ಹಾನಗಲ್ಲ:ದೇಹ ಮನಸ್ಸಿನೊಂದಿಗೆ ನಮ್ಮ ಪರಿಸರವನ್ನೂ ಶುಚಿಯಾಗಿಟ್ಟುಕೊಂಡು ಎಲ್ಲರ ಉತ್ತಮ ಆರೋಗ್ಯಕ್ಕೆ ನಾವೇ ಮುನ್ನುಡಿ ಬರೆಯುವಂತಾಗಬೇಕು ಎಂದು ಮುಖ್ಯೋಪಾಧ್ಯಾಯ ಗುರಣ್ಣಗೌಡ ಪಾಟೀಲ ಹೇಳಿದರು.
ಶುಚಿ ಎಂದರೆ ಅದು ನಮ್ಮ ಆರೋಗ್ಯದ ಮೂಲಾಧಾರ. ನನ್ನ ಆರೋಗ್ಯದ ಜೊತೆಗೆ ಇನ್ನೊಬ್ಬರ ಆರೋಗ್ಯಕ್ಕೆ ತೊಂದರೆಯಾಗದಂತೆ ನಮ್ಮ ನಡುವಳಿಕೆಯೂ ಬೇಕು. ನಮ್ಮ ಗ್ರಾಮಗಳಲ್ಲಿ ಅಲ್ಲಲ್ಲಿ ಇರುವ ಕಸ, ಚರಂಡಿಯ ದುರ್ವಾಸನೆ ಬಗ್ಗೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳ ಗಮನ ಸೆಳೆಯಬೇಕು. ನಮ್ಮ ಊರು ನಮ್ಮ ಸ್ವಚ್ಛತೆ ಎಂಬ ಅರಿವಿರಬೇಕು. ಆಗ ಮಾತ್ರ ನಾವು ಈ ದೇಶದಲ್ಲಿ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ ಎಂದರು.
ಹೆಣ್ಣು ಮಕ್ಕಳ ವೈಯಕ್ತಿಕ ಸ್ವಚ್ಛತೆಯ ಕುರಿತು ಮಾತನಾಡಿದ ಆಶಾ ಕಾರ್ಯಕರ್ತೆ ರೇಖಾ ತಳವಾರ, ಸ್ವಚ್ಛತೆ ಆರೋಗ್ಯದ ಕೀಲಿಕೈ, ಆರೋಗ್ಯವಂತ ಕುಟುಂಬ ಉತ್ತಮ ಸಮಾಜದ ಆಧಾರ. ಮಕ್ಕಳು ಹಸಿರು ಸೊಪ್ಪು, ಬೇಳೆ, ಮೊಟ್ಟೆ, ಹಾಲು, ಹಣ್ಣುಗಳನ್ನು ಸೇವಿಸಬೇಕು. ಆರೋಗ್ಯದ ವಿಷಯದಲ್ಲಿ ತಾಯಿಯೊಂದಿಗೆ ಚರ್ಚಿಸಬೇಕು. ಅಗತ್ಯಗಳಿಗಾಗಿ ವೈದ್ಯರನ್ನು ಕಂಡು ಸಮಸ್ಯೆ ಪರಿಹರಿಸಿಕೊಳ್ಳಬೇಕು. ಮಕ್ಕಳಾಗಿರುವಾಗ ಹಾಗೂ ಯುವಕ ಯುವತಿಯರಾಗಿರುವಾಗ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರಿದರೆ ಅದು ಭವಿಷ್ಯದ ಜೀವನದಲ್ಲಿ ಹತ್ತು ಹಲವು ರೋಗಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದರು.ಶಿಕ್ಷಕರಾದ ಆನಂದ ಹೆಗಡೆ, ಸರ್ವಮಂಗಳ ಚಿಕ್ಕಳ್ಳಿ, ರೇಖಾ ಕೋಡಬಾಳಿ, ದೀಪಾ ಬೈರಣ್ಣನವರ, ಲೊಯೋಲ ವಿಕಾಸ ಕೇಂದ್ರದ ಎಸ್.ಬಿ. ಜಯಮ್ಮ, ಲೋಹಿತ ಕಾಟಣ್ಣವರ, ಶೀಲಾವತಿ ಹರಿಜನ ಉಪಸ್ಥಿತರಿದ್ದರು.