ಅಳ್ನಾವರಕ್ಕೆ ಸಮುದಾಯ ಆರೋಗ್ಯ ಕೇಂದ್ರದ ಭಾಗ್ಯ!

KannadaprabhaNewsNetwork | Published : Mar 18, 2025 12:31 AM

ಸಾರಾಂಶ

ಅಳ್ನಾವರ ತಾಲೂಕಾಗಿ ಏಳು ವರ್ಷಗಳು ಉರುಳಿವೆ. ಇಷ್ಟು ದೀರ್ಘ ಸಮಯವಾದರೂ ಬೆರಳೆಣಿಕೆಯಷ್ಟು ತಾಲೂಕು ಕಚೇರಿಗಳು ಬಂದಿದ್ದು, ತಾಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.

ಶಶಿಕುಮಾರ ಪತಂಗೆ

ಅಳ್ನಾವರ: ಅಳ್ನಾವರ ತಾಲೂಕಾಗಿ ಏಳು ವರ್ಷಗಳು ಉರುಳಿವೆ. ಇಷ್ಟು ದೀರ್ಘ ಸಮಯವಾದರೂ ಬೆರಳೆಣಿಕೆಯಷ್ಟು ತಾಲೂಕು ಕಚೇರಿಗಳು ಬಂದಿದ್ದು, ತಾಲೂಕಿನ ಜನರಲ್ಲಿ ಬೇಸರ ಮೂಡಿಸಿದೆ. ಈ ಮಧ್ಯೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 2025-26ನೇ ಬಜೆಟ್‌ನಲ್ಲಿ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಘೋಷಣೆ ಮಾಡಿದ್ದು ತಾಲೂಕಿನ ಜನರಲ್ಲಿ ತುಸು ಸಂತಸ ಮೂಡಿಸಿದೆ.

ಅಳ್ನಾವರ ಪಟ್ಟಣ ಜಿಲ್ಲೆಯ ಗಡಿ ಪ್ರದೇಶ. ಧಾರವಾಡ ಮಾತ್ರವಲ್ಲದೇ ಹಳಿಯಾಳ, ಬೆಳಗಾವಿ, ಖಾನಾಪೂರ ರೋಗಿಗಳೂ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬರುತ್ತಾರೆ. ನಿತ್ಯ ಹೆರಿಗೆಗಳೂ ಆಗುತ್ತವೆ. ಇಂತಹ ಸಂದರ್ಭದಲ್ಲಿ ಬರೀ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೀವ್ರ ಒತ್ತಡವಿತ್ತು. ಕಡಿಮೆ ಔಷಧೋಪಕರಣ, ಒಬ್ಬರೇ ತಜ್ಞ ವೈದ್ಯರು, ಮೂವರು ನರ್ಸ್‌ಗಳು, ಒಂದು ಆ್ಯಂಬುಲೆನ್ಸ್‌ ಹಾಗೂ ನಾಲ್ಕೈದು ಸಿಬ್ಬಂದಿಗಳನ್ನಿಟ್ಟುಕೊಂಡು ಈ ಕೇಂದ್ರ ನಡೆಯುತ್ತಿತ್ತು.

150 ಹೊರ ರೋಗಿಗಳು

ಸದ್ಯ 150ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಜೊತೆಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚು ಅಂದರೆ 40 ಹೆರಿಗೆಗಳನ್ನು ಮಾಡಿಸಲಾಗುತ್ತಿದೆ. ಸದ್ಯ ಇರುವ ಸಾಧನಗಳಲ್ಲಿಯೇ ಇಷ್ಟೊಂದು ಹೆರೆಗೆಗಳನ್ನು ಮಾಡಿಸುತ್ತಿದ್ದು, ಇದೀಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮುದಾಯ ಆರೋಗ್ಯ ಕೇಂದ್ರದ ಸ್ಪರ್ಶ ಕೊಡುತ್ತಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇವೆಗೆ ಅನುಕೂಲವಾಗಲಿದೆ. ಈ ಆಸ್ಪತ್ರೆಯು ಮೂರು ತಾಲೂಕಿನ ಜನರಿಗೆ ತಾಲೂಕು ಆರೋಗ್ಯ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವಂತಿದೆ.

ಅವಸಾನದ ಅಂಚಿನಲ್ಲಿದ್ದ ಆಸ್ಪತ್ರೆ ಕಟ್ಟಡಕ್ಕೆ ಈ ಹಿಂದಿನ ಸರ್ಕಾರ ಹೊಸ ಕಟ್ಟಡವನ್ನು ನಿರ್ಮಿಸಿತ್ತು ಇದೀಗ ಹೊಸಕಟ್ಟಡಕ್ಕೆ ಹೊಂದುವಂತೆ ಸಮುದಾಯ ಆರೋಗ್ಯ ಕೇಂದ್ರದ ಭಾಗ್ಯ ಕೀರಿಟವಾಗಿದೆ.

