ರಕ್ತ ಉತ್ಪಾದನೆಗೆ ಪರ್ಯಾಯ ಮಾರ್ಗಗಳು ಇಂದಿಗೂ ಸಿಕ್ಕಿಲ್ಲ: ಅಮೋಲ್ ಜೆ. ಹಿರೇಕುಡಿ

KannadaprabhaNewsNetwork |  
Published : Jan 23, 2025, 12:47 AM IST
ಮ | Kannada Prabha

ಸಾರಾಂಶ

ರಕ್ತದಾನ ಶ್ರೇಷ್ಠ ಅನ್ನುವ ಮಾತಿಗಿಂತ ಆರೋಗ್ಯವಂತ ವ್ಯಕ್ತಿಯು ವರ್ಷಕ್ಕೊಮ್ಮೆ ಇಷ್ಟು ಪ್ರಮಾಣದಲ್ಲಿ ರಕ್ತದಾನ ಮಾಡಬೇಕು ಎಂದು ಕಡ್ಡಾಯಗೊಳಿಸಿದರೆ ಇನ್ನಷ್ಟು ಸೂಕ್ತ ಎಂದು ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಹೇಳಿದರು.

ಬ್ಯಾಡಗಿ: ರಕ್ತ ಉತ್ಪಾದನೆಗೆ ಯಾವುದೇ ಪರ್ಯಾಯ ಮಾರ್ಗಗಳು ಇಂದಿಗೂ ಸಿಕ್ಕಿಲ್ಲ. ಒಬ್ಬರ ದೇಹದಿಂದ ಇನ್ನೊಬ್ಬರ ದೇಹಕ್ಕೆ ಪೂರೈಕೆ ಅನಿವಾರ್ಯ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಜೆ. ಹಿರೇಕುಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ನ್ಯಾಯಾಲಯದಲ್ಲಿ ಕಾನೂನು ಸಾಕ್ಷರತಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನ್ಯಾಯವಾದಿಗಳ ಸಂಘ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ದೇಶದ ಯುವಕರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವುದರಿಂದ ರಕ್ತ ಪೂರೈಕೆಯಾಗುತ್ತಿದೆ ಎಂದು ಹೇಳಿದರು.

ಕಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ರಕ್ತದಾನ ಶ್ರೇಷ್ಠ ಅನ್ನುವ ಮಾತಿಗಿಂತ ಆರೋಗ್ಯವಂತ ವ್ಯಕ್ತಿಯು ವರ್ಷಕ್ಕೊಮ್ಮೆ ಇಷ್ಟು ಪ್ರಮಾಣದಲ್ಲಿ ರಕ್ತದಾನ ಮಾಡಬೇಕು ಎಂದು ಕಡ್ಡಾಯಗೊಳಿಸಿದರೆ ಇನ್ನಷ್ಟು ಸೂಕ್ತ. ಆರೋಗ್ಯವಂತ ಯುವಕರ ಸಂಖ್ಯೆ ಇಳಿಮುಖವಾಗುತ್ತಿದೆ. ಹಾಗಾಗಿ ಇಂತಹ ದಿನಗಳು ಎದುರಾಗುವ ಕಾಲ ದೂರವಿಲ್ಲ ಎಂದರು.

ನಾರೋಗ್ಯಕರ ಜೀವನ ಶೈಲಿ ಬಿಡಿ: ಡಾ. ದೀಪ್ತಿ ಮಾತನಾಡಿ, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಜಗತ್ತಿನಲ್ಲಿ ಯಾವುದು ಇಲ್ಲ. ಆದರೆ ಇದನ್ನು ಮರೆತಿರುವ ಯುವ ಜನತೆ ದುಶ್ಚಟಗಳಿಗೆ ಬಲಿಯಾಗಿ ರಕ್ತದಾನ ಸಹ ಮಾಡದಂತಹ ಸ್ಥಿತಿಗೆ ಬಂದು ತಲುಪುತ್ತಿರುವುದು ನೋವಿನ ಸಂಗತಿ. ಆಹಾರ ಪದ್ಧತಿ, ಅನಾರೋಗ್ಯಕರ ಜೀವನ ಶೈಲಿ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯಿಂದ ಯುವಜನರು ಚಿಕ್ಕ ವಯಸ್ಸಿನಲ್ಲಿಯೇ ಹಲವು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಅವರ ದೇಹದಲ್ಲಿನ ರಕ್ತ ಸಹ ನಿರುಪಯುಕ್ತವಾಗುತ್ತಿದೆ. ಆದ್ದರಿಂದ ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ: ಇದೇ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ವತಿಯಿಂದ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಜರುಗಿತು. ಸಂಘದ ಅಧ್ಯಕ್ಷ ಶಂಕರ ಬಾರ್ಕಿ ಮಾತನಾಡಿ, ದೇಶಕ್ಕೆ ನಾಡಿಗೆ ಅವಶ್ಯವಿರುವ ಅನ್ನ ಮತ್ತು ಶಿಕ್ಷಣ ದಾಸೋಹ ಒದಗಿಸಿದ ಶ್ರೀಗಳ ಸಾಧನೆ ಪ್ರಶಂಸನೀಯ. ನಾಡಿನ ಕೋಟ್ಯಂತರ ಮಕ್ಕಳು ಅವರ ನೆರಳಿನಲ್ಲಿ ಇಂದಿಗೂ ಬದುಕುತ್ತಿರುವುದು ಸಾಕ್ಷಿಯಾಗಿದೆ ಎಂದರು.

25ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಪತ್ರಕರ್ತರ ಸಂಘದ ಸದಸ್ಯರಿಗೆ ನ್ಯಾಯಾಲಯದ ವತಿಯಿಂದ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.

ಆರೋಗ್ಯ ಇಲಾಖೆ ಡಿ.ಎನ್. ಚಂದ್ರಶೇಖರ, ಶಶಿಕುಮಾರ ಶಿವಮೊಗ್ಗಿ, ಕಮತದಾರ, ಹಿರಿಯ ನ್ಯಾಯವಾದಿಗಳಾದ ಎಫ್.ಎಂ. ಮುಳಗುಂದ, ಎಂ.ಜೆ. ಮುಲ್ಲಾ, ಪ್ರಭು ಶೀಗಿಹಳ್ಳಿ, ಭಾರತಿ ಕುಲಕರ್ಣಿ, ಪ್ರಕಾಶ ಬನ್ನಿಹಟ್ಟಿ ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