ಕನ್ನಡಪ್ರಭವಾರ್ತೆ ಮೂಡುಬಿದಿರೆ
ಕೇರಳದ ಸಾಂಸ್ಕೃತಿಕ ಪರಂಪರೆಯ ವೈವಿಧ್ಯವನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಟ್ಟ ಭವ್ಯ ಮೆರವಣಿಗೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು. ಕೇರಳದ ಸಾಂಪ್ರದಾಯಿಕ ವೇಷಭೂಷಣ, ಜನಪದ ಕಲೆ, ಶಾಸ್ತ್ರೀಯ ನೃತ್ಯ, ವಾದ್ಯ ಸಂಗೀತ ಹಾಗೂ ಆಚರಣೆಗಳ ಸೊಬಗನ್ನು ಮೆರವಣಿಗೆಯಲ್ಲಿ ಪ್ರಸ್ತುತಪಡಿಸಲಾಯಿತು.
ಮೆರವಣಿಗೆಯಲ್ಲಿ ಕಥಕಳಿ, ಮೋಹಿನಿಯಾಟ್ಟಂ ಮತ್ತು ಮಾವೇಲಿ ಪಾತ್ರಗಳ ಸಂಯೋಜಿತ ಪ್ರದರ್ಶನ ಗಮನ ಸೆಳೆಯಿತು. ಕೇರಳದ ಸಾಂಪ್ರದಾಯಿಕ ವಾದ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಪಂಚವಾದ್ಯ ಮೆರವಣಿಗೆಗೆ ವಿಶಿಷ್ಟ ಮೆರುಗು ನೀಡಿತು. ಅದರೊಂದಿಗೆ ತಾಲಪೊಲಿ, ಪುಲಿಕಳಿ, ಚೆಂಡೆ, ಬಾಲಕ-ಬಾಲಕಿಯರ ಸಾಂಸ್ಕೃತಿಕ ಸಂಯೋಜಿತ ಪ್ರದರ್ಶನ, ಕಾವಡಿ, ಒಪ್ಪನ, ಕೋಲ್ಕಳಿ, ಕಲರಿ ಮೊದಲಾದ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಮೂಡಿಬಂದವು. ಕೇರಳದ ಉತ್ತರ ಭಾಗದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ತೆಯ್ಯಂ ವಿವಿಧ ರೂಪಗಳಲ್ಲಿ ಪ್ರಸ್ತುತವಾಯಿತು. ಥಾಬೋಲಂ, ಗರುಡನ್ ಹಾಗೂ ಪೂರ್ಣ ತಿರುವಾತಿರ ಪ್ರದರ್ಶನಗಳು ಮೆರವಣಿಗೆಯ ಮತ್ತಷ್ಟು ಪ್ರಮುಖ ಆಕರ್ಷಣೆಗಳಾಗಿದ್ದವು. ಹೀಗೆ ಕೇರಳದ ಶಾಸ್ತ್ರೀಯ, ಜನಪದ ಹಾಗೂ ಆಚರಣಾಧಾರಿತ ಕಲೆಗಳ ವೈವಿಧ್ಯವನ್ನು ವಿದ್ಯಾರ್ಥಿಗಳು ಕಲಾತ್ಮಕವಾಗಿ ಕಟ್ಟಿಕೊಟ್ಟರು.ಕೇರಳದ ವಿವಿಧ ಪ್ರದೇಶಗಳ ವಿಶಿಷ್ಟ ಕಲಾ ಪರಂಪರೆಗಳನ್ನು ಪ್ರತಿನಿಧಿಸುವ ಕಾಯ್ಕೊಟ್ಟಿಕಲಿ, ಒಪ್ಪಣ, ಕೊಲ್ಕಳಿ, ಕಲರಿ ಮತ್ತು ತೆಯ್ಯಂ ಸೇರಿದಂತೆ ಹಲವು ಕಲಾ ಪ್ರಕಾರಗಳು ವೇದಿಕೆಯಲ್ಲಿ ಮೂಡಿಬಂದವು.ಕಾರ್ಯಕ್ರಮ ಉದ್ಘಾಟಿಸಿದ ಮಲಯಾಳಂ ಚಿತ್ರರಂಗದ ನಟ ಹಾಗೂ ನಿರ್ದೇಶಕ ಬಿನು ಪಪ್ಪು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಭಾರತದ ವಿವಿಧ ಭಾಗಗಳ ವಿದ್ಯಾರ್ಥಿಗಳು ಕೇರಳದ ಸಂಸ್ಕೃತಿಯನ್ನು ಒಟ್ಟಾಗಿ ಪ್ರಸ್ತುತಪಡಿಸಿರುವುದು ದೇಶದ ಸಾಂಸ್ಕೃತಿಕ ವೈವಿಧ್ಯತೆಯ ಪ್ರತಿಬಿಂಬವಾಗಿದೆ ಎಂದರು.ಉದ್ಯಮಿ ಮುಸ್ತಾಫ, ಪ್ರಮುಖರಾದ ಅಕ್ಷಯ ಜೈನ್, ನೌಷಧ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಫಾವಜ್ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಇದ್ದರು. ಫೆನಿಲ್ಡಾ ನಿರೂಪಿಸಿ, ಕೆಝಿಯಾ ಮೇರಿ ಜಾರ್ಜ ಸ್ವಾಗತಿಸಿ, ಆರಂಟಾ ವಂದಿಸಿದರು.