- ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಪವಾಡ ರಹಸ್ಯ ಬಯಲು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪವಿಜ್ಞಾನ ಬೆಳೆಯುತ್ತಿದ್ದರೂ ಮೌಢ್ಯತೆ ಸಂಕೋಲೆಯಿಂದ ನಾವಿನ್ನು ಹೊರ ಬಂದಿಲ್ಲ. ಸತ್ಯ ಸಮಾಜದಲ್ಲಿ ಕಹಿ ಎನಿಸು ತ್ತದೆ. ಮೌಡ್ಯ ಬಿತ್ತುವವರಿಗಿಂತಲೂ ಮೌಢ್ಯದ ಬೆನ್ನು ಹತ್ತುವವರೇ ಹೆಚ್ಚಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ಪುರಭವನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ‘ಯುವ ವೈಜ್ಞಾನಿಕ ದಿನ’ ಆಚರಣೆ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ವಿದ್ಯಾವಂತರಿದ್ದೇವೆ, ಬುದ್ದಿವಂತರಿದ್ದೇವೆ ಆದರೆ, ಪ್ರಜ್ಞಾವಂತ ರಾಗುವಲ್ಲಿ ಸೋತಿದ್ದೇವೆ. ಮೋಸ ಮಾಡುವವರಿಗಿಂತಲೂ ಮೋಸ ಹೋಗುವವರೇ ಸಮಾಜಕ್ಕೆ ಹೆಚ್ಚು ಅಪಾಯಕಾರಿ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಮೌಢ್ಯ ನಿಂತ ನೀರು, ವಿಜ್ಞಾನ ಚಲಿಸುವ ನೀರು. ಮನಸ್ಸಿನ ದುರ್ಬಲವೇ ಮೌಢ್ಯಕ್ಕೆ ಕಾರಣ’ ಎಂದರು.ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಉಪನ್ಯಾಸ ನೀಡಿ ‘ಸ್ವಾಮಿ ವಿವೇಕಾನಂದರು ಒಂದು ಧರ್ಮ, ಜಾತಿಗೆ ಸೀಮಿತ ರಾಗದೆ ಮನುಷ್ಯತ್ವನ್ನು ಪ್ರತಿಪಾಧಿಸಿದ ವಿಶ್ವಸಂತರಾಗಿದ್ದಾರೆ. ಭಾರತವನ್ನು ಎಚ್ಚರಿಸಿದ ಮೊದಲ ಸಂತ, ಅವರು ಹೇಳಿದ ‘ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬ ಮಾತುಗಳು ಕೆಲವರಿಂದ ಅಪಾರ್ಥ, ಅಪವಾಕ್ಯವಾಗಿ ಬಳಸಲಾಗಿದೆ. ವಿವೇಕಾನಂದರ ವೈಚಾರಿಕ ನುಡಿಗಳು ಎಲ್ಲಾ ಕಾಲಘಟ್ಟದ ಯುವಜನರಿಗೆ ಸ್ಪೂರ್ತಿ ನೀಡುವ ವೇದವಾಕ್ಯ. ವಿವೇಕಾನಂದ ಮತ್ತು ಕುವೆಂಪು ವಿಚಾರಧಾರೆ ನಾವೆಲ್ಲ ಅಳವಡಿಸಿಕೊಳ್ಳಬೇಕಾಗಿದೆ. ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ರಾಷ್ಟ್ರೀಯ ಯುವದಿನದಂದು ಮೌಢ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಅವರಿಗೆ ರಾಜ್ಯ ಮಟ್ಟದ ಎಚ್.ನರಸಿಂಹಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್ ಹೊಸೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಮತ್ತು ಸಂತ ಜೋಸೆಫರ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಉಪಾಧ್ಯಕ್ಷೆ ಗೌರಿ ಪ್ರಸನ್ನ, ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ , ಹಿರಿಯ ಮುಖಂಡ ಮಡಬೂರು ರಾಜೇಂದ್ರ, ಕೆಪಿಎಸ್‌ನ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಶಿವಾನಂದ, ಪ್ರಾಂಶುಪಾಲ ಕಮಲ್ ಬಾಬು, ಪರಿಷತ್‌ನ ಜಗದೀಶ್ ಎಚ್.ಎಸ್., ಜಿನೇಶ್ ಇರ್ವತ್ತೂರು ಸೇರಿದಂತೆ ಇತರರಿದ್ದರು.