ರಘುಪತಿ ಭಟ್‌ಗೆ ಪರ್ಯಾಯ ವ್ಯವಸ್ಥೆ: ಸುನಿಲ್ ಕುಮಾರ್ ಭರವಸೆ

KannadaprabhaNewsNetwork | Updated : May 14 2024, 10:47 AM IST

ಸಾರಾಂಶ

ಹಲವಾರು ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಭಾವನೆಗಳ ಜೊತೆ ಗೆಳೆಯನಾಗಿ ನಾನಿದ್ದೇನೆ, ಆದರೆ ಪಕ್ಷದ ವಿರುದ್ಧ, ಪಕ್ಷ ಬಿಟ್ಟು ಅವರು ತೆಗೆದುಕೊಳ್ಳುವ ತೀರ್ಮಾನದ ಜೊತೆ ನಾನಿಲ್ಲ ಎಂದು ಸ್ಪಷ್ಟಪಡಿಸಿದರು.

 ಉಡುಪಿ :  ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸುವ ಮಾಜಿ ಶಾಸಕ ರಘುಪತಿ ಭಟ್ ಅವರೊಂದಿಗೆ ಪಕ್ಷದ ವರಿಷ್ಠರು ಮಾತುಕತೆ ಮಾಡಿ, ಸ್ಪರ್ಧೆ ಕೈಬಿಡುವಂತೆ ಮಾಡಲಾಗುತ್ತದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.

ತಮ್ಮ ಆತ್ಮೀಯರಾಗಿರುವ ರಘುಪತಿ ಭಟ್ ಮನವೊಲಿಕೆಗೆ ಅವರ ಮನೆಗೆ ಸೋಮವಾರ ಆಗಮಿಸಿದ ಸುನಿಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ದುಡುಕಿನ ತೀರ್ಮಾನ ತೆಗೆದುಕೊಳ್ಳಬೇಡಿ ಎಂದು ಭಟ್ಟರಿಗೆ ಹೇಳಿದ್ದೇನೆ, ಅವರು ಹಲವಾರು ಭಾವನಾತ್ಮಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಭಾವನೆಗಳ ಜೊತೆ ಗೆಳೆಯನಾಗಿ ನಾನಿದ್ದೇನೆ, ಆದರೆ ಪಕ್ಷದ ವಿರುದ್ಧ, ಪಕ್ಷ ಬಿಟ್ಟು ಅವರು ತೆಗೆದುಕೊಳ್ಳುವ ತೀರ್ಮಾನದ ಜೊತೆ ನಾನಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಸಭಾ ಚುನಾವಣೆಯಂತೆ ಪರಿಷತ್ ಚುನಾವಣೆಯಲ್ಲೂ ಪಕ್ಷದ ಪರ ಕೆಲಸ ಮಾಡಬೇಕು ಎಂದು ವಿನಂತಿಸಿದ್ದೇನೆ, ಇನ್ನೂ 2 - 3 ದಿನ ಅವಕಾಶ ಇದೆ, ಆದರೆ ಅವರು ನಿರ್ಧಾರ ಬದಲಿಸುತ್ತಾರೆ ಎಂಬ ವಿಶ್ವಾಸ ಇಲ್ಲ ಎಂದ ಸುನಿಲ್ ಕುಮಾರ್, ಅವರ ನಿರ್ಧಾರದ ಬಗ್ಗೆ ಪಕ್ಷದ ವರಿಷ್ಠರಿಗೆ, ರಾಜ್ಯಾಧ್ಯಕ್ಷರಿಗೆ ಮಾಹಿತಿ ನೀಡುತ್ತೇನೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. 

ಮೈತ್ರಿ ಸಮಸ್ಯೆ:

ಟಿಕೆಟ್ ಹಂಚಿಕೆಗಾಗಿ ಜೆಡಿಎಸ್ ಜೊತೆ ಮೈತ್ರಿಯಿಂದ ಸಹಜವಾಗಿ ಕರಾವಳಿಗೆ ಸಮಸ್ಯೆಯಾಗಿದೆ, ಆದರೆ ಪಕ್ಷಕ್ಕಾಗಿ ಕೆಲ ಅನಿವಾರ್ಯ ತೀರ್ಮಾನಗಳು ಆಗಬೇಕಾಗುತ್ತದೆ. ಟಿಕೆಟ್ ಹಂಚಿಕೆಯಲ್ಲಿ ಪಕ್ಷ ಒಂದು ಬಾರಿ ತೀರ್ಮಾನ ಕೈಗೊಂಡ ಮೇಲೆ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಟಿಕೆಟ್ ಕೊಡುವವನೂ ಅಲ್ಲ, ಭರವಸೆ ಕೊಡುವವನೂ ಅಲ್ಲ, ಎಲ್ಲ ತೀರ್ಮಾನವನ್ನು ರಾಜ್ಯ ಮತ್ತು ರಾಷ್ಟ್ರ ನಾಯಕರು ತೆಗೆದುಕೊಳ್ಳುತ್ತಾರೆ. ನಮ್ಮ ಪಕ್ಷದಲ್ಲಿ ಮಾತುಕತೆ ಮೂಲಕವೇ ಎಲ್ಲ ವ್ಯವಸ್ಥೆ ಸರಿಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Share this article