ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.2ರಿಂದ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು. ಒಂಬತ್ತು ದಿನಗಳ ಅಧಿವೇಶನದಲ್ಲಿ ಕನಿಷ್ಠ ಐದು ದಿನಗಳನ್ನು ಈ ಭಾಗದ ನೀರಾವರಿ, ಬರಗಾಲ, ರೈತರ ಸಮಸ್ಯೆ, ಕಬ್ಬಿನ ದರ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕುರಿತು ಚರ್ಚಿಸಲು ಮೀಸಲಿಡಬೇಕು ಎಂದು ತಿಳಿಸಿದರು.
ರೈತರಿಗೆ ₹2,500 ಪರಿಹಾರ ನೀಡುವುದಾಗಿ ಘೋಷಿಸಿ ಕೆಲವೆಡೆ ಮಾತ್ರ ಹಣ ಜಮೆಯಾಗಿದೆ. ಇನ್ನೂ ಅನೇಕ ರೈತರಿಗೆ ಪರಿಹಾರ ತಲುಪಿಲ್ಲ. ಎಲ್ಲ ಅರ್ಹ ರೈತರಿಗೂ ಪರಿಹಾರ ತಲುಪಿಸುವ ಜತೆಗೆ ಬರದಿಂದ ಉಂಟಾದ ನಷ್ಟಕ್ಕೆ ಅನುಗುಣವಾಗಿ ಹೆಚ್ಚಿನ ಪರಿಹಾರ ನೀಡಬೇಕು. ರೈತರ ಸಂಕಷ್ಟ, ಕಬ್ಬಿನ ಬೆಲೆ, ಬೆಲೆ ಏರಿಕೆ ಹಾಗೂ ಬರ ನಿರ್ವಹಣೆಯ ಲೋಪಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹೋರಾಟ ನಡೆಸಲಿದೆ. ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು ಸರಿಯಲ್ಲ. ರಸ್ತೆ, ಮೂಲಸೌಕರ್ಯ, ಶಾಲಾ-ಕಾಲೇಜುಗಳು, ನೀರಾವರಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲೂಕುಗಳೆಂದು ಗುರುತಿಸಿದ್ದ ಹಲವು ತಾಲೂಕುಗಳಲ್ಲಿ ಈಗ ಪ್ರಗತಿ ಕಂಡುಬಂದಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಸಮಗ್ರ ಅಭಿವೃದ್ಧಿಯಾಗಿಲ್ಲ. ದಕ್ಷಿಣ ಕರ್ನಾಟಕಕ್ಕೆ ನೀಡುವ ಆದ್ಯತೆಯನ್ನೇ ಉತ್ತರ ಕರ್ನಾಟಕಕ್ಕೂ ನೀಡಬೇಕು. ಈ ಭಾಗದ ಅಭಿವೃದ್ಧಿಗೆ ಎಲ್ಲ ಸರ್ಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವಾಗ ದಿವಂಗತ ಉಮೇಶ ಕತ್ತಿ ಅವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆ ಹಾಗೂ ಬೆಳಗಾವಿಯನ್ನು ಅದರ ರಾಜಧಾನಿಯನ್ನಾಗಿ ಮಾಡುವ ಕುರಿತು ಹೇಳುತ್ತಿದ್ದ ಮಾತುಗಳು ನೆನಪಾಗುತ್ತವೆ. ಆದರೆ, ಪ್ರತ್ಯೇಕ ರಾಜ್ಯದ ವಿಚಾರವನ್ನು ಈಗ ಬಿಜೆಪಿ ಅಧಿಕೃತ ನಿಲುವಾಗಿ ಪ್ರತಿಪಾದಿಸುತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಇನ್ನಷ್ಟು ಅಭಿವೃದ್ಧಿ ಹಾಗೂ ನ್ಯಾಯ ದೊರೆಯಬೇಕೆಂಬುದೇ ನಮ್ಮ ಹೋರಾಟದ ಉದ್ದೇಶ ಎಂದು ಸ್ಪಷ್ಟಪಡಿಸಿದರು. ಬೆಳಗಾವಿ ಜಿಲ್ಲೆ ಹಾಗೂ ರಾಜ್ಯ ಬಿಜೆಪಿಯಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಬೇಕು. ನೀರಾವರಿ, ರೈತರ ಸಮಸ್ಯೆ, ಬರಗಾಲ ಹಾಗೂ ಪ್ರಾದೇಶಿಕ ಅಭಿವೃದ್ಧಿ ವಿಚಾರಗಳಲ್ಲಿ ಪಕ್ಷಾತೀತವಾಗಿ ಧ್ವನಿ ಎತ್ತುವ ಅಗತ್ಯವಿದೆ. ಅಧಿವೇಶನದಲ್ಲಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ, ಜನರಿಗೆ ನ್ಯಾಯ ದೊರಕಿಸಿಕೊಡಲು ಬಿಜೆಪಿ ಸದನದ ಒಳ- ಹೊರಗೂ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
-------
ಸದನದ ಒಳ, ಹೊರಗೂ ಬಿಜೆಪಿ ಹೋರಾಟ
----
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು 5 ದಿನ ಮೀಸಲಿಡಬೇಕು. ಚರ್ಚೆ ಕೇವಲ ಹೇಳಿಕೆಗಳಿಗೆ ಸೀಮಿತವಾಗದೆ, ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಿ ಕಾಲಮಿತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳ ನಿರ್ಲಕ್ಷ್ಯ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಡಿ.3ರಂದು ಬಿಜೆಪಿಯಿಂದ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು.