ಹಕ್ಕುಪತ್ರ ನೀಡಿದ್ದರೂ ನಿವೇಶನ ಗುರುತಿಸಿಲ್ಲ

KannadaprabhaNewsNetwork | Published : Feb 20, 2024 1:47 AM

ಸಾರಾಂಶ

ಅಗಲಗುರ್ಕಿ ಪಂಚಾಯಿತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದಲ್ಲಿ ನಿವೇಶನ ರಹಿತರರಿಗೆ 10 ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಹಿರಂಗ ಸಭೆಯಲ್ಲಿ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಆದರೆ ಈವರೆಗೂ ನಿವೇಶನದ ಸ್ಥಳವನ್ನು ಗುರುತಿಸಿ ಮನೆಕಟ್ಟಿಕೊಳ್ಳಲು ಅವಕಾಶ ನೀಡಿಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮೈಲಪನಹಳ್ಳಿ ಮತ್ತು ಶ್ರೀರಾಮಪುರದ ಗ್ರಾಮಗಳ ನಿವೇಶನ ರಹಿತ ನೊಂದ ನಿವಾಸಿಗಳಿಗೆ ಸೂಕ್ತ ನಿವೇಶನದ ಸ್ಥಳಗುರುತಿಸಿ ಕೊಡಬೇಕೆಂದು ಆಗ್ರಹಿಸಿ ರಾಜ್ಯ ಗಡಿನಾಡು ರೈತಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ಜಿಲ್ಲಾ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಅಹೋರಾತ್ರಿ ಧರಣಿ ಅರಂಭಿಸಿದೆ.ಪ್ರತಿಭಟನೆಗೂ ಮುನ್ನ ಜಿಲ್ಲಾ ಕಚೇರಿಯಿಂದ ಮೆರವಣಿಗೆ ನಡೆಸಿದರಲ್ಲದೆ ಅಂಬೇಡ್ಕರ್ ವೃತ್ತದಲ್ಲಿ ಕೆಲಕಾಲ ರಸ್ತೆತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಭ್ರಷ್ಟ ಅಧಿಕಾರಿಗಳು ಮತ್ತು ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ನಿವೇಶನ ಗುರ್ತಿಸದೆ ಹಕ್ಕುಪತ್ರ

ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಬಿ. ಬಸವರಾಜು ಮಾತನಾಡಿ, ಅಗಲಗುರ್ಕಿ ಪಂಚಾಯಿತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದಲ್ಲಿ ನಿವೇಶನ ರಹಿತರರಿಗೆ 10ತಿಂಗಳ ಹಿಂದೆ ಗ್ರಾಮಪಂಚಾಯಿತಿ ಅಧಿಕಾರಿಗಳು ಬಹಿರಂಗ ಸಭೆಯಲ್ಲಿ ಹಕ್ಕುಪತ್ರನ್ನು ವಿತರಣೆ ಮಾಡಿದ್ದಾರೆ. ಈವರೆಗೂ ಅವರಿಗೆ ನಿವೇಶನದ ಸ್ಥಳಗುರುತಿಸಿ ಮನೆಕಟ್ಟಿಕೊಳ್ಳಲು ಅವಕಾಶ ನೀಡಿಲ್ಲ. ಇದರಿಂದಾಗಿ ಆಶ್ರಯವಿಲ್ಲದ ಕೆಲ ನಿವಾಸಿಗಳು ಜೀವನೋಪಾಯಕ್ಕಾಗಿ ಊರು ತೊರೆದು ಗುಳೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ತಾಲೂಕು ಆಡಳಿತ ಕೂಡಲೇ ತುರ್ತು ಕ್ರಮಗೊಳ್ಳಬೇಕು ಎಂದರುಇದೇ ಗ್ರಾಮದ ಸರ್ವೆನಂ.6ರಲ್ಲಿ ಎರಡು ಎಕರೆ ಸರ್ಕಾರಿ ಭೂಮಿಯಿದ್ದು ಇದರಲ್ಲಿ ಸುಮಾರು 80 ಮಂದಿ ಫಲಾನುಭವಿಗಳ ಪೈಕಿ ಕೆಲವರು ಮನೆಯನ್ನು ಕಟ್ಟಿಕೊಳ್ಳಲು ಪಾಯ ಹಾಕಿದ್ದಾರೆ. ಆದರೆ ಉಳಿದವರು ಮನೆ ಕಟ್ಟಿಕೊಳ್ಳಲು ಜಾಗ ಇಲ್ಲದೆ ಪರದಾಡುತ್ತಿದ್ದಾರೆ. ವಿಶೇಷವೆಂದರೆ ಅಗಲಗುರ್ಕಿ ಪಂಚಾಯ್ತಿಯಿಂದ 70-80 ಮಂದಿಗೆ ಹಕ್ಕುಪತ್ರ ನೀಡಿದ್ದರೂ ಸ್ಥಳ ಗುರುತಿಸಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ

