ಕುಡಿಯುವ ನೀರಿನ ಶುಚಿತ್ವಕ್ಕೂ ಗಮನ ಹರಿಸಿ: ಜಿಪಂ ಸಿಇಒ ಸೂಚನೆ

KannadaprabhaNewsNetwork |  
Published : May 14, 2024, 01:09 AM IST
25 | Kannada Prabha

ಸಾರಾಂಶ

ಡೆಂಘೀ ಹಾಗೂ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಸ್ತೆ ಚರಂಡಿ ಹಾಗೂ ಇತರೆಡೆಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ ಹಾಗೂ ಗುಣಮಟ್ಟದ ಅರಿವು ಮೂಡಿಸಲು ಹಾಗೂ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಐಇಸಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. ನೀರಿನ ಸುರಕ್ಷಿತ ಸರಬರಾಜಿಗೆ ಅಗತ್ಯ ಕ್ರಮ ವಹಿಸಿ.

ಕನ್ನಡಪ್ರಭ ವಾರ್ತೆ ಮೈಸೂರು

ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ಕ್ರಮಹಿಸುವುದರ ಜೊತೆಗೆ ಕುಡಿಯುವ ನೀರಿನ ಶುಚಿತ್ವದ ಬಗ್ಗೆ ಜಾಗರೂಕರಾಗಿರಿ ಎಂದು ಜಿಪಂ ಸಿಇಒ ಕೆ.ಎಂ.ಗಾಯಿತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂನಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಬೋರ್ ವೆಲ್ ಗಳು ಇರುವ ಕಡೆ ಕೊಳಚೆ ನೀರು ಹಾಗೂ ಕಸ ತೆರವುಗೊಳಿಸುವುದು. ಕುಡಿಯುವ ನೀರಿನಿಂದ ಸಮಸ್ಯೆಗಳು ಉದ್ಭವಿಸುವ ಮುನ್ನವೇ ಎಲ್ಲಾ ಗ್ರಾಮಗಳಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ಎಂದರು.

ಅಗತ್ಯ ಕ್ರಮ ವಹಿಸುವ ಸಂಬಂಧ ಗ್ರಾಪಂನ ಎಲ್ಲಾ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಸಖಿಯರನ್ನು ಬಳಸಿಕೊಳ್ಳುವುದು. ಜೆಜೆಎಂ ಪೈಪ್ ಲೈನ್ ಹಾಗೂ ಇತರೆ ನೀರಿನ ಪೈಪ್ ಗಳನ್ನು ಪರಿಶೀಲಿಸಿ ದುರಸ್ತಿಯ ಅಗತ್ಯವಿದ್ದಲ್ಲಿ ಬದಲಾಯಿಸಲು ಅಥವಾ ದುರಸ್ತಿಗೊಳಿಸಲು ಕ್ರಮ ವಹಿಸುವುದು. ನಿಯಮಿತವಾಗಿ ನೀರಿನ ಪರೀಕ್ಷೆಗಳನ್ನು ನಡೆಸಿ ಶುದ್ಧತೆಯ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಅವರು ಹೇಳಿದರು.

ಡೆಂಘೀ ಹಾಗೂ ಕಾಲರಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಸ್ತೆ ಚರಂಡಿ ಹಾಗೂ ಇತರೆಡೆಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಿ. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ ಹಾಗೂ ಗುಣಮಟ್ಟದ ಅರಿವು ಮೂಡಿಸಲು ಹಾಗೂ ನೀರನ್ನು ಕಾಯಿಸಿ ಆರಿಸಿ ಕುಡಿಯುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಐಇಸಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು. ನೀರಿನ ಸುರಕ್ಷಿತ ಸರಬರಾಜಿಗೆ ಅಗತ್ಯ ಕ್ರಮ ವಹಿಸುವಂತೆ ಅವರು ಸೂಚಿಸಿದರು.

ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗದಂತೆ ನೀರು ಪೂರೈಸಲು ಕ್ರಮ ವಹಿಸುವುದು ಹಾಗೂ ಅವಶ್ಯವಿರುವ ಕಡೆ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು. ಕಾಲ ಕಾಲಕ್ಕೆ ಎಫ್ ಟಿಕೆ ಟೆಸ್ಟ್ ಹಾಗೂ ಬ್ಯಾಕ್ಟೀರಿಯಾ ಟೆಸ್ಟ್ ಕೈಗೊಳ್ಳುವುದು. ಇಒಗಳು ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಬಳಕೆಗಾಗಿ ಮೇಲುಸ್ತುವಾರಿ ವಹಿಸುವಂತೆ ಅವರು ತಿಳಿಸಿದರು.

ನೀರಿನ ಸಮಸ್ಯೆ ನಿವಾರಣೆಗೆ ಇಒ, ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ತಂಡಗಳನ್ನಾಗಿ ರಚಿಸಿಕೊಂಡು ಕಾರ್ಯ ನಿರ್ವಹಿಸುವುದು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮುನ್ನ ಸಂಬಂಧಿಸಿದ ತಾಲೂಕು ಕಚೇರಿಗಳಲ್ಲಿ ನೋಂದಾಯಿಸುವುದು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ನಂತರ ಸರಬರಾಜು ಮಾಡಲು ಕ್ರಮವಹಿಸುವುದು. ನೀರಿನ ಶೇಖರಣಾ ಘಟಕ ಹಾಗೂ ಸರಬರಾಜು ಘಟಕಗಳ ಶುದ್ಧತೆ ಹಾಗೂ ಗುಣಮಟ್ಟವನ್ನು ಪರೀಕ್ಷಿಸಿಕೊಂಡು ಸಂಪೂರ್ಣ ವರದಿ ನೀಡುವಂತೆ ಅವರು ಸೂಚಿಸಿದರು.

ಕುಡಿಯುವ ನೀರಿನ ಕೊರತೆ ಕಂಡುಬಂದಲ್ಲಿ ಜಿಲ್ಲಾಧಿಕಾರಿಯವರು ಈಗಾಗಲೇ ನಿರ್ದೇಶನ ನೀಡಿರುವಂತೆ ಟ್ಯಾಂಕರ್ ಮ್ಯಾನೇಜ್ ಮೆಂಟ್ ಮೊಬೈಲ್ ಆಪ್ ಬಳಸಿಕೊಂಡು ಟ್ಯಾಂಕರ್ ಸ್ವಚ್ಛವಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ರಂಜಿತ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಜಿಲ್ಲೆಯ ಎಲ್ಲ ಇಒಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಾಲೂಕು ಆರೋಗ್ಯಾಧಿಕಾರಿಗಳು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