ಯೋಗ-ಧ್ಯಾನ, ಸಂಸ್ಕಾರಗಳ ಮೂಲಕ ಪ್ರತಿಯೊಬ್ಬರೂ ಕೂಡ ಸದೃಢರಾಗಬೇಕು

KannadaprabhaNewsNetwork | Published : Jan 23, 2025 12:47 AM

ಸಾರಾಂಶ

ಬದುಕುವುದಷ್ಟೇ ಮುಖ್ಯವಲ್ಲ ಬದುಕಿನೊಟ್ಟಿಗೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಕಾರ್ಯಗಳಾಗಬೇಕು. ತಮ್ಮ ಓದು - ಬರಹ - ಸಮಾಜ ಚಿಂತನೆಯಿಂದ ನೂರು ವಸಂತಗಳನ್ನು ಪೂರೈಸಿರುವ ಎಂ.ಬಿ. ವೀರಭದ್ರಪ್ಪ ಅವರು ನಮಗೆ ಆದರ್ಶವಾಗಿದ್ದಾರೆ. ಅವರ ಮಾನವೀಯ ಬದುಕನ್ನು ನಾವು ಕಂಡುಂಡು ಮಾನಸಿಕ ನೆಮ್ಮದಿಗಳನ್ನು ಮಾನವೀಯ ಪರವಾಗಿ ಆಲೋಚಿಸುತ್ತಾ ಸದೃಢವಂತಾಗಿ ಪ್ರತಿಯೊಬ್ಬರೂ ಬಾಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಯೋಗ-ಧ್ಯಾನ ಮತ್ತು ಸಂಸ್ಕಾರಗಳ ಮೂಲಕ ಪ್ರತಿಯೊಬ್ಬರೂ ಕೂಡ ಸದೃಢರಾಗಬೇಕು ಎಂದು ಅಜ್ಜೀಪುರ ಶ್ರೀ ಮಠದ ಶ್ರೀನಂದೀಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಹೊಸಮಠ ಸಭಾಂಗಣದಲ್ಲಿ ನಡೆದ ಶತಾಯುಷಿ ಎಂ.ಬಿ.ವೀರಭದ್ರಪ್ಪವರ ಶತವರ್ಷ ಸಂಭ್ರಮ ಎಂಬ ನೂರನೇ ವರ್ಷದ ಅಪೂರ್ವ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಆಶೀರ್ವದಿಸಿ ಮಾತನಾಡಿದ ಅವರು,

ಆ ಮೂಲಕ ಮೊಬೈಲ್ ಸಂಸ್ಕೃತಿಗೆ ಸಿಲುಕಿರುವ ಮಕ್ಕಳನ್ನ ನಾಳಿನ ಪ್ರಜೆಗಳಾಗಿ ರೂಪಿಸುವಲ್ಲಿ ಯಶಸ್ಸಾದರೆ ಭವಿಷ್ಯದ ದಿನಗಳು ಸಾರ್ಥಕವಾಗುತ್ತವೆ ಎಂದರು.

ಬದುಕುವುದಷ್ಟೇ ಮುಖ್ಯವಲ್ಲ ಬದುಕಿನೊಟ್ಟಿಗೆ ಮಾನವೀಯ ಸಂಬಂಧಗಳನ್ನು ಬೆಸೆಯುವ ಕಾರ್ಯಗಳಾಗಬೇಕು. ತಮ್ಮ ಓದು - ಬರಹ - ಸಮಾಜ ಚಿಂತನೆಯಿಂದ ನೂರು ವಸಂತಗಳನ್ನು ಪೂರೈಸಿರುವ ಎಂ.ಬಿ. ವೀರಭದ್ರಪ್ಪ ಅವರು ನಮಗೆ ಆದರ್ಶವಾಗಿದ್ದಾರೆ. ಅವರ ಮಾನವೀಯ ಬದುಕನ್ನು ನಾವು ಕಂಡುಂಡು ಮಾನಸಿಕ ನೆಮ್ಮದಿಗಳನ್ನು ಮಾನವೀಯ ಪರವಾಗಿ ಆಲೋಚಿಸುತ್ತಾ ಸದೃಢವಂತಾಗಿ ಪ್ರತಿಯೊಬ್ಬರೂ ಬಾಳಬೇಕೆಂದು ಕರೆ ನೀಡಿದರು.

