ಜ್ಞಾನದೊಂದಿಗೆ ವಿವೇಕ, ನೈತಿಕತೆ ಮುಖ್ಯ: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌

KannadaprabhaNewsNetwork |  
Published : May 24, 2026, 02:00 AM IST
governor | Kannada Prabha

ಸಾರಾಂಶ

ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಜ್ಞಾನದ ಜೊತೆಗೆ ವಿವೇಕ ಮತ್ತು ನೈತಿಕತೆ ಮುಖ್ಯ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇಂದಿನ ಜಗತ್ತು ವೇಗವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಜ್ಞಾನದ ಜೊತೆಗೆ ವಿವೇಕ ಮತ್ತು ನೈತಿಕತೆ ಮುಖ್ಯ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ ಹೇಳಿದರು.

ನಗರದ ‘ದಿ ಇಂಟರ್ ನ್ಯಾಷನಲ್ ಸ್ಕೂಲ್’ ನ 25ನೇ ವರ್ಷದ ಸಂಭ್ರಮ ಹಾಗೂ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣವು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೇ, ವ್ಯಕ್ತಿತ್ವ ನಿರ್ಮಾಣ, ನೈತಿಕ ಮೌಲ್ಯಗಳು ಮತ್ತು ಜಾಗತಿಕ ದೃಷ್ಟಿಕೋನವನ್ನು ರೂಪಿಸಬೇಕು. ರಾಜಾಜಿನಗರದಲ್ಲಿ 1959ರಲ್ಲಿ ಮೊದಲ ಎನ್ ಪಿಎಸ್ ಶಾಲೆ ಸ್ಥಾಪನೆಯಿಂದ ಆರಂಭವಾದ ಪಯಣ ಡಾ.ಕೆ.ಪಿ.ಗೋಪಾಲಕೃಷ್ಣನ್ ಅವರ ನೇತೃತ್ವದಲ್ಲಿ ಇಂದು ಬೆಂಗಳೂರು, ಚೆನ್ನೈ, ಮೈಸೂರು ಮತ್ತು ಸಿಂಗಾಪುರವರೆಗೆ ಶಿಕ್ಷಣ ಜಾಲವನ್ನು ವಿಸ್ತರಿಸಿದೆ. ಸಂಸ್ಥೆಯು ಶಿಕ್ಷಣ, ನಾವೀನ್ಯತೆ ಮತ್ತು ನೈತಿಕ ಮೌಲ್ಯಗಳ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಪಡೆಯುತ್ತಿರುವ ಪದವಿ ಪ್ರಮಾಣಪತ್ರ ಕೇವಲ ವಿದ್ಯಾಭ್ಯಾಸದ ಅಂತ್ಯವಲ್ಲ, ಜೀವನಪರ್ಯಂತದ ಕಲಿಕೆಯ ಆರಂಭವಾಗಿದೆ. ವೈಫಲ್ಯವು ಅಂತ್ಯವಲ್ಲ, ಅದು ಮತ್ತಷ್ಟು ಕಲಿಯಲು ಮತ್ತು ಎತ್ತರಕ್ಕೆ ಏರಲು ದೊರೆಯುವ ಅವಕಾಶವಾಗಿದೆ. ಇಂದಿನ ಯುವಜನತೆ ನಿರಂತರ ಕಲಿಕೆ ಮತ್ತು ಆತ್ಮವಿಕಾಸದ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳ ಯಶಸ್ಸಿನ ಹಿಂದೆ ಶಿಕ್ಷಕರು ಮತ್ತು ಪೋಷಕರ ಸಹನೆ ಮತ್ತು ಪ್ರೋತ್ಸಾಹ ಪ್ರಮುಖ ಶಕ್ತಿಯಾಗಿದೆ. ಅವರು ಮಕ್ಕಳ ಬೆಳವಣಿಗೆಗಾಗಿ ಮಾಡಿದಂತ ತ್ಯಾಗ, ಸಮರ್ಪಣಾ ಭಾವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೌರವ ಇರಬೇಕು ಎಂದರು.

ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ನೀಡಿದ ದಿ ಇಂಟರ್ ನ್ಯಾಷನಲ್ ಸ್ಕೂಲ್ ಸಂಸ್ಥಾಪಕರಾದ ಡಾ.ಕೆ.ಪಿ.ಗೋಪಾಲಕೃಷ್ಣ, ಡೀನ್ ಡಾ.ಶಾಂತಮ್ಮ ಗೋಪಾಲಕೃಷ್ಣ, ಉಪಾಧ್ಯಕ್ಷೆ ಡಾ.ಬಿಂದು ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರ ಸಾಧಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ‘ದಿ ಜರ್ನಿ ಆಫ್ ಎ ವಿಶನರಿ’- ಡಾ. ಕೆ.ಪಿ. ಗೋಪಾಲಕೃಷ್ಣ ಎಂಬ ಜೀವನ ಚರಿತ್ರೆ ಪುಸ್ತಕವನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಬಿಎಂವಿ ಹರಿಕೃಷ್ಣನ್, ಪ್ರಾಂಶುಪಾಲರಾದ ರೆನಾಲ್ಡ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ
ದಾಖಲೆಗಳು ಸರಿಯಾಗಿದ್ದರೆ ನಿವೇಶನಗಳು ಖಚಿತ: ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