ಅರಸೀಕೆರೆ ಬಸ್‌ ನಿಲ್ದಾಣಕ್ಕೆ ಮೂಲಭೂತ ಸೌಲಭ್ಯ ಇಲ್ಲ

KannadaprabhaNewsNetwork |  
Published : Feb 20, 2024, 01:47 AM IST
 ಪಾರ್ಕಿಂಗ್ ವೆವಸ್ಥೆಗಾಗಿ ಇರುವ ಜಾಗವನ್ನುಹೋಟೆಲ್ ಗೆ ಬಂದು ಹೋಗುವ ಗ್ರಾಹಕರಿಗಾಗಿ ಆ ಸ್ಥಳವನ್ನು ಮೀಸಲಿಟ್ಟು  ವಾಹನ ನಿಲುಗಡೆಗೆ ಅವಕಾಶವಿಲ್ಲದಂತೆ ಬಂದ್ ಮಾಡಿರುವುದು ಸೋಜಿಗದ ಸಂಗತಿ | Kannada Prabha

ಸಾರಾಂಶ

ಒಂದು ವರ್ಷಕ್ಕೆ ಕನಿಷ್ಠ ೨೦ ಕೋಟಿ ರು. ವರಮಾನ ತಂದು ಕೊಡುವ ಪ್ರತಿಷ್ಠಿತ ಅರಸೀಕೆರೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಮೂಲಭೂತ ಸೌಲಭ್ಯವಿಲ್ಲದೆ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಪ್ರಯಾಣಿಕರ ಪರದಾಟ । ರಾಜ್ಯಕ್ಕೆ ಹೆಚ್ಚು ಆದಾಯ ತಂದು ಕೊಟ್ಟಿದ್ದ ತಂಗುದಾಣದಲ್ಲಿ ಶೌಚಕ್ಕೆ ಸ್ಥಳವಿಲ್ಲ । ಅಧಿಕಾರಿಗಳ ನಿರ್ಲಕ್ಷ್ಯ

ಪಿ.ಶಾಂತಕುಮಾರ್‌

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಬಸ್ ನಿಲ್ದಾಣದಿಂದ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತಿದ್ದು ಪ್ರತಿ ದಿನ ಸುಮಾರು ಆರು ಲಕ್ಷಕ್ಕೂ ಹೆಚ್ಚು ಆದಾಯ ತಂದು ಕೊಡುತ್ತಿದೆ. ಒಂದು ವರ್ಷಕ್ಕೆ ಕನಿಷ್ಠ ೨೦ ಕೋಟಿ ರು. ವರಮಾನ ತಂದು ಕೊಡುವ ಪ್ರತಿಷ್ಠಿತ ನಿಲ್ದಾಣದಲ್ಲಿ ಪ್ರಯಾಣಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ.

ರಾಜ್ಯದ ರೈಲ್ವೆ ಜಂಕ್ಷನ್ ಕೇಂದ್ರಗಳಲ್ಲಿ ಒಂದಾಗಿರುವ ಅರಸೀಕೆರೆ ಪ್ರತಿದಿನ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರಯಾಣಿಕರು ಹಗಲು ರಾತ್ರಿ ಎನ್ನದೆ ಸಂಚಾರಿಸುತ್ತಿದ್ದು ಕಳೆದ ೧೦ ವರ್ಷಗಳ ಹಿಂದೆ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ವರಮಾನ ತಂದು ಕೊಡುವ ನಿಲ್ದಾಣ ಎಂದು ದಾಖಲೆ ನಿರ್ಮಿಸಿತ್ತು. ಇಂತಹ ನಿಲ್ದಾಣದಲ್ಲಿ ದೂರದಿಂದ ಬರುವ ಪ್ರಯಾಣಿಕರಿಗೆ ಮೂತ್ರ ವಿಸರ್ಜನೆಗೆ ಹೋಗಬೇಕೆಂದರೆ ಕಷ್ಟವಾಗಿದೆ. ಇಲ್ಲಿನ ಶೌಚಾಲಯ ಬಂದ್‌ ಆಗಿರುವುದರಿಂದ ಪ್ರಯಾಣಿಕರ ಪರದಾಟ ಹೇಳತೀರದ್ದಾಗಿದೆ. ಇಲ್ಲಿನ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸದೆ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಣ್ಣು ಮಕ್ಕಳ ಪರಿಸ್ಥಿತಿ ಏನು ಮಾಡಬೇಕು? ಅವರು ಮಲಮೂತ್ರ ವಿಸರ್ಜನೆಗೆ ಎಲ್ಲಿ ಹೋಗಬೇಕು? ಇಂಥ ಪರಿಸ್ಥಿತಿ ಯಾರಿಗೂ ಬೇಡ ಎಂದು ಪ್ರಯಾಣಿಕರು ಇಡೀ ಶಾಪ ಹಾಕುತ್ತಿದ್ದು ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಶೌಚಾಲಯವನ್ನು ಸರಿಪಡಿಸಿ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ವಿಫಲವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇಲ್ಲಿನ ಸ್ವಚ್ಛತೆ ಕೇಳುವಂತೆಯೂ ಹೇಳುವಂತೆ ಇಲ್ಲ. ಪ್ರಯಾಣಿಕರು ವಾಹನ ನಿಲ್ಲಿಸುತ್ತಾರೆ ಎಂದು ಬಸ್ ನಿಲ್ದಾಣದ ಪ್ರವೇಶದ್ವಾರವನ್ನು ಬಂದ್ ಮಾಡಲಾಗಿದೆ. ಇದರಿಂದ ವೃದ್ಧರು, ಅಂಗವಿಕಲರು ಬಸ್ ನಿಲ್ದಾಣಕ್ಕೆ ಬರಲು ಪರಿತಪಿಸಬೇಕಾಗಿದೆ ಪ್ರಯಾಣಿಕರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡುವುದು ಕನಿಷ್ಠ ಸೌಲಭ್ಯಗಳಲ್ಲಿ ಒಂದು ಎಂಬುದನ್ನೆ ಮರೆತಿರುವ ಅಧಿಕಾರಿಗಳು ಪಾರ್ಕಿಂಗ್ ವ್ಯವಸ್ಥೆಗಾಗಿ ಇರುವ ಜಾಗವನ್ನು ಹೋಟೆಲ್‌ಗೆ ಬಂದು ಹೋಗುವ ಗ್ರಾಹಕರಿಗಾಗಿ ಆ ಸ್ಥಳವನ್ನು ಮೀಸಲಿಟ್ಟು ವಾಹನ ನಿಲುಗಡೆಗೆ ಅವಕಾಶವಿಲ್ಲದಂತೆ ಬಂದ್ ಮಾಡಿರುವುದು ಸೋಜಿಗದ ಸಂಗತಿ.

