ಆಚರಣೆಯಲ್ಲಿ ವ್ಯತ್ಯಾಸವಿದ್ದರೂ ಧರ್ಮಗಳ ಅಂತಿಮ ಗುರಿ ಒಂದೇ

KannadaprabhaNewsNetwork |  
Published : Sep 26, 2024, 10:11 AM IST
ಚಿಕ್ಕಮಗಳೂರಿನಲ್ಲಿ  ಜಿಲ್ಲಾ ಶ್ರೀನಾರಾಯಣಗುರು ಸಮಿತಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೆರವಣಿಗೆಯನ್ನು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಆಚರಣೆಗಳಲ್ಲಿ ವ್ಯತ್ಯಾಸವಿದ್ದರೂ ಎಲ್ಲ ಧರ್ಮಗಳ ಅಂತಿಮ ಗುರಿ ಒಂದೇ. ಧರ್ಮ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾದರೆ ಸಾಕು ಎಂಬ ಯುಗ ಪುರುಷ ನಾರಾಯಣಗುರುಗಳ ತತ್ತ್ವಗಳನ್ನು ಪಾಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ವಿಪ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅಭಿಮತ

ಕನ್ನಡಪ್ರಭ ಪ್ರಭ ಚಿಕ್ಕಮಗಳೂರು

ಆಚರಣೆಗಳಲ್ಲಿ ವ್ಯತ್ಯಾಸವಿದ್ದರೂ ಎಲ್ಲ ಧರ್ಮಗಳ ಅಂತಿಮ ಗುರಿ ಒಂದೇ. ಧರ್ಮ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾದರೆ ಸಾಕು ಎಂಬ ಯುಗ ಪುರುಷ ನಾರಾಯಣಗುರುಗಳ ತತ್ತ್ವಗಳನ್ನು ಪಾಲಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ಜಿಲ್ಲಾ ಶ್ರೀ ನಾರಾಯಣಗುರು ಸಮಿತಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಮೆರವಣಿಗೆ ಉದ್ಘಾಟಿಸಿ ಮಾತನಾಡಿದ ಅವರು, ನಾರಾಯಣಗುರುಗಳು ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬುದನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು.

ಸ್ವಾಭಿಮಾನ ಹಾಗೂ ಸ್ವಸಾಮರ್ಥ್ಯದಿಂದ ಬದುಕುತ್ತಿರುವ ಆರ್ಯ, ಈಡಿಗ, ಈಳವ ಸಮಾಜ ಬಾಂಧವರು ಆರ್ಥಿಕವಾಗಿ ಹೆಚ್ಚು ಸಬಲರಾಗಿಲ್ಲ. ಆದರೂ ದೇಣಿಗೆ ಹಾಗೂ ಸಾಲ ರೂಪದಲ್ಲಿ ₹80 ಲಕ್ಷ ಹಣ ಒಗ್ಗೂಡಿಸಿ ಉಪ್ಪಳ್ಳಿಯ ಖಾಸಗಿ ಲೇ ಔಟ್‌ನಲ್ಲಿ ನಿವೇಶನ ಖರೀದಿಸಿ, ನೆಲಪಾಯವನ್ನು ಹಾಕಿರುವುದು ಸಂತೋಷದ ಸಂಗತಿ. ಸಮುದಾಯ ಭವನ ನಿರ್ಮಾಣಕ್ಕೆ ಕನಿಷ್ಟ ₹50 ಲಕ್ಷ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಸಲು ಪ್ರಯತ್ನಿಸುವ ಭರವಸೆ ನೀಡಿದರು.

ಸಾನಿಧ್ಯ ವಹಿಸಿದ್ದ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಸಂಘಟನೆಯಿಂದ ಬಲಿಷ್ಟರಾಗಿ, ವಿದ್ಯೆಯಿಂದ ಪ್ರಗತಿ ಹೊಂದಬೇಕು. ದೇವರನ್ನು ಎಲ್ಲೋ ಹುಡುಕಲು ಹೋಗುವ ಅಗತ್ಯವಿಲ್ಲ, ನನ್ನಲ್ಲೆ ಇದ್ದಾನೆ ಎಂಬ ಅರಿವಿನ ಕೊರತೆ ಇದೆ ಅಷ್ಟೇ ಎಂದರು.

ದೇವಸ್ಥಾನಗಳು ಮಾನವನ ಅಭಿವೃದ್ಧಿಗೆ ಒಂದು ಸಾಧನ. ದೇವಸ್ಥಾನಗಳು ಉಸಿರುಗಟ್ಟಿಸುವ ತಾಣಗಳಾಗದೆ ಮನಸ್ಸಿಗೆ ಮುದ ನೀಡುವಂತಾಗಬೇಕು. ದೇಗುಲದಲ್ಲಿ ಆಡಂಬರದ ಪ್ರದರ್ಶನ ಅಗತ್ಯವಿಲ್ಲ. ಕಟ್ಟಡ ಚಿಕ್ಕದಿರಲಿ, ಚೊಕ್ಕದಿರಲಿ, ತಿಳುವಳಿಕೆಯೆ ಜ್ಞಾನ, ಜ್ಞಾನದ ಅನುಭವವೇ ದೇವರು ಎಂದು ನುಡಿದರು.

ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನದ ಶ್ರೀ ಆರ್ಯ ರೇಣುಕಾನಂದಸ್ವಾಮೀಜಿ ಉಪಸ್ಥಿತರಿದ್ದರು. ಜಿಲ್ಲಾ ಶ್ರೀನಾರಾಯಣಗುರು ಸಮಿತಿ ಅಧ್ಯಕ್ಷ ದಾಸರಹಳ್ಳಿ ಎಂ. ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ಸಿ.ಆರ್. ಕುಮಾರ್, ಎಲ್.ಸಿ. ಚಂದ್ರು, ಅಯ್ಯಪ್ಪ, ರಾಜು, ಜಗದೀಶ್, ಚಂದ್ರು ಕೋಟೆ ಮೆರವಣಿಗೆಯ ಮುಂಚೂಣಿಯಲ್ಲಿದ್ದರು.ಶ್ರೀ ನಾರಾಯಣಗುರು ಭಾವಚಿತ್ರವನ್ನು ಪುಷ್ಪಾಲಂಕೃತ ಅಶ್ವಮೇಧ ರಥದಲ್ಲಿ ಇರಿಸಿ ನಗರದ ಪ್ರಮುಖ ರಸ್ತೆಗಳ ಮೂಲಕ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನಕ್ಕೆ ತಲುಪಲಾಯಿತು. ಪುರುಷರು ಬಿಳಿ ವಸ್ತ್ರ, ಪಂಚೆ, ಶಲ್ಯ, ಮಹಿಳೆಯರು ಹೊನ್ನಅಂಚಿನ ಬಿಳಿಸೀರೆ, ಹಣೆಗೆ ಭಸ್ಮ ತಿಲಕ ಧರಿಸಿ ಕೇರಳ ಸಂಪ್ರದಾಯಿಕ ಉಡುಗೆ,ತೊಡುಗೆಯೊಂದಿಗೆ ಹಳದಿ ಪತಾಕೆ ಹಿಡಿದು ಜಯ ಘೋಷದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕೇರಳ ಚಂಡೇವಾದನ ಹಾಗೂ ಡಿಜೆಗೆ ಯುವಜನತೆ ಹೆಜ್ಜೆ ಹಾಕಿ ಸಂಭ್ರಮಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!