ಬಹುದಿನಗಳ ಬೇಡಿಕೆ

ಈ ಹಿಂದೆ ನಡೆದ ಕೆಡಿಪಿ ಸಭೆಗೆ ಆಗಮಿಸಿದ್ದ ಸಚಿವ ಸಂತೋಷ ಲಾಡ್ ಅವರಿಗೆ ಇಲ್ಲಿನ ಜನರು ಸರ್ಕಾರಿ ಆಸ್ಪತ್ರೆಯನ್ನು ಉನ್ನತಿಕರಿಸುವುದಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದು ಬಹು ವರ್ಷಗಳ ಬೇಡಿಕೆಯೂ ಹೌದು. ಇದನ್ನು ಮನಗಂಡ ಸಚಿವ ಲಾಡ್‌, ಆಸಕ್ತಿಯಿಂದ ಆರೋಗ್ಯಾಧಿಕಾರಿಗಳಿಂದ ತಾವೇ ಬೇಡಿಕೆಯ ಪತ್ರ ಬರೆಯಿಸಿಕೊಂಡು ಸರ್ಕಾರಕ್ಕೆ ಕಳುಹಿಸಿದ್ದರು. ಹೆಚ್ಚಿನ ಸೌಲಭ್ಯ ಬೇಕಾದರೆ ಹೇಳಿ. ಜನರ ಆರೋಗ್ಯದ ದೃಷ್ಟಿಯಿಂದ ನಾನು ವೈಯಕ್ತಿಕವಾಗಿ ಸಹಾಯ ಮಾಡುವೆ ಎಂದು ಸಭೆಯಲ್ಲಿ ಹೇಳಿದ್ದರು. ಅದರ ಫಲವಾಗಿ ಇಂದು ಸಮುದಾಯ ಆರೋಗ್ಯ ಕೇಂದ್ರ ನಮಗೆ ಪ್ರಾಪ್ತವಾಗಿದೆ ಎಂದು ಸಚಿವ ಲಾಡ್ ಅವರ ಕಾರ್ಯಕ್ಕೆ ಅಳ್ನಾವರ ಜನರು ಸ್ಮರಿಸುತ್ತಾರೆ.

ಅಳ್ನಾವರ ತಾಲೂಕಾಗಿ ಘೊಷಣೆಯಾದರೂ ಇಲ್ಲಿಯ ಜನರು ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ಧಾರವಾಡಕ್ಕೆ ಹೋಗುವ ಪರಿಸ್ಥಿತಿಯಿತ್ತು. ಇದೀಗ ಸ್ಥಳೀಯವಾಗಿಯೇ ಜನರಿಗೆ ಆರೋಗ್ಯ ಸೇವೆ ದೊರಕುವ ಭರವಸೆ ಬಂದಿದೆ. ಇಲ್ಲಿಯ ಬಡವರ ಪಾಲಿಗೆ ಇದೊಂದು ಆರೋಗ್ಯ ಗ್ಯಾರಂಟಿ ಎಂದು ಸ್ಥಳೀಯರು ಬಣ್ಣಿಸುತ್ತಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಿಂದಾಗಿ ಹೆಚ್ಚಿನ ವೈದ್ಯರು, ಉಪಕರಣಗಳು ಸೇರಿದಂತೆ ಅನೇಕ ಸೌಲಭ್ಯಗಳು ಸಿಗಲಿವೆ ಎಂಬ ನಿರೀಕ್ಷೆಯಲ್ಲಿ ಅಳ್ನಾವರ ಜನರಿದ್ದಾರೆ.

ಬಜೆಟ್‌ನಲ್ಲಿ ಘೋಷಣೆ

ಧಾರವಾಡ ಜಿಲ್ಲೆಯ ಪೈಕಿ ಅಳ್ನಾವರ, ಅಣ್ಣಿಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಉನ್ನತಿಕರಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇಲ್ಲಿನ ಜನರಿಗೆ ಹೆಚ್ಚಿನ ರೀತಿಯಲ್ಲಿ ಸ್ಥಳೀಯವಾಗಿ ಆರೋಗ್ಯ ಸೇವೆಗಳು ದೊರೆಯುತ್ತವೆ. ಶೀಘ್ರ ಈ ಕಾರ್ಯ ಪ್ರಾರಂಭವಾಗಲಿದೆ.

-ಸಂಗಪ್ಪ ಗಾಬಿ, ಜಿಲ್ಲಾ ಶಸ್ತ್ರಚಿಕಿತ್ಸಕರು.

Share this article