ಮೂಡುಬಿದಿರೆ: ಸೂಕ್ಷ್ಮಜೀವಿಗಳನ್ನು ಕೇವಲ ರೋಗಕಾರಕರೆಂದು ನೋಡುವ ಬದಲು, ಅವು ಪ್ರಕೃತಿಯ ಸಮತೋಲನ ಮತ್ತು ಮಾನವ ಬದುಕಿಗೆ ನೀಡುವ ಕೊಡುಗೆ ಅರ್ಥಮಾಡಿಕೊಂಡಾಗ ಮಾತ್ರ ನಾವು ಆರೋಗ್ಯಕರ ಹಾಗೂ ಸಮೃದ್ಧ ಸಮಾಜ ಕಟ್ಟಬಹುದು ಎಂದು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಸಹಪ್ರಾಧ್ಯಾಪಕಿ ಡಾ. ದಿವ್ಯಶ್ರೀ ಎಂ.ಎಸ್. ಅಭಿಪ್ರಾಯಪಟ್ಟಿದ್ದಾರೆ.
ದೈನಂದಿನ ಜೀವನದಲ್ಲಿ ಹಾಲಿನ ಉತ್ಪನ್ನಗಳು-ಮೊಸರು, ಚೀಸ್, ಬೆಣ್ಣೆ ಮುಂತಾದವುಗಳ ತಯಾರಿಕೆಯಲ್ಲಿ ಸೂಕ್ಷ್ಮಜೀವಿಗಳೇ ಪ್ರಮುಖ ಪಾತ್ರವಹಿಸುತ್ತವೆ. ಕೃಷಿ ಕ್ಷೇತ್ರದಲ್ಲಿ ನೈಟ್ರೋಜನ್ ಸ್ಥಿರೀಕರಣ ಮಾಡುವ ಬ್ಯಾಕ್ಟೀರಿಯಾಗಳು ಬೆಳೆ ಉತ್ಪಾದನೆ ಹೆಚ್ಚಿಸಲು ಸಹಕರಿಸುತ್ತವೆ. ಪರಿಸರದಲ್ಲಿ ಜೀವಾವಶೇಷಗಳನ್ನು ಅಳಿಸಿ ಪ್ರಕೃತಿಯ ಚಕ್ರವನ್ನು ನಿರಂತರವಾಗಿಸುವುದು ಸಹ ಸೂಕ್ಷ್ಮಜೀವಿಗಳ ಕೆಲಸ. ಹವಾಮಾನ ಬದಲಾವಣೆ ನಿಯಂತ್ರಣ, ನವೀಕರಿಸಬಹುದಾದ ಶಕ್ತಿ ಉತ್ಪಾದನೆ, ಜೈವಿಕ ಗೊಬ್ಬರ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿಯೂ ಸೂಕ್ಷ್ಮಜೀವಿಗಳ ಕೊಡುಗೆ ಅನನ್ಯ ಎಂದರು.ಆಳ್ವಾಸ್ ಕಾಲೇಜಿನ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಎಂ. ಹಾಗೂ ಉಪನ್ಯಾಸಕಿ ಚೈತ್ರಾ ಇದ್ದರು. ಬಿಎಸ್ಸಿ ವಿದ್ಯಾರ್ಥಿನಿ ಬೃಂದಾ ಸ್ವಾಗತಿಸಿದರು. ವೈಷ್ಣವಿ ಅತಿಥಿಯನ್ನು ಪರಿಚಯಿಸಿ, ಫಾತಿಮಾ ಶಿಫ್ನಾ ವಂದಿಸಿ, ವೃದ್ಧಿ ಕೇಳ ನಿರೂಪಿಸಿದರು.