ದಾಬಸ್‍ಪೇಟೆ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆಯಾ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ, ಪಕ್ಷ ಸಂಘಟನೆ ಬಗ್ಗೆ ರಾಜ್ಯ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಲಿದ್ದು, ನಾನು ಆ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು,ವೃಷಭಾವತಿ ಹೋರಾಟಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕೀಳುಮಟ್ಟದ ರಾಜಕೀಯದಿಂದ ರೈತರು ಹಾಗೂ ಕ್ಷೇತ್ರದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. 15 ವರ್ಷ ಶಾಸಕರಾಗಿದ್ದರು ಅವರ ಸರ್ಕಾರವಿತ್ತು. ಆ ಕಾಲದಲ್ಲಿ ಕೆಲಸ ಮಾಡುವುದಕ್ಕೆ ಆಗಲಿಲ್ಲ. ಈಗ ನಾವು ಆ ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಮೈ ಪರಚಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ವೃಷಭಾವತಿ ಜೊತೆಗೆ ಎತ್ತಿನಹೊಳೆ ನೀರನ್ನೂ ತರುತ್ತೇನೆ ಎಂದು ಭರವಸೆ ನೀಡಿದರು.
ವೃಷಭಾವತಿ ಹೋರಾಟಕ್ಕೆ ಹಣ ನೀಡಿ ಜನರ ಬಳಕೆ: ಕಾರ್ಖಾನೆಗಳಲ್ಲಿ, ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹಣ ನೀಡಿ ವೃಷಭಾವತಿ ಹೋರಾಟಕ್ಕೆ ಕರೆದುಕೊಂಡು ಹೋಗಿರುವ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿದ್ದು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ಮಾಡುತ್ತಿರುವ ಈ ಹೋರಾಟಕ್ಕೆ ಜನರು ಹೋಗದೇ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಇದೇ ಸಾಕ್ಷಿ ಎಂದರು.ತಾಲೂಕಿನ 69 ಕೆರೆಗಳಿಗೆ ನೀರು:
ನಾನು ಈಗಾಗಲೇ ಧಾರ್ಮಿಕ ಹಿನ್ನೆಲೆಯಿರುವ ಟಿ.ಬೇಗೂರು ಹಾಗೂ ಬಿದಲೂರು ಕೆರೆಗೆ ವೃಷಭಾವತಿ ನೀರನ್ನು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಹೀಗಿದ್ದರೂ ಪ್ರಚಾರಕ್ಕಾಗಿ ಎರಡೂ ಪಕ್ಷದವರು ಹೋರಾಟ ಮಾಡುತ್ತಿದ್ದಾರೆ. ವೃಷಭಾವತಿ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಟ್ಟಾಗ ಆ ನೀರು ಕೊಳಚೆ ನೀರಾಗಿದ್ದರೆ ನಾನೇ ವಿರೋಧ ಮಾಡಿ ನೀರು ನಿಲ್ಲಿಸುತ್ತೇನೆ. ಆಧುನಿಕ ತಂತ್ರಜ್ಞಾನದಲ್ಲಿ ಎರಡು ಬಾರಿ ಶುದ್ಧೀಕರಿಸಿದ ವೃಷಭಾವತಿ ನೀರು ಮಾತ್ರ ಕೆರೆಗಳಿಗೆ ಬರುವುದು. ಇದರಲ್ಲಿ ರೈತರಿಗೆ ಯಾವುದೇ ಸಂಶಯ ಬೇಡ. ತಾಲೂಕಿನ 69 ಕೆರೆಗಳಿಗೆ ನೀರು ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸುತ್ತೇನೆ. ನಂತರ ಕ್ಷೇತ್ರದ ಜನತೆ, ಮುಖಂಡರು, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬೋರೆವೆಲ್ ಕೊರೆದು ಶುದ್ಧ ನೀರನ್ನು ಜನತೆಗೆ ತೋರಿಸುತ್ತೇನೆ ಎಂದು ಹೇಳಿದರು.2024ರ ಬಜೆಟ್ ನಲ್ಲಿ ನನ್ನ ಕಾಲದಲ್ಲಿ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆರಿಸಿದ್ದೇನೆ. ಆದರೆ ಮಾಜಿ ಶಾಸಕರಾದ ಡಾ.ಕೆ.ಶ್ರೀನಿವಾಸಮೂರ್ತಿ ನಾನು ಮಾಡಿಸಿದ್ದು ಅಂತ ಹೇಳುತ್ತಿದ್ದಾರೆ. ಈ ಆಸ್ಪತ್ರೆಯೂ ಮಂಜೂರಾಗಿರುವುದು ಅವರ ಕಾಲದಲ್ಲಿ ಆಗಿದೆಯಾ ಅಥವಾ ನನ್ನ ಕಾಲದಲ್ಲಿ ಆಗಿದೆಯಾ ಎಂದು ಸಾಕ್ಷಿ ಸಮೇತ ನೀಡುತ್ತೇನೆ. ಆ ಕಾಲದಲ್ಲಿ ಅವರ ಕೈಲಿ ಕೆಲಸ ಮಾಡಿಸುವುದಕ್ಕೆ ಆಗಲಿಲ್ಲ. ಆದರೆ ಇದೀಗ ನಾನು ಮಾಡಿಸಿದ್ದು ಎಂದು ಪ್ರಚಾರ ತೆಗೆದುಕೊಳ್ಳಲು ಹೋಗುತ್ತಿರುವುದು ಹಾಸ್ಯಾಸ್ಪದ. ನೀವು ಜನಪರ ಕೆಲಸ ಮಾಡಿದ್ದರೆ ಕ್ಷೇತ್ರದ ಜನ ನಿಮ್ಮನ್ನು ಗೆಲ್ಲಿಸಿ ಉಳಿಸಿಕೊಳ್ಳುತ್ತಿದ್ದರು ತಿರುಗೇಟು ನೀಡಿದರು.
ಪೋಟೋ 1:ದಾಬಸ್‍ಪೇಟೆ ಪಟ್ಟಣದಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಅಹವಾಲುಗಳನ್ನು ಶಾಸಕ ಎನ್.ಶ್ರೀನಿವಾಸ್ ಆಲಿಸಿ, ರಸ್ತೆ ಕಾಮಗಾರಿಗಳನ್ನು ಪರಿಶೀಲಿಸಿದರು.