ಹಬ್ಬದ ವ್ಯಾಪಾರದ ವೇಳೆ ಬೀದಿ ವ್ಯಾಪಾರಿಗಳ ನಡುವಿನ ಸಂಘರ್ಷದಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಾಚನಾಲಯ ರಸ್ತೆ ವ್ಯಾಪ್ತಿಯಲ್ಲಿ ತಳ್ಳುಗಾಡಿ ನಿಲ್ಲಿಸಿ ವ್ಯಾಪಾರ ನಡೆಸುವ ವಿಚಾರವಾಗಿ ಶನಿವಾರ ಸಂಜೆ ನಡೆದ ಗಲಾಟೆ ಹಲ್ಲೆ-ಪ್ರತಿಹಲ್ಲೆಯ ಆರೋಪಗಳಿಗೆ ಕಾರಣವಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳು ದಾಖಲಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ತರಕಾರಿ ಮಾರುಕಟ್ಟೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಹಬ್ಬದ ವ್ಯಾಪಾರದ ವೇಳೆ ಬೀದಿ ವ್ಯಾಪಾರಿಗಳ ನಡುವಿನ ಸಂಘರ್ಷದಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಾಚನಾಲಯ ರಸ್ತೆ ವ್ಯಾಪ್ತಿಯಲ್ಲಿ ತಳ್ಳುಗಾಡಿ ನಿಲ್ಲಿಸಿ ವ್ಯಾಪಾರ ನಡೆಸುವ ವಿಚಾರವಾಗಿ ಶನಿವಾರ ಸಂಜೆ ನಡೆದ ಗಲಾಟೆ ಹಲ್ಲೆ-ಪ್ರತಿಹಲ್ಲೆಯ ಆರೋಪಗಳಿಗೆ ಕಾರಣವಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳು ದಾಖಲಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ತರಕಾರಿ ಮಾರುಕಟ್ಟೆ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ರಸ್ತೆ ವ್ಯಾಪಾರದ ವಿಚಾರಕ್ಕೆ ಸಂಘರ್ಷನಗರದ ವಾಚನಾಲಯ ರಸ್ತೆ ಪ್ರದೇಶದಲ್ಲಿ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಿವೆ. ಈ ಸಂದರ್ಭದಲ್ಲಿ ತಳ್ಳುಗಾಡಿಗಳನ್ನು ಎಲ್ಲಿ ನಿಲ್ಲಿಸಿ ವ್ಯಾಪಾರ ನಡೆಸಬೇಕು ಎಂಬ ವಿಚಾರವಾಗಿ ಬೀದಿ ವ್ಯಾಪಾರಿಗಳ ನಡುವೆ ವಾಗ್ವಾದ ಉಂಟಾಗಿ ಅದು ಸಂಘರ್ಷಕ್ಕೆ ತಿರುಗಿದೆ ಎನ್ನಲಾಗಿದೆ. ಘಟನೆಯಲ್ಲಿ ಪುನೀತ್, ಸ್ವಾಮಿ ನಾಯಕ್ ಮತ್ತು ರಾಜು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಮೂವರ ವಿರುದ್ಧ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದ ಆರೋಪಗಳ ಕುರಿತು ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.ರಸ್ತೆ ಒತ್ತುವರಿ ಸಮಸ್ಯೆಗೆ ಇನ್ನೆಷ್ಟು ದಿನ ಮೌನ?ವಾಚನಾಲಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಮತ್ತು ರಸ್ತೆಯ ಭಾಗಗಳಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಹಬ್ಬದ ಸಂದರ್ಭಗಳಲ್ಲಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾದಾಗ ವಾಹನ ಸವಾರರು ಮತ್ತು ಪಾದಚಾರಿಗಳು ಕಿರಿದಾದ ಜಾಗದಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಈ ಸಮಸ್ಯೆಯ ಕುರಿತು ಈ ಹಿಂದೆ ಮಾಧ್ಯಮಗಳ ಮೂಲಕ ನಗರಸಭೆ ಮತ್ತು ಪೊಲೀಸ್ ಇಲಾಖೆಯ ಗಮನ ಸೆಳೆಯಲಾಗಿದ್ದರೂ, ಶಾಶ್ವತ ಪರಿಹಾರ ದೊರೆತಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.