ಶಿವಾನಂದ ಗೊಂಬಿ
ಒಂದೇ ಆಶ್ರಯ ಮನೆ ಇಬ್ಬರಿಗೆ ಹಂಚಿಕೆ..!
ಇದು ಇಲ್ಲಿನ ತಾರಿಹಾಳದಲ್ಲಿನ ರಾಮನಗರ ಆಶ್ರಯ ಬಡಾವಣೆಯ ಪರಿಸ್ಥಿತಿ. ಹೌದು, ಇಲ್ಲಿನ ಮೂಲಫಲಾನುಭವಿಗಳು ವಾಸಿಸುತ್ತಿಲ್ಲ. ಬದಲಿಗೆ ಬೇರೆ ಬೇರೆ ಕುಟುಂಬಗಳೇ ವಾಸವಾಗಿವೆ. ಇದೀಗ ಮೂಲಫಲಾನುಭವಿಗಳು ನಮಗೆ ಮನೆಗಳನ್ನು ಕೊಡಿಸಿ ಎಂದು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದಿದ್ದಾರೆ. ಈ ಕಾರಣದಿಂದ ಮಹಾನಗರ ಪಾಲಿಕೆಯೂ ಸಮೀಕ್ಷೆ ಕೈಗೊಂಡಿದೆ.ಏನಾಗಿದೆ?
ಈ ನಡುವೆ ಮನೆಗಳು ಇಲ್ಲದ ಕುಟುಂಬಗಳು ತಮಗೂ ಆಶ್ರಯ ಮನೆಗಳನ್ನು ನೀಡಿ ಎಂದು ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ದುಂಬಾಲು ಬಿದ್ದಿದ್ದರು. ಆಗ ಯಾರ್‍ಯಾರು ಮನೆಗಳಲ್ಲಿ ಇಲ್ಲವೋ ಆ ಮನೆಗಳನ್ನು ಇವರಿಗೆ ಕೊಟ್ಟು ಮಂಜೂರಾತಿ ಪತ್ರ ಕೊಡಲಾಗಿದೆಯಂತೆ. ಹೀಗಾಗಿ ಅವರು ಆಶ್ರಯ ಮನೆಗಳಲ್ಲಿ ವಾಸವಾಗಿದ್ದಾರಂತೆ.
ಸಚಿವರಿಗೆ ಮನವಿ:
ಮೂಲ ಫಲಾನುಭವಿಗಳು ಅಂದರೆ 2007ರಲ್ಲಿ ಮಂಜೂರಾತಿ ಪಡೆದವರು ಇದೀಗ ತಮಗೆ ಮನೆಗಳನ್ನು ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಕೆಲವರಂತೂ ತಮಗೆ ಮಂಜೂರಾದ ಮನೆಗಳಲ್ಲಿ ಬೇರೆಯವರು ವಾಸವಾಗಿದ್ದಾರೆ. ನಮಗೆ ಮನೆ ಬಿಡಿಸಿ ಎಂದು ಪೊಲೀಸ್ ಕಂಪ್ಲೇಟ್ ಕೂಡ ಕೊಟ್ಟಿದ್ದಾರೆ. ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಹಲವರಿಗೆ ಮನವಿ ಪತ್ರ ಕೊಟ್ಟಿದ್ದಾರೆ.ಸಮೀಕ್ಷೆ:
ಒಟ್ಟಿನಲ್ಲಿ ಆಶ್ರಯ ಮನೆಗಳನ್ನು ಮಾಡಿ ಬಿಟ್ಟರೆ ಸಾಲದು. ಅವುಗಳಿಗೆ ಮೂಲಸೌಲಭ್ಯ ಕಲ್ಪಿಸಿ ಫಲಾನುಭವಿಗಳು ವಾಸವಾಗಿರುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕ ವಲಯದ ಆಗ್ರಹ.
ರಾಮನಗರ ಆಶ್ರಯ ಬಡಾವಣೆಯಲ್ಲಿ 1000ಕ್ಕೂ ಅಧಿಕ ಮನೆಗಳಿವೆ. ಮೂಲಫಲಾನುಭವಿಗಳು ಬಿಟ್ಟು ಬೇರೆಯವರು ವಾಸವಾಗಿದ್ದಾರೆ ಎಂಬ ದೂರುಗಳು ಬಂದಿವೆ. ಹೀಗಾಗಿ ಯಾರ್‍ಯಾರು ವಾಸವಾಗಿದ್ದಾರೆ. ಮೂಲ ಫಲಾನುಭವಿಗಳು ಯಾರು ಎಂಬುದನ್ನು ಪತ್ತೆ ಹಚ್ಚಲು ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.ರಾಮನಗರದಲ್ಲಿ ನಮ್ಮ ಕುಟುಂಬಕ್ಕೆ 2007ರಲ್ಲೇ ಆಶ್ರಯ ಮನೆ ಮಂಜೂರಾಗಿತ್ತು. ಆದರೆ, ಮೂಲಸೌಲಭ್ಯ ಇರಲಿಲ್ಲ. ಜತೆಗೆ ತಾವೂ ಬೇರೆ ಊರಿಗೆ ಕೆಲಸಕ್ಕೆ ಹೋದ ಕಾರಣ ಅಲ್ಲಿ ವಾಸವಾಗಿರಲಿಲ್ಲ. ಆ ಮನೆಯ ವಂತಿಕೆ ಹಣ, ಟ್ಯಾಕ್ಸ್ ಎಲ್ಲವನ್ನು ಪಾವತಿಸಿದ್ದೇವೆ. ಆದರೆ ಅಲ್ಲೀಗ ಬೇರೆ ಕುಟುಂಬ ವಾಸವಾಗಿದೆ. ನಮ್ಮ ಮನೆ ನಮಗೆ ಕೊಡಿಸಬೇಕು ಎಂಬುದು ನಮ್ಮ ಬೇಡಿಕೆ ಎನ್ನುತ್ತಾರೆ ಮೂಲಫಲಾನುಭವಿ ವಿಶ್ವೇಶ್ವರ ಸಿರಿವಾಳ.