ಶಿಕ್ಷಣ ನೀಡಿದ ಶಾಲೆಗೆ ಆದಾಯದ ಭಾಗ ಮೀಸಲಿಡಿ: ಎಚ್.ಎಲ್.ದಿವಾಕರ್ ಕರೆ

KannadaprabhaNewsNetwork |  
Published : Nov 18, 2024, 12:00 AM IST
ಚಿತ್ರ  17ಎಂಡಿಕೆ5 : ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಸರ್ಕಾರಿ ಶಾಲೆ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು ತಾವು ವಿದ್ಯೆ ಕಲಿತ ಶಾಲೆಯ ಅಭ್ಯುದಯಕ್ಕಾಗಿ ತಮ್ಮ ಆದಾಯದ ಶೇ. 1 ಭಾಗ ಮೀಸಲಿಡಬೇಕು ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು ತಾವು ವಿದ್ಯೆ ಕಲಿತ ಶಾಲೆಯ ಅಭ್ಯುದಯಕ್ಕಾಗಿ ತಮ್ಮ ಆದಾಯದ ಶೇ.1 ಭಾಗವನ್ನಾದರೂ ಮೀಸಲಿಡಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ್ ಕರೆ ನೀಡಿದರು.

2023-24ನೇ ಸಾಲಿನ ಪರೀಕ್ಷೆಯಲ್ಲಿ ಮಡಿಕೇರಿ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಬರಲು ಕಾರಣಕರ್ತರಾದ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗೌರವಿಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಪ್ರತಿಭಾನ್ವಿತರಾಗಿರುತ್ತಾರೆ. ಶೈಕ್ಷಣಿಕ ಸಾಧನೆಯ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ತಮಗೆ ವಿದ್ಯೆ ನೀಡಿದ ಶಾಲೆಯನ್ನು ಹಾಗೂ ಶಿಕ್ಷಕರನ್ನು ಮರೆಯದೆ ಗೌರವಿಸಬೇಕು. ತಾವು ಸಂಪಾದಿಸಿದ ಆದಾಯದ ಒಂದು ಭಾಗವನ್ನು ಶಾಲೆಗಾಗಿ ಮೀಸಲಿಟ್ಟರೆ ಶಾಲೆ ಅಭಿವೃದ್ಧಿಯಾಗುವುದಲ್ಲದೆ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.

ಸುಂಟಿಕೊಪ್ಪ ಕೂಬ ಮಸೀದಿ ಅಧ್ಯಕ್ಷ, ಸಮಾಜ ಸೇವಕ ಎಚ್.ಯು.ಇಸಾಕ್ ಖಾನ್, ವಿದ್ಯಾರ್ಥಿಗಳು ಸಂಪಾದನೆಯ ದೃಷ್ಟಿಯಿಂದ ಮಾತ್ರ ಶಿಕ್ಷಣವನ್ನು ಪಡೆಯಬಾರದು. ಜಾತಿ, ಧರ್ಮ, ಭೇದ, ಭಾವ ಎಲ್ಲವನ್ನೂ ಮೀರಿ ಮನಷ್ಯತ್ವಕ್ಕೆ ಬೆಲೆ ಕೊಡುವ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಲು ಕರೆ ನೀಡಿದರು.

ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತುಬದ್ಧ ಜೀವನದಿಂದ ಮಾತ್ರ ಸಾಧನೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ, ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಜವಾಬ್ದಾರಿ ವಹಿಸಬೇಕು. ವಿದ್ಯಾರ್ಥಿಗಳು ಮೊಬೈಲ್‌ಗಳಲ್ಲಿ ಒಳ್ಳೆಯ ವಿಚಾರವನ್ನು ಪಡೆದುಕೊಂಡು, ಪುಸ್ತಕ ಓದುವ ಹವ್ಯಾದೊಂದಿಗೆ ಸ್ನೇಹವನ್ನು ಬೆಳೆಸಿಕೊಳ್ಳಬೇಕು. ಧರ್ಮ ಯಾವುದಾದರೇನು ಮನುಷ್ಯ ಒಳ್ಳೆಯವನಾಗಬೇಕು. ಆಗ ಮಾತ್ರ ಸಮಾಜದಲ್ಲಿ ಸುಸ್ಥಿರತೆಯನ್ನು ಕಾಣಲು ಸಾಧ್ಯ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕ ಎ.ಪಿ.ದೀಪಕ್ ಪೊನ್ನಪ್ಪ ಮಾತನಾಡಿ, ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಂಡು ಉತ್ತಮ ಶಿಕ್ಷಣವನ್ನು ಪಡೆದುಕೊಂಡರೆ ಸಮಾಜದ ಬಗ್ಗೆ ಅರಿತು ಕೊಳ್ಳಬಹುದು. ಆಗ ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.

ದಲಿತ ಸಂಘರ್ಷ ಸಮಿತಿ ಸದಸ್ಯೆ ಪ್ರೇಮಾ ಕೃಷ್ಣಪ್ಪ, ಕುಮಾರ್, ಸಿದ್ದೇಶ್ವರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅತಿಥಿಗಳು ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಾಪ ಸಿಬ್ಬಂದಿಗಿಲ್ಲ 3 ತಿಂಗಳ ವೇತನ
ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ : ಜಿ.ಟಿ.ದೇವೇಗೌಡ