ಹೆಮ್ಮಾಡಿಯ ಜನತಾ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜನೆ
ಕನ್ನಡಪ್ರಭ ವಾರ್ತೆ ಕುಂದಾಪುರನನ್ನ ವೃತ್ತಿ ಜೀವನದ 32 ವರ್ಷಗಳಲ್ಲೇ ಅತ್ಯಂತ ಮೆರಗು ನೀಡಿದ ಮತ್ತು ಮನಸ್ಸು ಸೆಳೆದ ಕ್ರೀಡಾಕೂಟವಾಗಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆತಿಥ್ಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟ ಹೊರಹೊಮ್ಮಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಹೇಳಿದರು.ಅವರು ಗುರುವಾರ ಉಡುಪಿ ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ವಲಯ ಹಾಗೂ ಕಿರಿಮಂಜೇಶ್ವರದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪ.ಪೂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 14 ಹಾಗೂ 17 ರ ವಯೋಮಾನದ ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪದ ಸಮಾರಂಭದಲ್ಲಿ ಮಾತನಾಡಿದರು.ಸರ್ಕಾರದಿಂದ ಸಿಗುವ ಅನುದಾನದ ಹತ್ತು ಪಟ್ಟು ಹೆಚ್ಚು ಹಣವನ್ನು ವಿನಿಯೋಗ ಮಾಡಿ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯಮಟ್ಟದ ಕ್ರೀಡಾ ಮೈದಾನದಂತೆ ಸಜ್ಜುಗೊಳಿಸಿದ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯ ಅಭಿನಂದನೀಯ. ಕ್ರೀಡಾಜ್ಯೋತಿಯೊಂದಿಗೆ ಅದ್ದೂರಿ ಮೆರವಣಿಗೆ ಮಾಡಿ ಇಲಾಖೆಯ ಕಲ್ಪನೆಯ ಸಾವಿರ ಪಟ್ಟು ಉತ್ಕೃಷ್ಟದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ ಎಂದರು.ಜನತಾ ಸಮೂಹ ಶಿಕ್ಷಣದ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು ಎಲ್ಲರನ್ನೂ ಒಗ್ಗೂಡಿಕೊಂಡು, ಏನೂ ತಪ್ಪುಗಳಾಗದಂತೆ ನಡೆಸಿಕೊಟ್ಟಿದ್ದಾರೆ. ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಜನತಾ ತಂಡದ ಸಹಕಾರ ಅವಿಸ್ಮರಣೀಯ. ಸ್ವಯಂಸೇವಕ ವಿದ್ಯಾರ್ಥಿಗಳು ಶಿಸ್ತಿನಿಂದ ತಮ್ಮ ಕೆಲಸವನ್ನು ಮಾಡಿದ್ದರಿಂದ ವ್ಯವಸ್ಥೆಯಲ್ಲಿ ಎಲ್ಲಿಯೂ ಲೋಪದೋಷಗಳಾಗಿಲ್ಲ ಎಂದು ಹೇಳಿದರು.ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ್ ಕುಮಾರ್ ಹಟ್ಟಿಯಂಗಡಿ ಮಾತನಾಡಿ, ಒಂದು ಶಿಕ್ಷಣ ಸಂಸ್ಥೆ ಇಂತಹ ದೊಡ್ಡ ಕಾರ್ಯಕ್ರಮ ಮಾಡಬೇಕಾದರೆ ಎದೆಗಾರಿಕೆ ಬೇಕು. ಇಲಾಖಾ ಕಾರ್ಯಕ್ರಮದಲ್ಲಿ ಅನೇಕ ಲೋಪದೋಷಗಳು ಎದುರಾಗುತ್ತದೆ. ಇವೆಲ್ಲವನ್ನೂ ಮೆಟ್ಟಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸುವ ಮೂಲಕ ಇಡೀ ಜಿಲ್ಲೆಯ ಗೌರವವನ್ನು ಹೆಚ್ಚಿಸಿದೆ. ಸವಾಲುಗಳನ್ನು ಎದುರಿಸುವುದೇ ಜನತಾದ ದೊಡ್ಡ ಸಾಧನೆ. ಮುಂದೆ ರಾಜ್ಯಮಟ್ಟದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುವ ಸೌಭಾಗ್ಯ ಸಿಗುವಂತಾಗಲಿ ಎಂದು ಹಾರೈಸಿದರು.ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಅಧ್ಯಕ್ಷತೆ ವಹಿಸಿ, ಕ್ರೀಡಾಕೂಟ ಯಶಸ್ಸಿಗೆ ಇಲಾಖೆ ಸಹಕಾರ ಖುಷಿ ಕೊಟ್ಟಿದೆ. ಜಿಲ್ಲಾಮಟ್ಟದ ಕ್ರೀಡಾಕೂಟ ನಮ್ಮ ಹೆಗಲಿಗೆ ಇಟ್ಟಾಗ ಯಶಸ್ವಿಯಾಗಿ ಗುರಿ ತಲುಪುವ ಭರವಸೆ ಇತ್ತು. ಆ ಭರವಸೆಯನ್ನು ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಈಡೇರಿಸಿದ್ದಾರೆ. ಜಿಲ್ಲಾ ದೈಹಿಕ ಶಿಕ್ಷಕರ ಸಹಕಾರ ಮರೆಯಲಸಾಧ್ಯ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಆಯೋಜನೆ ಮಾಡುವಷ್ಟು ಶಕ್ತಿ ತುಂಬಿದ್ದೀರಿ ಎಂದರು.ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕುಲಾಲ ಸಮಾಜ ಸುಧಾರಕ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಕುಲಾಲ್, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ಕುಸುಮಾಕರ್ ಶೆಟ್ಟಿ, ವಿಜಯ್ ಕುಮಾರ್ ಶೆಟ್ಟಿ, ಕಿಶನ್ ರಾಜ್ ಶೆಟ್ಟಿ, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಮಂಜುನಾಥ ಶೆಟ್ಟಿ, ಸತೀಶ್ ಬಾಡಾ, ವಿಜಯ ಕುಮಾರ್, ಚಂದ್ರಕಾಂತ್, ರವೀಂದ್ರ ನಾಯ್ಕ್, ನಿತ್ಯಾನಂದ ಶೆಟ್ಟಿ, ಸತ್ಯನಾರಾಯಣ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ಉಪಸ್ಥಿತರಿದ್ದರು.ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕ ಉದಯ್ ನಾಯ್ಕ್ ಸ್ವಾಗತಿಸಿ, ನಿರೂಪಿಸಿದರು.
--------ದೈಹಿಕ ಶಿಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲಉಡುಪಿ ಜಿಲ್ಲಾ ದೈಹಿಕ ಶಿಕ್ಷಕರ ಶ್ರಮ ಕಂಡಾಗ ಕಣ್ಣಲ್ಲಿ ನೀರು ಬರುತ್ತದೆ. ದೈಹಿಕ ಶಿಕ್ಷಕರ ಕೆಲಸ ಯಾರ ಕಣ್ಣಿಗೂ ಕಾಣುವುದಿಲ್ಲ. ದೈಹಿಕ ಶಿಕ್ಷಕರಿಗೆ ಸರಿಯಾದ ಸಹಕಾರ ಸಿಗದಿರುವ ಬಗ್ಗೆ ನನಗೆ ನೋವಿದೆ. ದೈಹಿಕ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಮತ್ತವರ ತಂಡದ ಶ್ರಮ ಹೃದಯ ತುಂಬಿದೆ. ಈ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಹೇಳಿದರು.