗಿ ಮಧ್ಯರಾತ್ರಿ ಎದ್ದು ನೀರಿಗಾಗಿ ಕಾದು ಕುಳಿತುಕೊಳ್ಳುವ ಸ್ಥಿತಿ ಇದೆ. ಗ್ರಾಮದವರು ಬೆಳಗ್ಗೆ ಉದ್ಯೋಗ ಖಾತ್ರಿ ಕೂಲಿ ಕೆಲಸ ಸೇರಿದಂತೆ ವಿವಿಧೆಡೆ ಕೆಲಸಕ್ಕೆ ತೆರಳುತ್ತಾರೆ. ಈ ಗ್ರಾಮದ ಸಮಸ್ಯೆ ಬಗ್ಗೆ ಗ್ರಾಪಂ ಮೊರೆ ಹೋದರೂ ಸಮಸ್ಯೆ ಬಗೆಹರಿದಿಲ್ಲ. ಹೊಸ ಟ್ಯಾಂಕ್ ನಿರ್ಮಾಣ ಮಾಡಿ ಒಂಬತ್ತು ವರ್ಷ ಕಳೆದರೂ ಇದುವರೆಗೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ಟ್ಯಾಂಕ್‌ಗೆ ನೀರು ಪೂರೈಕೆ ಮಾಡಲು ಪೈಪ್‌ಲೈನ್ ಅಳವಡಿಕೆ ಮಾಡಿಲ್ಲ. ಕಡ್ಡಿರಾಂಪುರ ಗ್ರಾಮಸ್ಥರು ನೀರಿಗಾಗಿ ಪರದಾಡುತ್ತಿದ್ದಾರೆ.