ರೈತಸಂಘದಿಂದ ಈ ವಿಚಾರದಲ್ಲಿ ಸಾಕಷ್ಟು ಪತ್ರ ವ್ಯವಹಾರ ಮಾಡಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂಧಿಸಿ ಸಮಸ್ಯೆ ಇತ್ಯರ್ಥಪಡಿಸಿಲ್ಲ. ಮುದ್ದೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ಮೈಲಪನಹಳ್ಳಿ ಗ್ರಾಮದಲ್ಲಿ, ಕುಪ್ಪಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ, ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರಗಳನ್ನು ನೀಡುವ ಕೆಲಸವನ್ನು ಕೂಡಲೇ ಪೂರೈಸಬೇಕು ಎಂದು ರೈತಸಂಘ ಸಂಘ ಆಗ್ರಹಿಸುತ್ತದೆ ಎಂದರು.ಸಂಘದ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಸಂಘವು ನೀಡಿದ ಪತ್ರಗಳ ಸಂಬಂಧ ತಹಸೀಲ್ದಾರ್ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸುತ್ತೋಲೆ ಹೊರಡಿಸಿದ್ದು ನಂದಿ ಹೋಬಳಿ ಮೈಲಪನಹಳ್ಳಿ ಗ್ರಾಮ,ಕಂದವಾರ ಗ್ರಾಮಗಳಲ್ಲಿ ಪೂಟ್ ಖರಾಬ್ ಇದ್ದು ವಸತಿಗಳಿಗಾಗಿ ಕೋರಿ ಕರ್ನಾಟಕ ರಾಜ್ಯ ಗಡಿನಾಡು ರೈತಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿದೆ. ನಿಯಮಾನುಸಾರ ಪರಿಶೀಲಿಸಿ ಕಾನೂನು ರೀತಿಯಲ್ಲಿ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಗಳು ಸೂಚಿಸಿದ್ದಾರೆ. ಈವರೆಗೆ ಈ ಸಂಬಂಧ ತಾಲೂಕು ಕಂದಾಯ ಅಧಿಕಾರಿಗಳಾಗಲಿ, ತಾಪಂ ಇಒ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿ ಆಗಲಿ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.ನಿವೇಶನ ಇದ್ದರೂ ನೀಡುತ್ತಿಲ್ಲ

ಸರ್ಕಾರಿ ದಾಖಲಾತಿಯಲ್ಲಿ ನಿವೇಶನಕ್ಕೆ ಭೂಮಿ ಇದ್ದರೂ ಮೈಲಪನಹಳ್ಳಿ, ಶ್ರೀರಾಮಪುರ ಗ್ರಾಮದ ಪ್ರಭಾವಿ ನಾಯಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿವೇಶನಗಳಿಗೆ ಭೂಮಿ ಇಲ್ಲದಂತೆ ಮಾಡಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ನಿವೇಶನಗಳಿಗೆ ಭೂಮಿಯನ್ನು ಉಳಿಸಿ ಅವಕಾಶ ಮಾಡಿಕೊಡಬೇಕು ಎಂದರು.ಈ ವೇಳೆ ಸಂಘದ ಟಿ. ಮುನಿರಾಜು,ಮೈಲಪನಹಳ್ಳಿ ಮುನಿರಾಜು, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ನರಸಿಹಮೂರ್ತಿ, ನಾಗಮಣಿ, ಮುನಿನಾರಾಯಣಪ್ಪ, ನಾಗರಾಜ್, ಲಕ್ಷ್ಮಮ್ಮ, ಶಿವಪ್ಪ,ಮತ್ತಿತರ ನೂರಾರು ಸಂಖ್ಯೆಯ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಇದ್ದರು.

Share this article