ಸಾನಿಧ್ಯ ವಹಿಸಿದ್ದ ಹೊಸ ಮಠದ ಪೀಠಾಧಿಪತಿ ಶ್ರೀಚಿದಾನಂದ ಸ್ವಾಮೀಜಿ ಅವರು, ಎಂ.ಬಿ. ವೀರಭದ್ರಪ್ಪ ಅವರನ್ನು 100ನೇ ಹುಟ್ಟು ಹಬ್ಬದ ಅಂಗವಾಗಿ ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವಿಸಿದರಲ್ಲದೆ, ಮೂಲತಃ ವೀರಭದ್ರಪ್ಪನವರು ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದರಲ್ಲದೆ ಸರ್ಕಾರಿ ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅಪಾರ ಶಿಷ್ಯವರ್ಗವನ್ನು ಹೊಂದಿದ್ದ ಅವರು ನುಡಿದಂತೆ ನಡೆದು ನೂರು ವರ್ಷಗಳ ಸಾರ್ಥಕ ಜೀವನವನ್ನು ಅನುಭವಿಸಿದ್ದಾರೆ. ಅವರ ಮಾರ್ಗದರ್ಶನ ಸಮಾಜಕ್ಕೆ ಅನಿವಾರ್ಯ ಎಂಬ ಅನಿಸಿಕೆಯನ್ನು ಹಂಚಿಕೊಂಡರು.

ಯೋಗ ಶಿಕ್ಷಕ ಅಮೃತಯೋಗಿ, ಕಾವೇರಿ ಗ್ರಾಮೀಣ ಬ್ಯಾಂಕಿನ ನಾಗಭೂಷಣ್, ಅಂಬಿಕಾ ಪ್ರಭುಶಂಕರ್, ಕಸಾಪ ಸರಗೂರು ಘಟಕದ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ನಿವೃತ್ತ ಪ್ರೊ. ಕುಮಾರಸ್ವಾಮಿ, ಸಾಹಿತಿ ಪೂರಿಗಾಲಿ ಮರಡೇಶಮೂರ್ತಿ, ಹನೂರು ತಾಪಂ ಅಧ್ಯಕ್ಷ ಮುರುಡೇಶ್ ಅಜ್ಜಿಪುರ, ಮಂಜುನಾಥ್ ತಮ್ಮ ಅನಿಸಿಕೆ ಹಂಚಿಕೊಂಡರು.

ಗೆಜೆಟೇಯರ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ರಾಜೇಂದ್ರಪ್ಪ, ಶಿವಪ್ಪ, ತುಮಕೂರಿನ ಶಂಕರಪ್ಪ, ಬೆಂಗಳೂರಿನ ಬಸವರಾಜ್, ಮಂಜೇಶ್ ಕುಮಾರ್, ಮಹೇಶ್ ಕುಮಾರ್, ಎಲ್.ಐಸಿ ನಂಜುಂಡಸ್ವಾಮಿ, ನಗರ್ಲೆ ಶಿವಕುಮಾರ್, ವಿಕ್ರಾಂತ್ ನಂಜುಂಡಸ್ವಾಮಿ, ಶೇಖರ್, ಎಂ.ಎಸ್. ರುದ್ರಸ್ವಾಮಿ ಇದ್ದರು.

ಶರಣ ಮಂಡಲಿ ಸದಸ್ಯ ಪ್ರಭುಸ್ವಾಮಿ, ನೀಲಾಂಬಿಕ, ಮಹದೇವಮ್ಮ ವಚನಗಾಯನ ನಡೆಸಿದರು. ಎಂ.ಬಿ. ವೀರಭದ್ರಪ್ಪವರ ಸುಪುತ್ರರಾದ ಎಂ.ವಿ. ನಾಗೇಶ್ ಸ್ವಾಗತಿಸಿದರು, ಎಂ. ಮಂಜುನಾಥ್ ವಂದಿಸಿದರು.

Share this article