ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿ, ಹಾರೋಹಳ್ಳಿ ಸಮೀಪ ಬಡವರಿಗಾಗಿ 178 ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ 119 ನಿವೇಶಗಳನ್ನು ಎಲ್ಲಾ ವರ್ಗದ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ವಿವರಿಸಿದರು.
ನಿವೇಶನಕ್ಕಾಗಿ ಭೂಮಿ ಕಳೆದು ಕೊಂಡ ರೈತರು, ಪಟ್ಟಣದಲ್ಲಿ ರಸ್ತೆ ನಿರ್ಮಾಣಕ್ಕಾಗಿ ನಿವೇಶನ ನೀಡಿದವರು ಹಾಗೂ ಪೌರ ಕಾರ್ಮಿಕರಿಗಾಗಿ 25 ನಿವೇಶನಗಳನ್ನು ಮೀಸಲು ಇಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 24 ನಿವೇಶನ ಕಾಯ್ದಿರಿಸಲಾಗುವುದು ಎಂದರು.ಪುರಸಭೆ ಅಧಿಕಾರಿಗಳ ತಂಡ ಸಲ್ಲಿಕೆಯಾಗಿದ್ದ 693 ಅರ್ಜಿಗಳ ಪೈಕಿ 415 ಅರ್ಹ ಫಲಾನುಭವಿಗಳನ್ನು ಗುರುತಿಸಿದ್ದಾರೆ. ಎಲ್ಲಾ ಅರ್ಹ ಫಲಾನುಭವಿಗಳ ಹೆಸರುಗಳನ್ನು ಪಟ್ಟಿ ಮಾಡಿ ಲಾಟರಿ ಎತ್ತುವ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಫಲಾನುಭವಿಗಳನ್ನು ವರ್ಗೀಕರಿಸಿ ಪ್ರತೇಕವಾಗಿ ಲಾಟರಿ ಮೂಲಕ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.
ಪಟ್ಟಣದ ಹೃದಯ ಭಾಗದ ಸಂತೆ ಮೈದಾನದ ಅಭಿವೃದ್ಧಿಗೆ 64 ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಅದರಂತೆ ಯೋಜನೆಯ ರೂಪುರೇಷೆ ರೂಪಿಸಿ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಲಾಗುವುದು. ಬಳಿಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಜತೆಗೆ ಪಟ್ಟಣ ಹಳೇ ಬಸ್ ನಿಲ್ದಾಣ ಅಭಿವೃದ್ಧಿಗೆ 4 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಪುರಸಭೆಗೆ ಸೇರಿದ 82 ವಾಣಿಜ್ಯ ಮಳಿಗೆಗಳ ಪೈಕಿ 26 ಮಳಿಗೆಗಳನ್ನು ಮರು ಹರಾಜು ಮಾಡಲಾಗಿದೆ. ಹರಾಜು ಪ್ರಕ್ರಿಯೆಗೂ ಮುನ್ನ 26 ಮಳಿಗೆಗಳಿಂದ ಮಾಸಿಕ ಕೇವಲ 24 ಸಾವಿರ ಆದಾಯ ಬರುತ್ತಿತ್ತು. ಈಗ 2.3 ಲಕ್ಷ ಆದಾಯ ಬರುತ್ತಿದೆ. ಎಲ್ಲಾ ಮಳಿಗೆಗಳನ್ನು ಮರು ಹರಾಜು ಮಾಡಿದರೆ ಮಾಸಿಕ ಕೋಟಿಗೂ ಅಧಿಕ ಆದಾಯ ನಿರೀಕ್ಷಿಸಬಹುದು ಎಂದು ಮಾಹಿತಿ ನೀಡಿದರು.