ಕನ್ನಡಪ್ರಭ ವಾರ್ತೆ ಬೀಳಗಿ
ಸರ್ಕಾರಕ್ಕೆ ನಿಜವಾಗಿಯೂ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೇ ಹಾಗೂ 2023ರ ಚುನಾವಣೆಯಲ್ಲಿ ವಿಜಯಪುರದಲ್ಲಿ ಯುಕೆಪಿ ಸಮಾವೇಶ ಮಾಡಿ 5 ವರ್ಷದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ನೀಡಿರುವ ಭರವಸೆ ಪೂರ್ಣಗೊಳಿಸಲು ರಾಜ್ಯದ ಒಟ್ಟು ಬಜೆಟ್ನ ಶೇ.10 ರಷ್ಟು ಹಣವನ್ನು ಕೃಷ್ಣಾ ಮೇಲ್ದಂಡೆ ಯೋಜನೆಗೆ ವೆಚ್ಚ ಮಾಡಲು ವಿಶೇಷ ಅಧಿವೇಶನ ಕರೆದು ಕೈಗೊಳ್ಳಬೇಕು ಎಂದು ಬಾಗಿನ ಅರ್ಪಿಸಲು ಬರುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಸಂಚಾಲಕ ಪ್ರಕಾಶ ಅಂತರಗೊಂಡ ಒತ್ತಾಯಿಸಿದ್ದಾರೆ.ಕೃಷ್ಣೆಯ ಕಣಿವೆಯ ಮಕ್ಕಳು ಕನ್ನಡ ತಾಯಿಯ ಮಕ್ಕಳಲ್ಲವೇ?. ಕಾವೇರಿ ಕಣಿವೆಯ ಯೋಜನೆಗಳು ಪೂರ್ಣಗೊಂಡು 4 ದಶಕಗಳು ಕಂಡರೂ ಕಳೆದ 7 ದಶಕಗಳ ಹಿಂದೆಯೇ ಆರಂಭವಾದ ಕೃಷ್ಣಾ ಮೇಲ್ದಂಡೆ ಯೋಜನ ಕುಂಟುತ್ತ ಸಾಗುತ್ತಿದೆ ಎಂದು ದೂರಿದ್ದಾರೆ.
ಕೃಷ್ಣಾ ನ್ಯಾಯಾಧೀಕರಣ-ಎರಡು 2010ರಲ್ಲಿ ಹಂಚಿಕೆ ಮಾಡಿದ 130 ಟಿಎಂಸಿ ನೀರು ಪ್ರತಿ ವರ್ಷ ಪಕ್ಕದ ರಾಜ್ಯಕ್ಕೆ ಹರಿದು ಹೋಗುತ್ತಿವೆ. ಈ 130 ಟಿಎಂಸಿ ನೀರಿನಲ್ಲಿ ವಿಜಯಪುರ ಜಿಲ್ಲೆಗೆ 81 ಟಿಎಂಸಿ ನೀರು ಗದಗ ಮತ್ತು ಕೊಪ್ಪಳ ಜಿಲ್ಲೆಗೆ 10 ಟಿಎಂಸಿ ನೀರು ಹಂಚಿಕೆಯಾಗಿದೆ. ಈ ನೀರನ್ನು ತಮ್ಮ ಪ್ರದೇಶದ ಜನರಿಗೆ ಒದಗಿಸಿಕೊಡಬೇಕೆನ್ನುವ ಇಚ್ಛಾಶಕ್ತಿ ಈ ಭಾಗದ ಜನಪ್ರತಿನಿಧಿಗಳಲ್ಲಿ ಇರದಿರುವುದು ಖೇದಕರ ಸಂಗತಿ. ಸದ್ಯ 0.001ಕ್ಯೂಸೆಕ್ಸ್ ನೀರನ್ನು ಕೆರೆ ತುಂಬಿಸಲು ಬಳಸಿಕೊಳ್ಳುವುದೇ ಈ ಭಾಗದ ಜನಪ್ರತಿನಿಧಿಗಳ ದೊಡ್ಡ ಸಾಧನೆಯಾಗಿರುವುದು ಖೇದಕರ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.ಯೋಜನೆ ಪೂರ್ಣಗೊಳ್ಳಬೇಕಾದರೇ ಕರ್ನಾಟಕ ರಾಜ್ಯದ ಒಟ್ಟು ಬಜೆಟ್ನ ಶೇ.10 ರಷ್ಟು ಹಣವನ್ನು ಪ್ರತಿ ವರ್ಷ ಯೋಜನೆ ಪೂರ್ಣಗೊಳ್ಳುವವರೆಗೆ ಒದಗಿಸುವ ನಿರ್ಣಯವನ್ನು ವಿಶೇಷ ಅಧಿವೇಶನವನ್ನು ಕರೆದು ತೆಗೆದುಕೊಂಡಾಗ ಮಾತ್ರ ಈ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಕೃಷ್ಣ ಕಣಿವೆ ಪ್ರದೇಶವು ಮಳೆಗಾಲದಲ್ಲಿ ಪ್ರವಾಹ ಮತ್ತು ಬೇಸಿಗೆಯಲ್ಲಿ ಬರದಿಂದ ಹಾನಿಯನ್ನು ಅನುಭವಿಸುತ್ತಿದೆ ಎಂದು ಪ್ರಕಟಣೆ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.