ಹೆಚ್ಚು ವಾಹನಗಳ ನಿಲುಗಡೆಯಿಂದ ಪ್ರಯಾಣಿಕರಿಗೆ ತೊಂದರೆಯಾಗಿದ್ದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡಿ ಸಿಬ್ಬಂದಿಯನ್ನು ನೇಮಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲವೇ ಪಾರ್ಕಿಂಗ್‌ ಅನ್ನು ಗುತ್ತಿಗೆಗೆ ನೀಡಿ ನಡೆದು ಬರುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ವಾಹನ ನಿಲುಗಡೆ ಮಾಡುವಂತೆ ನಿಬಂಧನೆ ವಿಧಿಸಬೇಕು. ಪಾರ್ಕಿಂಗ್ ಗುತ್ತಿಗೆಗೆ ನೀಡಿದರೆ ಅದರಿಂದ ಸಂಸ್ಥೆಗೂ ಆದಾಯ ಬರುತ್ತದೆ. ಪ್ರಯಾಣಿಕರಿಗೂ ಅನುಕೂಲ ಕಲ್ಪಿಸಿದಂತೆಯಾಗುತ್ತದೆ.

ಈ ಹಿಂದೆ ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಯ್ಯ ನಿಲ್ದಾಣದ ಕಾಮಗಾರಿಗೆ ಅನುಮೋದನೆ ನೀಡಿದ್ದರು. ಯಾವುದೇ ಸರ್ಕಾರವಿರಲಿ ಅದು ಜಾರಿಗೆ ಬಂದೇ ಬರುತ್ತದೆ ಎಂದು ಹೇಳಿದದ್ದರು. ನಿಲ್ದಾಣ ಪುನರ್ ನಿರ್ಮಾಣಗೊಳ್ಳುವ ಸಂಭವವಿದೆ ಎಂಬುದು ಗೊತ್ತಿದ್ದರೂ ಲಂಚದ ಆಸೆಗಾಗಿ ಪದೇ ಪದೇ ಕೋಟ್ಯಂತರ ರು. ವೆಚ್ಚದಲ್ಲಿ ನಿಲ್ದಾಣವನ್ನು ಆಧುನೀಕರಿಸಲಾಗುತ್ತಿದೆ. ಆದರೂ ನಿಲ್ದಾಣ ಆಧುನೀಕರಣವಾಗುತ್ತಿಲ್ಲ. ಶೌಚಾಲಯವಂತೂ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮೂತ್ರಾಲಯದಲ್ಲಿ ಒಬ್ಬರು ಹೋದ ನಂತರ ಸ್ವಚ್ಛಗೊಳಿಸುವ ಯಾವುದೇ ಸೌಲಭ್ಯವಿಲ್ಲ. ಅಲ್ಲಿ ಹೋದವರು ಸಾಂಕ್ರಾಮಿಕ ರೋಗದ ಭೀತಿಯಿಂದಲೇ ಹೊರಬರುವ ಪರಿಸ್ಥಿತಿ ಇದೆ. ಸಾರಿಗೆ ಸಂಸ್ಥೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಶಾಪ ಹಾಕಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಾಸಕ ಕೆ.ಎಂ. ಶಿವಲಿಂಗಗೌಡ ಅವರೊಡನೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿ ನಿಲ್ದಾಣ ಕಿರಿದಾಗಿರುವುದರಿಂದ ಗ್ರಾಮೀಣ ಬಸ್ ನಿಲ್ದಾಣವನ್ನು ಪಕ್ಕದ ಪಶು ಆಸ್ಪತ್ರೆಗೆ ಬದಲಾಯಿಸಿ ಅರಸೀಕೆರೆ ಬಸ್ ನಿಲ್ದಾಣವನ್ನು ಬೆಂಗಳೂರು ನಿಲ್ದಾಣದಂತೆ ಸಂಪೂರ್ಣ ಆಧುನೀಕರಿಸಲಾಗುವುದು. ಅದಕ್ಕೆ ಈ ಬಜೆಟ್‌ನಲ್ಲಿ ಹಣ ಇಡಲಾಗುವುದು ಎಂದು ಹೇಳಿದ್ದರು. ಆದರೆ ಅದು ಇದುವರೆಗೂ ಈಡೇರಿಲ್ಲ. ಅರಸೀಕೆರೆ ಬಸ್ ನಿಲ್ದಾಣದ ಪ್ರವೇಶದ್ವಾರವನ್ನು ಪ್ರಯಾಣಿಕರು ವಾಹನ ನಿಲ್ಲಿಸುತ್ತಾರೆ ಎಂದು ಬಂದ್ ಮಾಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