ಕಾರ್ಖಾನೆಗಳ ಸ್ಥಾಪನೆಗೆ ಸಮಯ ಕೊಡಿ

KannadaprabhaNewsNetwork | Published : Jan 11, 2025 12:47 AM

ಸಾರಾಂಶ

ಮದ್ದೂರಿನಲ್ಲಿ ಎರಡು, ಮೂರು ಕಾರ್ಖಾನೆ ತರಬೇಕಿದೆ. ಐದು ಸಾವಿರ ಕೋಟಿ ಬಂಡವಾಳ ಹಾಕುವವರನ್ನು ಕರೆ ತರುತ್ತೇನೆ. ಇದಕ್ಕೆ ಸಮಯದ ಅಗತ್ಯವಿದೆ. ಜಿಲ್ಲೆಯ ಜನರು ಸಮಯ ಕೊಡುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರಿನಲ್ಲಿ ಎರಡು, ಮೂರು ಕಾರ್ಖಾನೆ ತರಬೇಕಿದೆ. ಐದು ಸಾವಿರ ಕೋಟಿ ಬಂಡವಾಳ ಹಾಕುವವರನ್ನು ಕರೆ ತರುತ್ತೇನೆ. ಇದಕ್ಕೆ ಸಮಯದ ಅಗತ್ಯವಿದೆ. ಜಿಲ್ಲೆಯ ಜನರು ಸಮಯ ಕೊಡುವಂತೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ತಾಲೂಕಿನ ಚಾಕನಕೆರೆ ಗ್ರಾಮದ ಕೆರೆಗೆ ಬಾಗೀನ ಅರ್ಪಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿರುದ್ಯೋಗ ಸಮಸ್ಯೆ ಗಮನಿಸಿದ್ದೇನೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರ್ಖಾನೆ ತರುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಯುವಕರು ಕೆಲಸ ಮಾಡಲು ರಾಜ್ಯದ ಹೊರಗೆ ಹೋದರೆ ಕೆಲಸ ತಕ್ಷಣವೇ ಕೊಡಿಸಬಹುದು. ಆದರೆ, ಯಾರೂ ಹೊರಗೆ ಹೋಗುತ್ತಿಲ್ಲ. ಅದಕ್ಕೆ ಸಮಯ ಕೇಳುತ್ತಿದ್ದೇನೆ. ಸಮಯ ಕೊಡಿ ನಿರುದ್ಯೋಗ ಸಮಸ್ಯೆ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಗೆಜ್ಜಲಗೆರೆಯ ಸಾಯಿ ಗಾರ್ಮೆಂಟ್ಸ್‌ನವರೊಂದಿಗೆ ಮಾತುಕತೆ ನಡೆಸಿದ್ದೇನೆ. ಸುಮಾರು 5 ಸಾವಿರ ಎಕರೆ ಜಮೀನು ನೀಡಿದರೆ ನಾವು ಸಿದ್ಧ ಉಡುಪು ಕಾರ್ಖಾನೆ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಸ್ಥಳೀಯವಾಗಿ ಕಾರ್ಖಾನೆಗಳು ತೆರೆದಲ್ಲಿ ಸ್ಥಳೀಯ ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ ಎಂದು ತಿಳಿಸಿದರು.

ಎಸ್.ಎಂ. ಕೃಷ್ಣ ಅವಧಿಯಲ್ಲಿ ಅಭಿವೃದ್ಧಿ: ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದರೂ ರೈತರ ಬದುಕು ಸವಾಲು ಎದುರಿಸುವ ಸ್ಥಿತಿ ಇದೆ. ದೇಶದಲ್ಲಿ ಪ್ರಗತಿ ಕಾಣುತ್ತಿದ್ದೇವೆ. ವಿಶ್ವದಲ್ಲಿ ಮೂರನೇ ಸ್ಥಾನ ತಲುಪಿದ್ದೇವೆ ಎಂದು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ವಿಶ್ಲೇಷಿಸಿದರು.

ನಮ್ಮ ರೈತರ ಶ್ರಮದ ಬಗ್ಗೆ ಗೊತ್ತಿದೆ. ನಮ್ಮ ತೋಟದಲ್ಲಿ ಎಲ್ಲ ರೀತಿಯ ಬೆಳೆಗಳನ್ನು ಬೆಳೆದಿದ್ದೇನೆ. ಕೈ ಜೋಡಿಸಿ ಮನವಿ ಮಾಡುತ್ತೇನೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕೈಗಾರಿಕಾ ಸಚಿವ ಸ್ಥಾನ ಸಿಕ್ಕಿದೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಮೇಲೆ ಒತ್ತಡ ಹಾಕಿದ್ದರಿಂದ ನಾನು ಅನಿವಾರ್ಯವಾಗಿ ಸ್ಪರ್ಧಿಸಬೇಕಾಯಿತು. ಮಂಡ್ಯ ಜಿಲ್ಲೆ ತಂದೆ ದೇವೇಗೌಡರಿಗೆ ಹೃದಯ ಭಾಗ ಇದ್ದ ಹಾಗೆ. ಜೆಡಿಎಸ್ ಮುಗಿಸಿದ್ದೇವೆ ಎಂದು ಕೆಲವರು ಮಾತನಾಡುತ್ತಿದ್ದರು. ಆದರೆ ಜೆಡಿಎಸ್‌ಗೆ ಮಂಡ್ಯ ಜನ ಮರುಜೀವ ನೀಡಿದ್ದಾರೆ ಎಂದರು.

ಕೇಂದ್ರದ ಮಂತ್ರಿ ಆಗುತ್ತೇನೆ ಎಂದು ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ. ಜಿಲ್ಲೆಯ ಜನರು ಕೇಂದ್ರದಲ್ಲಿ ಕೃಷಿ ಸಚಿವರಾಗುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ, ಕೈಗಾರಿಕಾ ಸಚಿವ ಸ್ಥಾನ ಸಿಕ್ಕಿದೆ ಎಂದು ವಿವರಿಸಿದರು.

ಇದೇ ವೇಳೆ ಕೆಸ್ತೂರು ಜಿಪಂ ವ್ಯಾಪ್ತಿಯಲ್ಲಿ ಹೈನುಗಾರಿಕೆ, ರೇಷ್ಮೆ, ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಕೆ.ಆರ್.ಶಿವರಾಜು, ನೀರಾವರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಾರ್ಯಪಾಲಕ ಅಭಿಯಂತರ ವನರಾಜು ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ, ಮನ್ಮುಲ್ ನಿರ್ದೇಶಕರಾದ ಬಿ.ಆರ್.ರಾಮಚಂದ್ರ, ಎಸ್.ಪಿ.ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳೀಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್. ಗುರುಚರಣ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಮುಖಂಡರಾದ ಕೆ.ಟಿ. ರಾಜಣ್ಣ, ಕುಂದಲಕುಪ್ಪೆ ಕುಮಾರ್, ಜೆಡಿಸ್ ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ರಾಮಚಂದ್ರಶೆಟ್ಟಿ ಸೇರಿದಂತೆ ಹಲವರು ಇದ್ದರು.

Share this article