ವಿಘ್ನೇಶ್ ಎಂ. ಭೂತನಕಾಡು
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಲ ಮೂಲಗಳು ಜೀವ ಕಳೆಯನ್ನು ಪಡೆದುಕೊಂಡಿದೆ. ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದ್ದು, ಒಳ ಹರಿವು ಹೆಚ್ಚಳ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಪುಟ್ಟ ಜಲಾಶಯ ಎಂದೇ ಕರೆಯಲಾಗುವ ಚಿಕ್ಲಿಹೊಳೆ ಕೂಡ ಮೈದುಂಬಿದ್ದು, ಭಾನುವಾರ ಜಲಾಶಯಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿ ಜಲಾಶಯದ ಸೊಬಗನ್ನು ಸವಿದರು.
ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಹಾರಂಗಿ ಜಲಾಶಯದ ನೀರನ್ನು ನದಿಗೆ ಹರಿಸಲಾಯಿತು.ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಭಾನುವಾರ ಸಂಜೆ 6 ಗಂಟೆ ವೇಳೆಗೆ ನೀರಿನ ಮಟ್ಟ 2854.65 ಅಡಿಗಳಷ್ಟಿತ್ತು. ಕಳೆದ ವರ್ಷ ಜು.22ರಂದು ಹಾರಂಗಿ ಭತಿರ್ಯಾಗಿತ್ತು. ಈ ಬಾರಿ ಬೇಗನೆ ಭರ್ತಿಯಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ರೈತಾಪಿ ವರ್ಗದಲ್ಲಿ ಸಂತಸ ಮೂಡಿದೆ. ಜಿಲ್ಲೆಯಲ್ಲಿ ಇನ್ನೂ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಭಾನುವಾರ ಬೆಳಗ್ಗೆ 11 ಗಂಟೆ ವೇಳೆಗೆ ಹಾರಂಗಿಗೆ ಸುಮಾರು 7,720 ಕ್ಯೂಸೆಕ್ ನೀರು ಒಳಹರಿವು ಬಂದಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಹಾರಂಗಿಯಿಂದ ಸುಮಾರು 4000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು. ಈ ಸಂದರ್ಭ ಒಳಹರಿವು 4,520 ಇತ್ತು. 1 ಗಂಟೆ ವೇಳೆಗೆ ಒಳ ಹರಿವು 6820 ಕ್ಯೂಸೆಕ್ ಇತ್ತು. ಸಂಜೆ 6 ಗಂಟೆ ವೇಳೆಗೆ ಸುಮಾರು 5000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಯಿತು.
* ಪ್ರವಾಸಿಗರ ದಂಡು: ಮಿನಿ ನಯಾಗರ ಎಂದೇ ಕರೆಯಲಾಗುವ ಚಿಕ್ಲಿಹೊಳೆ ಜಲಾಶಯದಲ್ಲಿ ಭಾನುವಾರ ಬೆಳಗ್ಗಿನಿಂದಲೂ ಪ್ರವಾಸಿಗರ ದಂಡೇ ಹರಿದು ಬಂದಿತು. ರಸ್ತೆ ಮಾರ್ಗದುದಕ್ಕೂ ಪ್ರವಾಸಿಗರ ವಾಹನಗಳೇ ಕಂಡುಬಂದವು.
ಚಿಕ್ಲಿಹೊಳೆಯಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ದೃಶ್ಯ ಪ್ರಮುಖ ಆಕರ್ಷಣೆಯಾಗಿದ್ದು, ಇಲ್ಲಿನ ವೀಕ್ಷಣಾ ಸ್ಥಳದಿಂದ ನಿಂತು ಪ್ರವಾಸಿಗರು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡರು. ಚಿಕ್ಲಿಹೊಳೆ ರಸ್ತೆ ಮಾರ್ಗದಲ್ಲಿ ಬಸ್‌ಗಳಲ್ಲಿ ಕೂಡ ಪ್ರವಾಸಿಗರು ಆಗಮಿಸಿದ ಹಿನ್ನೆಲೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಈ ಬಾರಿ ಜುಲೈ ತಿಂಗಳಿನಲ್ಲಿಯೇ ಜಲಾಶಯ ತುಂಬಿದ್ದು, ಇನ್ನೂ ಎರಡು ತಿಂಗಳ ಕಾಲ ಸಾಕಷ್ಟು ಮಳೆ ಸುರಿಯುವುದಾಗಿ ಭಾರತೀಯ ಹವಾಮಾನ ಇಲಾಖೆ ಹೇಳಿದ್ದು, ನಿರೀಕ್ಷೆಯೂ ಇದೆ. ಇದರಿಂದ ಗುಡ್ಡೆಹೊಸೂರು, ಬೆಟ್ಟಗೇರಿ, ಬೆಂಡೆಬೆಟ್ಟ, ರಂಗಸಮುದ್ರ ಸೇರಿದಂತೆ ಮತ್ತಿತರ ಗ್ರಾಮದ ಕೃಷಿಕರು ಸಂತಸದಲ್ಲಿದ್ದಾರೆ.
ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ. 2,859 ಅಡಿಗಳು ಗರಿಷ್ಟ ಮಟ್ಟವಾಗಿದ್ದು, ಈಗಾಗಲೇ 2854.65 ಅಡಿಗಳಷ್ಟು ನೀರು ತುಂಬಿದೆ. ಮುಂಜಾಗ್ರತಾ ಕ್ರಮವಾಗಿ ನೀರನ್ನು ನದಿಗೆ ಹರಿಸಿದ್ದೇವೆ. ಕಳೆದ ವರ್ಷ ಜು.22ಕ್ಕೆ ಜಲಾಶಯ ತುಂಬಿತ್ತು. ಈ ಬಾರಿ ಬೇಗ ತುಂಬಿದೆ. ಇನ್ನೂ ಜಿಲ್ಲೆಯಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
---------
ಚಿಕ್ಲಿಹೊಳೆ ಜಲಾಶಯವನ್ನು ವೀಕ್ಷಿಸಲು ವಾರಾಂತ್ಯದಲ್ಲಿ ಸುಮಾರು 25ರಿಂದ 30 ಸಾವಿರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ.। ಮೇದಪ್ಪ, ರಕ್ಷಣಾ ಸಿಬ್ಬಂದಿ ಚಿಕ್ಲಿಹೊಳೆ ಜಲಾಶಯ