ಕನ್ನಡಪ್ರಭ ವಾರ್ತೆ ಹರಿಹರ
ನಾಗರಿಕರ ಸಂರಕ್ಷಣೆ ಹಾಗೂ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಹರಿಹರ ನಗರದಲ್ಲಿ ಸಿಸಿಟಿವಿ ಅಳವಡಿಕೆಗೆ ೧ ಕೋಟಿ ರೂ. ಅನುದಾನ ಮೀಸಲಿಡಲು ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಹ್ಯೂಮನ್ ರೈಟ್ಸ್ ಪ್ಯಾನಲ್ ಹರಿಹರ ಘಟಕದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಸೈಯಿದಾ ಆಫ್ರೀನ್ ಬಾನುರಿಗೆ ಮನವಿ ಸಲ್ಲಿಸಿದರು.ನಂತರ ವಿಶ್ವ ಕರವೇ ರಾಜ್ಯ ಉಪಾಧ್ಯಕ್ಷ ನಾಗರಾಜ್ ಭಂಡಾರಿ ಮಾತನಾಡಿ, ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದಲ್ಲಿರುವ ಹರಿಹರ ನಗರದೊಳಗೆ ಹೊಸಪೇಟೆ-ಶಿವಮೊಗ್ಗ ಮತ್ತು ಬೀರೂರು-ಸಮ್ಮಸಗಿ ಹೆದ್ದಾರಿ ಹಾದು ಹೋಗಿದೆ. ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ, ಪೂನಾ-ಬೆಂಗಳೂರು ರೈಲು ಮಾರ್ಗವಿದೆ. ಇಲ್ಲಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ನಿತ್ಯ ೧,೮೦೦ ಬಸ್‌ಗಳು ಬಂದು ಹೋಗುತ್ತದೆ. ಎರಡೂ ಹೆದ್ದಾರಿಗಳಲ್ಲಿ ನಿತ್ಯ ಅಂದಾಜು ೧೫-೨೦ ಸಾವಿರ ಭಾರಿ ವಾಹನಗಳು ಸಂಚರಿಸುತ್ತವೆ. ಇದೆಲ್ಲದರ ಪರಿಣಾಮ ಸಹಜವಾಗಿ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿರುವ ಹಲವು ಬ್ಯಾಂಕುಗಳ ಹೊರಭಾಗದಲ್ಲಿ ಲಕ್ಷಾಂತರ ರುಪಾಯಿ ನಗದು ಕಳ್ಳರು ಅಮಾಯಕರಿಂದ ಅಪಹರಿಸಿದ್ದಾರೆ. ಸಿಗ್ನಲ್ ಜಂಪ್, ವಾಹನ ಚಾಲಕರಿಂದ ದುಡುಕಿನ ಚಾಲನೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ.
ಈ ಎಲ್ಲಾ ಸಮಸ್ಯೆಗಳ ನಿಯಂತ್ರಣಕ್ಕೆ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಪರಿಹಾರವಾಗಿದೆ. ಏಳೆಂಟು ವರ್ಷಗಳ ಹಿಂದೆ ಕೆಲವು ಸರ್ಕಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಲಾಗಿತ್ತು, ಆದರೆ ಅವುಗಳ ನಿರ್ವಹಣೆ ಮಾಡಲಾಗದೆ ಅವುಗಳೆಲ್ಲಾ ನಿರುಪಯುಕ್ತವಾಗಿವೆ.ನಗರದ ಅಂದಾಜು ಒಂದು ಕಾಲು ಲಕ್ಷ ಜನರ ಸುರಕ್ಷತೆಗಾಗಿ ನಗರದ ಹತ್ತಾರು ಆಯಕಟ್ಟಿನ ಸ್ಥಳಗಳಲ್ಲಿ ಆಧುನಿಕ ಹಾಗೂ ಉತ್ತಮ ಸಾಮರ್ಥ್ಯದ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಮಾಡಬೇಕಿದೆ. ಇದಕ್ಕಾಗಿ ಹರಿಹರ ನಗರಸಭೆಯ ೨೦೨೪-೨೫ನೇ ಸಾಲಿನ ಬಜೆಟ್ ನಲ್ಲಿ ಈ ಕಾರ್ಯಕ್ಕಾಗಿ ಕನಿಷ್ಠ ೧ ಕೋಟಿ ರು. ಅನುದಾನ ಮೀಸಲಿಡಲು ನಗರಸಭೆಯ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಸೂಚಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ, ಮನವಿ ಕುರಿತು ಜಿಲ್ಲಾಧಿಕಾರಿ ಹಾಗೂ ನಗರಸಭೆಯ ಗಮನ ಸೆಳೆಯಲಾಗುವುದೆಂದರು.ಈ ಸಂದರ್ಭದಲ್ಲಿ ವಿಶ್ವ ಕರವೇ ತಾಲ್ಲೂಕು ಘಟಕ ಅಧ್ಯಕ್ಷ ರಾಹುಲ್ ಮೆರ‍್ವಾಡೆ, ತಾಲೂಕು ಗೌರವಾಧ್ಯಕ್ಷ ಪ್ರವೀಣ್ ಜಿ.ವಿ., ಪದಾಧಿಕಾರಿಗಳಾದ ರಿಷಬ್ ರಾಜ್, ದಾವಣಗೆರೆ ಲಿಂಗರಾಜ್, ಗಣೇಶ್ ಬಿ., ಹರೀಶ್ ಇಂಡಿ, ಉಮೇಶ್ ಎ.ಬಿ., ಪ್ರವೀಣ್ ಕುಮಾರ್, ಪವನ್ ಕುಮಾರ್ ಎಚ್.ಬಿ. ಹಾಗೂ ಇತರರಿದ್ದರು.