ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಕಾಡುಕೊತ್ತನಹಳ್ಳಿಯಲ್ಲಿ ಬಿ.ನಾಗಮ್ಮ ಮಂಜುನಾಥ್ ಕುಟುಂಬ ಆಯೋಜಿಸಿದ್ದ ನಿವೃತ್ತ ಆರೋಗ್ಯ ನಿರೀಕ್ಷಕ ದಿ.ಮಂಜುನಾಥ್ ಅವರ 2ನೇ ವರ್ಷದ ಸ್ಮರಣಾರ್ಥ ಅಪ್ಪನ ದೇವಾಲಯ ಉದ್ಘಾಟನೆ, ಉಚಿತ ಆರೋಗ್ಯ ತಪಾಸಣೆ, ಸಾಧಕರಿಗೆ ಸನ್ಮಾನ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವ ಪೀಳಿಗೆಯಲ್ಲಿ ತಂದೆಗೆ ದೇವಾಲಯ ಮಾಡಿದ್ದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ. ಅಪ್ಪನ ಸವಿ ನೆನಪು ಇದೊಂದು ಅತ್ಯಂತ ವಿಷೇಶ. ಈ ಕಾರ್ಯಕ್ರಮವನ್ನು ಡಾ.ಮಾದೇಶ್ ಹಾಗೂ ಡಾ.ಕಿರಣ್ ಆಯೋಜನೆ ಮಾಡಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.ಇಂದಿನ ಹಳ್ಳಿಗಳು ವೃದ್ದಾಶ್ರಮ ಆಗುತ್ತಿವೆ. ಮಕ್ಕಳು ವಿದ್ಯಾಭ್ಯಾಸ ಮಾಡಿ ಉದ್ಯೋಗ ಅರಸಿ ಊರು ಬಿಟ್ಟು ಹೋಗುತ್ತಾರೆ. ತಂದೆ ತಾಯಿಗಳು ಊಟ ಬಟ್ಟೆಗೆ ಒಂದಿಷ್ಟು ಹಣ ಕೊಟ್ಟಿರುತ್ತಾರೆ. ಇಂತಹ ಸಮಯದಲ್ಲಿ ಕಷ್ಟಪಟ್ಟು ಬೆಳೆಸಿದ ತಂದೆಯನ್ನು ನೆನೆದ ಅಪ್ಪನ ದೇಗುಲ ಎಂಬ ದೇವಾಲಯ ಮಾಡಿ ಸ್ಮರಣಾರ್ಥ ಹುಟ್ಟೂರಿನಲ್ಲಿ ಆರೋಗ್ಯ ಶಿಬಿರ ಆಯೋಜಿಸಿರುವುದು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಮಕ್ಕಳು ಹೋಗುತ್ತಿರುವ ದಾರಿ ಸರಿನೋ ತಪ್ಪೋ ಎಂಬುದನ್ನು ನೋಡದೇ ದುಡ್ಡು ಮಾಡ್ಬೇಕು ಅನ್ನೋದು ಮಾತ್ರ ನೋಡುತ್ತಿದ್ದಾರೆ. ಸಂಬಂಧಗಳನ್ನು ಸಂಪತ್ತು, ಆಸ್ತಿ, ಹಣಕ್ಕೆ ಬದಲಾವಣೆ ಮಾಡಿದ್ದೀವಿ. ಇವುಗಳ ಮಧ್ಯೆ ತಂದೆ ತಾಯಿಗಳ ಬಗ್ಗೆ ಕೃತಜ್ಞತೆ, ಸಮಾಜವನ್ನು ಒಳ್ಳೆಯ ದಾರಿಗೆ ತರುವುದಕ್ಕೆ ಇಂತಹ ಸಮಾರಂಭಗಳು ಅತಿ ಮುಖ್ಯ ಎಂದು ತಿಳಿಸಿದರು.
ಇದೇ ವೇಳೆ ಮೈಸೂರಿನ ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ಗ್ರಾಮದ ಸರಕಾರಿ ಶಾಲೆ ಆವರಣದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣೆಯು ಮಂಡ್ಯದ ಎಸ್.ಡಿ.ಜಯರಾಮ್ ಆಸ್ಪತ್ರೆಯ ವೈದ್ಯ ಡಾ.ಮಾದೇಶ್ ಮಂಜುನಾಥ್, ಬೆಸಗರಹಳ್ಳಿ ವೈದ್ಯ ಡಾ.ಕಿರಣ್‌ಕುಮಾರ್ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ ಪ್ರಸಾದ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ವೀರಭದ್ರಯ್ಯ, ಮಕ್ಕಳ ಹಕ್ಕು ಮತ್ತು ರಕ್ಷಣಾ ಆಯೋಗ ಸದಸ್ಯ ವೆಂಕಟೇಶ್, ಸಾಹಿತಿ ಡಾ.ಚಂದ್ರಶೇಖರ್, ಕಾರ್ಯಕ್ರಮ ಆಯೋಜಕ ಡಾ.ಮಾದೇಶ್ ಮಂಜುನಾಥ್, ಡಾ.ಕಿರಣ್ ಕುಮಾರ್ ಸೇರಿದಂತೆ ಡಾ.ಆನಂದ್, ಡಾ.ಸಂಧ್ಯಾ, ಡಾ.ಮಳವಳ್ಳಿ ಮಹಾದೇವಸ್ವಾಮಿ, ಗಾಯಕ ಯರಹಳ್ಳಿ ಪುಟ್ಟಸ್ವಾಮಿ, ಪ್ರಸನ್ನ ಭಾಗವಹಿಸಿದ್ದರು.