ಹಬ್ಬದ ವೇಳೆ ಸಂಚಾರಕ್ಕೆ ತೊಂದರೆ; ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಗ್ರಹಹಬ್ಬ ಹರಿದಿನಗಳ ಸಂದರ್ಭದಲ್ಲಿ ರಸ್ತೆ ಬದಿಯ ವ್ಯಾಪಾರ ಹೆಚ್ಚಾಗುವುದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಪ್ರಮುಖ ಆಕ್ಷೇಪವಾಗಿದೆ. ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದರ ಜೊತೆಗೆ, ಮುಖ್ಯ ರಸ್ತೆ ಹಾಗೂ ಪಾದಚಾರಿ ಮಾರ್ಗಗಳು ಅತಿಕ್ರಮಣದಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪರ್ಯಾಯ ವ್ಯಾಪಾರ ವಲಯ ಅಥವಾ ಸೂಕ್ತ ಮೈದಾನಗಳಲ್ಲಿ ತಾತ್ಕಾಲಿಕ ಮಳಿಗೆಗಳ ವ್ಯವಸ್ಥೆ ಕಲ್ಪಿಸಿದರೆ, ವ್ಯಾಪಾರಿಗಳಿಗೂ ಅನುಕೂಲವಾಗಲಿದೆ ಮತ್ತು ಸಾರ್ವಜನಿಕರ ಸಂಚಾರ ಸಮಸ್ಯೆಯೂ ತಗ್ಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಸಚಿವರ ಭರವಸೆ ಜಾರಿಗೆ ಬರಲಿ: ಒತ್ತಾಯರಸ್ತೆ ಬದಿ ವ್ಯಾಪಾರಿಗಳ ಸ್ಥಳಾಂತರ ಹಾಗೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಕುರಿತು ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಈ ಹಿಂದೆ ನೀಡಿದ್ದ ಭರವಸೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ರಸ್ತೆ ಬದಿ ಹೋಟೆಲ್ಗಳಿಗೆ ಫುಡ್ ಕೋರ್ಟ್ ವ್ಯವಸ್ಥೆ ಕಲ್ಪಿಸುವ ವಿಚಾರವೂ ಚರ್ಚೆಯಲ್ಲಿದ್ದು, ಈ ಕುರಿತು ಸ್ಪಷ್ಟ ಯೋಜನೆ ರೂಪಿಸಿ ಜಾರಿಗೆ ತರಬೇಕು ಎಂಬ ಬೇಡಿಕೆ ಕೇಳಿಬಂದಿದೆ. ನಗರದ ವ್ಯಾಪಾರ ವ್ಯವಸ್ಥೆಯನ್ನು ಸುಧಾರಿಸುವಾಗ ವ್ಯಾಪಾರಿಗಳ ಹಿತಾಸಕ್ತಿ ಮತ್ತು ಸಾರ್ವಜನಿಕರ ಸುರಕ್ಷತೆ ಎರಡನ್ನೂ ಸಮಾನವಾಗಿ ಪರಿಗಣಿಸಬೇಕು. ಕೇವಲ ತಾತ್ಕಾಲಿಕ ಕ್ರಮಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ; ಸಂಚಾರ ನಿರ್ವಹಣೆ, ನಿಯಮಿತ ತಪಾಸಣೆ ಮತ್ತು ಪರ್ಯಾಯ ವ್ಯಾಪಾರ ಸ್ಥಳಗಳ ವ್ಯವಸ್ಥೆ ಅಗತ್ಯ ಎಂದು ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.ಸಂಘರ್ಷ ಮರುಕಳಿಸದಂತೆ ಕ್ರಮ ಕೈಗೊಳ್ಳಲಿ
ವಾಚನಾಲಯ ರಸ್ತೆ ಮತ್ತು ತರಕಾರಿ ಮಾರುಕಟ್ಟೆ ಸುತ್ತಮುತ್ತ ಉಂಟಾಗಿರುವ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈಗ ಸ್ಥಳೀಯ ಆಡಳಿತದ ಮುಂದಿರುವ ಸವಾಲಾಗಿದೆ. ವ್ಯಾಪಾರ ಸ್ಥಳಗಳ ಗೊಂದಲ, ರಸ್ತೆ ಒತ್ತುವರಿ ಮತ್ತು ಸಂಚಾರ ಅಡಚಣೆಗಳಿಗೆ ಸೂಕ್ತ ವ್ಯವಸ್ಥೆ ರೂಪಿಸದಿದ್ದರೆ ಇಂತಹ ವಾಗ್ವಾದಗಳು ಮತ್ತೆ ಸಂಭವಿಸುವ ಆತಂಕವಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ನಗರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಪರಿಶೀಲನೆ ನಡೆಸಿ, ವ್ಯಾಪಾರಿಗಳಿಗೆ ನಿಯಮಬದ್ಧ ಸ್ಥಳಾವಕಾಶ ಕಲ್ಪಿಸುವುದರ ಜೊತೆಗೆ ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಸಂಚಾರವನ್ನು ಸುಗಮಗೊಳಿಸಬೇಕು. ಈಗಾಗಲೇ ನಡೆದಿರುವ ಗಲಾಟೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರೆಂದು ಸಾಬೀತಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.