ಪುತ್ತೂರು: ದೇಶದ ಅಸಂಖ್ಯಾತ ಸಾಂಸ್ಕೃತಿಕ ವೈಭವವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ, ಭ್ರಾತೃತ್ವ ಬೆಳೆಸುವ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮ ೧೬ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ೧೦ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವರ ಅಭಿಮಾನಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಸುಮಾರು ೧೦೦ ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿಯೇ ಅತೀ ದೊಡ್ಡ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯುತ್ತಿದೆ ಎಂದರು.೧೦ ವರ್ಷಗಳ ಹಿಂದೆ ಪುತ್ತೂರಿನ ಸುದಾನದಲ್ಲಿ ಎರಡು ಬಾರಿ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಹಲವು ಕಡೆಗಳಲ್ಲಿ ಕಾರ್ಯಕ್ರಮ ನಡೆಸಲು ಬೇಡಿಕೆ ಇದ್ದರೂ ಡಾ. ಮೋಹನ್ ಆಳ್ವ ಅವರು ಪುತ್ತೂರಿನ ಅಭಿಮಾನದಿಂದ ಇಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಸುಮಾರು ೪೦೦ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ದೇಶದ ವಿಭಿನ್ನ ವೈಭವವನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಕಾರ್ಯಕ್ರಮವು ಕ್ಲಪ್ತ ಸಮಯದಲ್ಲಿಯೇ ಆರಂಭಗೊಳ್ಳಲಿದ್ದು, ಮೊದಲಿಗೆ ಒಂದು ಗಂಟೆ ಕಾಲ ಸಭಾ ಕಾರ್ಯಕ್ರಮವಿದ್ದು, ಬಳಿಕ ನಿರಂತರ ಮೂರು ಗಂಟೆಗಳ ಕಾಲ ದೇಶದ ಬೇರೆ ಬೇರೆ ರಾಜ್ಯಗಳ ನೃತ್ಯ ಪ್ರಾಕಾರಗಳನ್ನು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರಲಿದೆ ಎಂದರು.ಸುದ್ಧಿಗೋಷ್ಠಿಯಲ್ಲಿ ಡಾ. ಮೋಹನ್ ಆಳ್ವರ ಅಭಿಮಾನಿಗಳಾದ ದಂಬೆಕಾನ ಸದಾಶಿವ ರೈ, ನಿತ್ಯಾನಂದ ಶೆಟ್ಟಿ. ಶ್ರೀಪ್ರಸಾದ್, ಆಳ್ವಾಸ್ ಕಾಲೇಜ್‌ನ ಉಪನ್ಯಾಸಕಿ ಉಷಾ ಬಿ ಶೆಟ್ಟಿ ಇದ್ದರು.